

ಮೈಸೂರು: ತಾಲೂಕಿನ ಜಯಪುರ ಹೋಬಳಿಯ ಗುಜ್ಜೇಗೌಡನಪುರ ಬಳಿ ಸೋಮವಾರ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಶಂಕಿತ ಆರೋಪಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ನಾಲ್ಕು ತಂಡಗಳನ್ನು ರಚಿಸಿದ್ದರು. ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ವಿವಿಧ ಕಡೆಗಳಿಗೆ ತೆರಳಿಗೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ನಡುವೆ ಶಂಕಿತ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಬಯಲಿಗೆ ಬರಲಿದೆ.
ಆರೋಪಿಗಳು ಸೋಮವಾರ ಗುಜ್ಜೇಗೌಡನಪುರದ ಬಳಿ ಕೇರಳ ಮೂಲದ ವ್ಯಾಪಾರಿ ಮಹಮ್ಮದ್ ಅಶ್ರಫ್ ಹಾಗೂ ಅವರ ಕಾರು ಚಾಲಕ ಸೂಫಿ ಮೇಲೆ ಹಲ್ಲೆ ನಡೆಸಿ 1.5 ಲಕ್ಷ ರೂ. ಹಣವನ್ನು ದೋಚಿ ಕಾರಿನಲ್ಲಿ ಪರಾರಿಯಾಗಿದ್ದರು. ತನಿಖೆ ನಡೆಸಿದ ಪೊಲೀಸರು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.