ಕೌಶಲ್ಯದ ಕೊರತೆಯಿಂದ ವಿದ್ಯಾರ್ಥಿಗಳು ಅವಕಾಶ ವಂಚಿತ : ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಬೇಸರ

Mysore Saint Philomena's College graduation ceremony
Published on

ಮೈಸೂರು: ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ದೇಶದ ವಿದ್ಯಾರ್ಥಿಗಳಲ್ಲಿ ಕೌಶಲ್ಯದ ಕೊರತೆ ಹೊಂದಿದ್ದು, ಇದರಿಂದ ಉದ್ಯೋಗ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂದು ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಬೇಸರ ವ್ಯಕ್ತಪಡಿಸಿದರು.

ನಗರದ ಬನ್ನಿಮಂಟಪದ ಸಂತ ಫಿಲೋಮಿನಾ ಕಾಲೇಜಿನ 10ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತಮ ಕೌಶಲ್ಯ ಹೊಂದಿರುವ ಕಾರಣಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶೇ.90 ರಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರ್ಣಗೊಂಡ ತಕ್ಷಣ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೆ, ನಮ್ಮಲ್ಲಿ ಈ ಸಂಖ್ಯೆ ಶೇ.13 ರಷ್ಟು ಮಾತ್ರ ಇದೆ. ಹೀಗಾಗಿ ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಉತ್ತಮ ಕೌಶಲ್ಯ ಬೆಳೆಸಿಕೊಳ್ಳಬೇಕು. ಕೌಶಲ್ಯ ಹೊಂದಿರುವವರ ಸಂಖ್ಯೆ ದೇಶದಲ್ಲಿ ಏರಿಕೆಯಾಗುವ ಅವಶ್ಯಕತೆ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ವರ್ಷಂಪ್ರತಿ ಏರಿಕೆಯಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಉದ್ಯೋಗ ಪಡೆಯುವ ಉದ್ದೇಶದಿಂದ ಮಾತ್ರ ಕಲಿಯಬಾರದು. ನಿಮ್ಮ ಜ್ಞಾನವನ್ನು ಬೆಳೆಸಿಕೊಳ್ಳುವ ಸಲುವಾಗಿ ಕಲಿಯಬೇಕು. ಜ್ಞಾನ ನಿಮಗೆ ಶಕ್ತಿಯನ್ನು ನೀಡುತ್ತದೆ ಹಾಗೂ ಸಮಾಜದಲ್ಲಿ ಗೌರವ ದೊರೆಯುವಂತೆ ಮಾಡುತ್ತದೆ. ಯಶಸ್ಸಿಗೆ ಸುಲಭ ದಾರಿಗಳು ಇಲ್ಲ, ಯಶಸ್ಸಿಗೆ ನಿಮ್ಮ ಪರಿಶ್ರಮ ಇರಲೇ ಬೇಕು ಎಂದು ಕರೆ ನೀಡಿದರು.

ಯಾವಾಗಲೂ ಸಕರಾತ್ಮಕ ಆಲೋಚನೆಗಳನ್ನು ಮುಂದಿಟ್ಟುಕೊಂಡು ಮುನ್ನಡೆಯಿರಿ. ಸಮಸ್ಯೆಗಳು ಬದುಕಿನಲ್ಲಿ ಇದ್ದೇ ಇರುತ್ತದೆ. ಸಮಸ್ಯೆಗಳ ನಡುವೆಯೂ ಸಾಧನೆಯ ಕಡೆಗೆ ನಿಮ್ಮ ನೋಟವಿದ್ದರೆ ನೀವು ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಯನ್ನು ಹೊಂದಿರಬೇಕು. ಆ ಗುರಿಯನ್ನು ಸಾಧಿಸುವ ಕಡೆಗೆ ಗಮನ ಹರಿಸಬೇಕು. ಮತ್ತೊಬ್ಬರ ದೌರ್ಬಲ್ಯದ ಕಡೆಗೆ ಗಮನ ಹರಿಸದೆ ನಿಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯವನ್ನು ಅರಿತು ಮುನ್ನಡೆದರೆ ಯಶಸ್ವಿ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದು ಹೇಳಿದರು.

ಜ್ಞಾನಕ್ಕೆ ಸಮವಾದದ್ದು ಮತ್ತೊಂದು ಇಲ್ಲ, ಹಾಗಾಗಿ ವಿದ್ಯಾರ್ಥಿಗಳು ಜ್ಞಾನ ಸಂಪಾದನೆಯ ಕಡೆಗೆ ಆಸಕ್ತಿ ತೋರಬೇಕು. ಇದು ತಂತ್ರಜ್ಞಾನ ಯುಗವಾಗಿದ್ದು, ತಂತ್ರಜ್ಞಾನದ ಬೆಳವಣಿಗೆಯ ಪರಿಣಾಮದಿಂದ ಪ್ರತಿಯೊಂದು ವಿಷಯಗಳು ಸಾಕಷ್ಟು ಬೇಗ ಬದಲಾವಣೆ ಆಗುತ್ತಿದೆ. ಪ್ರಸ್ತುತ ಕೃತಕ ಬುದ್ಧಿಮತ್ತೆ (ಎಐ ಟೆಕ್ನಾಲಜಿ) ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಕೃತಕ ಬುದ್ಧಿಮತ್ತೆ ಬಳಸಿಕೊಳ್ಳುವ ಜತೆಗೆ ನಮ್ಮ ಬುದ್ಧಿವಂತಿಕೆಯನ್ನು ಸಹ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಕರೆ ನೀಡಿದರು.

ಚೆನ್ನೈನ ಎಲ್ ಆ್ಯಂಡ್ ಟಿ ವ್ಯವಹಾರ ವಿಭಾಗದ ಮುಖ್ಯಸ್ಥೆ ಎಂ.ಎಫ್. ಫೆಬಿನ್ ಮಾತನಾಡಿ, ಪದವಿ ಪೂರ್ಣಗೊಂಡ ಮಾತ್ರಕ್ಕೆ ನಿಮ್ಮ ಕಲಿಕೆ ಇಲ್ಲಿಗೆ ಮುಕ್ತಾಯಗೊಳ್ಳುವುದಿಲ್ಲ. ಕಲಿಕೆ ಎಂಬುದು ಜೀವನ ಪರ್ಯಂತ ಇರುತ್ತದೆ, ನಿರಂತರವಾಗಿ ಕಲಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಅಭಿಪ್ರಾಯಪಟ್ಟರು.

ಕೇವಲ ಸೈದ್ಧಾಂತಿಕ ಜ್ಞಾನದಿಂದ ಏನೂ ಪ್ರಯೋಜನವಿಲ್ಲ, ಸೈದ್ಧಾಂತಿಕ ಜ್ಞಾನದ ಜತೆಗೆ ಪ್ರಾಯೋಗಿಕ ವಿಧಾನ ಅವಶ್ಯಕ. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಸಾಕಷ್ಟು ಅವಕಾಶಗಳು ಇದ್ದು, ಆ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು.

ಕೇವಲ ಒಂದು ವಿಷಯ ತಿಳಿದುಕೊಂಡು ಆ ವಿಷಯಕ್ಕೆ ಮಾತ್ರ ಸೀಮಿತವಾಗಬೇಡಿ. ಇಂಜಿನಿಯರಿಂಗ್ ಪದವಿ ಪಡೆದವರು ಕೇವಲ ಇಂಜಿನಿಯರಿಂಗ್ ವಿಷಯ ಮಾತ್ರ ತಿಳಿದುಕೊಂಡರೆ ಸಾಲದು, ಹಣಕಾಸಿನ ವಿಚಾರ, ಆಡಳಿತ ಸೇರಿದಂತೆ ಪ್ರತಿಯೊಂದು ವಿಷಯಗಳ ಮಾಹಿತಿ ಹೊಂದಿದ್ದರೆ ಉತ್ತಮ ಎಂದರು.

ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಇಂದಿನ ವಿಷಯಗಳು ನಾಳೆಗೆ ಅಪ್ರಸ್ತುತವಾಗಿರುತ್ತದೆ. ಹಾಗಾಗಿ ಹೊಸ ವಿಷಯಗಳನ್ನು ಕಲಿಯುವ ಕಡೆಗೆ ವಿದ್ಯಾರ್ಥಿಗಳು ಆಸಕ್ತಿ ತೋರಬೇಕು. ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯ ಪರಿಣಾಮ ಇದೀಗ ಬೆರಳ ತುದಿಯಲ್ಲಿಯೇ ಎಲ್ಲ ಮಾಹಿತಿ ದೊರೆಯುತ್ತಿದ್ದು, ಈ ಮಾಹಿತಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭ 409 ಪದವಿ ಹಾಗೂ 202 ಸ್ನಾತಕೋತರ ಪದವಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 611 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 48 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮೈಸೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ಡಾ. ಬರ್ನಾಡ್ ಮೊರಾಸ್, ಗುರುಗಳಾದ ಆಲ್ಫ್ರೆಡ್ ಜಾನ್ ಮೆಂಡೋನ್ಸಾ, ಡಾ.ಲೂರ್ದು ಪ್ರಸಾದ್ ಜೋಸೆಫ್, ಜ್ಞಾನ ಪ್ರಗಾಸಂ, ಸಹಾಯಕ ಗುರುಗಳಾದ ಡೇವಿಡ್ ಸಗಾಯರಾಜ್, ಪ್ರಾಂಶುಪಾಲ ರವಿ ಜೆ.ಡಿ. ಸಾಲ್ಡಾನ್ಹಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net