

ಮೈಸೂರು: ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಆದಷ್ಟು ಬೇಗ ಚಾಲನೆ ನೀಡಲು ಕ್ರಮ ವಹಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ರನ್‌ವೇ ವಿಸ್ತರಣೆಗೆ ಸಂಬಂಧಿಸಿದಂತೆ ಜಲದರ್ಶಿನಿ ಅತಿಥಿಗೃಹದಲ್ಲಿ ಅಧಿಕಾರಿಗಳೊ ಂದಿಗೆ ಹಮ್ಮಿಕೊಂಡಿದ್ದ ಸಭೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರನ್‌ವೇ ವಿಸ್ತರಣೆಗೆ ಒಟ್ಟು 319 ಕೋಟಿ ರೂ. ಮಂಜೂರಾಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ 150 ಕೋಟಿ ರೂ. ಬಿಡುಗಡೆಯಾಗಿತ್ತು. ಈ ಸರ್ಕಾರದ ಅವಧಿಯಲ್ಲಿ ಮೊದಲ ಕಂತಿನಲ್ಲಿ 75 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 2ನೇ ಕಂತಿನಲ್ಲಿ 25 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಹೇಳಿದರು.
ಪ್ರಸ್ತುತ ರನ್‌ವೇ 1.75 ಕಿ.ಮೀ. ವಿಸ್ತೀರ್ಣ ಹೊಂದಿದ್ದು, ರನ್‌ವೇಯನ್ನು 1.75 ಕಿ.ಮೀ.ನಿಂದ 2.75 ಕಿ.ಮೀ. ವಿಸ್ತರಿಸಲಾಗು ವುದು. 2.75 ಕಿ.ಮೀ. ರನ್‌ವೇ ವಿಸ್ತರಣೆಗೆ ಒಟ್ಟು 240 ಎಕರೆ ಖಾಸಗಿ ಹಾಗೂ ಸರ್ಕಾರಿ ಜಾಗವನ್ನು ಭೂ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ರಾಜ್ಯ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಗೆ ಬಿಡುಗಡೆ ಮಾಡಿದ್ದ 150 ಕೋಟಿ ರೂ. ಅನುದಾನದಲ್ಲಿ 160 ಎಕರೆ ಖಾಸಗಿ ಜಾಗವನ್ನು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 46.22 ಎಕರೆ ಖಾಸಗಿ ಜಾಗದ ಭೂ ಸ್ವಾಧೀನಕ್ಕೆ 90 ಕೋಟಿ ರೂ. ಅವಶ್ಯಕತೆ ಇತ್ತು. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಉಳಿದ ಜಾಗವು ಜಾಗವು ಸರ್ಕಾರಿ ಭೂಮಿಯಾಗಿದೆ. ಪ್ರತಿ ಎಕರೆಗೆ 1.50 ಕೋಟಿ ರೂ.ಪರಿಹಾರ ನೀಡಲಾಗುವುದು. ರನ್‌ವೇ ವಿಸ್ತರಣೆಗೆ ಗುರುತಿಸಿರುವ ಜಾಗದಲ್ಲಿ ಕಾಲುವೆ ಹಾದು ಹೋಗಿ ದ್ದು, ಅದಕ್ಕೆ ಪರಿಹಾರವಾಗಿ 76 ಕೋಟಿ ರೂ., ಕೆಪಿಟಿಸಿಎಲ್‌ಗೆ 68 ಕೋಟಿ ರೂ. ಪರಿಹಾರ ನೀಡಬೇಕಾಗಿದೆ ಎಂದರು.
2ನೇ ಹಂತದ ವಿಸ್ತರಣೆ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 3.5 ಕಿ.ಮೀ. ರನ್ ವೇ ನಿರ್ಮಾಣ ಮಾಡಲಾಗಿದೆ. ಶಿವಮೊಗ್ಗ ಮಾದರಿಯಲ್ಲಿ ಮೈಸೂರು ವಿಮಾನ ನಿಲ್ದಾಣದಲ್ಲೂ 3.5 ಕಿ.ಮೀ. ರನ್ ವೇ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕೆ ಎರಡನೇ ಹಂತದ ರನ್‌ವೇ ವಿಸ್ತರಣೆ ಸಂದರ್ಭ ಪ್ರತ್ಯೇಕವಾಗಿ 91 ಎಕರೆ ಜಾಗ ಭೂ ಸ್ವಾಧೀನ ಪಡಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಭದ್ರತೆ ಹಾಗೂ ಜನರಿಗೆ ಕಿರಿಕಿರಿ ಉಂಟಾಗುವುದನ್ನು ತಪ್ಪಿಸುವ ಸಲುವಾಗಿ ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ (ಮೈಸೂರು ವಿಮಾನ ನಿಲ್ದಾಣದ ರನ್ ವೇ ಹಾದು ಹೋಗುವ ಸ್ಥಳದಲ್ಲಿ) ನಿರ್ಮಿಸಲು ಉದ್ದೇಶಿಸಲಾಗಿದ್ದ ಅಂಡರ್‌ಪಾಸ್ ಯೋಜನೆ ಕೈಬಿಟ್ಟು, ರಸ್ತೆ ತಿರುವು ಮಾಡಲು ತೀರ್ಮಾನಿಸಲಾಗಿದೆ ಎಂದರು.
ಪ್ರಸ್ತುತ ಮೈಸೂರು-ನಂಜನಗೂಡು ಮಾರ್ಗ 23 ಕಿ.ಮೀ. ಹೊಂದಿದ್ದು, ರಸ್ತೆ ತಿರುವ ಯೋಜನೆ ಜಾರಿಯಾದರೆ ನಂಜನಗೂಡು ಪಯಣ 5 ಕಿ.ಮೀ. ಹೆಚ್ಚಾಗಲಿದೆ. ನಗರದ ದಳವಾಯಿ ಕೆರೆ ಮುಂಭಾಗ ಹೆದ್ದಾರಿಯು ತಿರುವು ಪಡೆದು ಟೋಲ್ ಪ್ಲಾಜಾ ಬಳಿಯಲ್ಲಿ ಹಳೆಯ ಹೆದ್ದಾರಿಗೆ ಸೇರಿಕೊಳ್ಳಲಿದೆ. ಮೈಸೂರು-ನಂಜನಗೂಡು ಹೆದ್ದಾರಿಯನ್ನು 6 ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. 6 ಪಥದ ಜತೆಗೆ ಎರಡು ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣಗೊಳ್ಳಲಿದೆ. ಅಂಡರ್‌ಪಾಸ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 510 ಕೋಟಿ ರೂ.ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ನೀಡಲಾಗುವುದು. ಎಚ್‌ಎಚ್‌ಎಐನವರು ಹೆದ್ದಾರಿ ತಿರುವು ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಹೆದ್ದಾರಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದರು.
ಸಭೆಯಲ್ಲಿ ಕೆಐಎಡಿಬಿ ಭೂ ಸ್ವಾಧೀನ ಅಧಿಕಾರಿ ಪ್ರಿಯದರ್ಶಿನಿ, ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಅನೂಪ್ ಹಾಗೂ ಇತರರು ಇದ್ದರು.