

ಮೈಸೂರು: ಮೈಸೂರಿನ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಗೌರವ ಸಲ್ಲಿಸಲು ಅವರ ಹೆಸರನ್ನು ನಗರದ ವರ್ತುಲ ರಸ್ತೆಗೆ ನಾಮಕರಣ ಮಾಡಿ ದೊಡ್ಡ ಫಲಕ ಅಳವಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.
ನಗರದ ಅಭಿವೃದ್ಧಿಯ ದೃಷ್ಟಿಯಿಂದ ಕೃಷ್ಣ ಅವರು ಬೆಂಗಳೂರು-ಮೈಸೂರು ಚತುಷ್ಪಥ ರಸ್ತೆ, ನಗರದಲ್ಲಿ ವರ್ತುಲ ರಸ್ತೆ ನಿರ್ಮಾಣ ಮಾಡಿದರು. ಮೈಸೂರನ್ನು ಪಾರಂಪರಿಕ ನಗರವಾಗಿ ಘೋಷಿಸಿದರು. ಮೈಸೂರಿನ ಅಭಿವೃದ್ಧಿಗೆ ಅವರು ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ಕಾರದಿಂದ ಸಕಲ ಸರ್ಕಾರಿ ಗೌರವದೊಂದಿಗೆ ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆ ನಡೆದಿದೆ. ಇದಕೋಸ್ಕರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ನಡೆ ಮಾತ್ರ ಖಂಡನೀಯ. ಕೃಷ್ಣ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸಲ್ಲಿಸಿದ್ದಾರೆ. ಆದರೆ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂತಾಪ ಹೇಳಲಿಲ್ಲ. ಕೃಷ್ಣ ಅವರು ಕಾಂಗ್ರೆಸ್‌ಗಾಗಿ ದುಡಿದಿಲ್ಲವೇ? ಸಾವಿನಲ್ಲಿ ರಾಜಕಾರಣ ವಾಡಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹೈಕಮಾಂಡ್ ಮಾಜಿ ಪ್ರಧಾನಿಗಳಾದ ವಿ.ಪಿ.ಸಿಂಗ್, ಪಿ.ವಿ. ನರಸಿಂಹರಾವ್, ಚಂದ್ರಶೇಖರ್, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಮೃತಪಟ್ಟ ಸಂದರ್ಭದಲ್ಲೂ ಸಂತಾಪ ಸೂಚಿಸಲಿಲ್ಲ. ಎಸ್.ಎಂ. ಕೃಷ್ಣ ಅಭಿವೃದ್ಧಿ ರಾಜಕಾರಣ ಮಾಡಿದವರು. ಎಂದೂ ದ್ವೇಷ ರಾಜಕಾರಣ ಮಾಡಲಿಲ್ಲ ಎಂದರು.
ರಾಜ್ಯದ ಐಟಿಬಿಟಿ ಕಂಪನಿಗಳು ಎಸ್.ಎಂ. ಕೃಷ್ಣ ಅವರಿಂದ ಸಾಕಷ್ಟು ಲಾಭ ಪಡೆದಿವೆ. ಆದರೆ, ಯಾರೊಬ್ಬರು ಸಹ ಅವರನ್ನು ಸ್ಮರಣೆ ಮಾಡಲಿಲ್ಲ. ಮೈಸೂರಲ್ಲಿ ಇನ್ಫೋಸಿಸ್ ಸ್ಥಾಪನೆಗೆ ಜಾಗ ನೀಡಿದವರು ಎಸ್.ಎಂ. ಕೃಷ್ಣ. ಮುಂಬರುವ ದಿನಗಳಲ್ಲಿ ಅವರು ಸ್ಮರಿಸಬೇಕು. ದೊಡ್ಡ ದೊಡ್ಡ ಕಂಪನಿಗಳು ಕೃಷ್ಣ ಅವರ ಹೆಸರಿನಲ್ಲಿ ಏನಾದರೂ ಮಾಡಬೇಕು ಎಂದು ಮನವಿ ಮಾಡಿದರು.
2ಎ ಮೀಸಲಾತಿ ಮುಗಿದ ಕತೆ. ಬೀದಿಗಿಳಿದು ಹೋರಾಟ ವಾಡುವುದರಲ್ಲಿ ಅರ್ಥವಿಲ್ಲ. ಸಂವಿಧಾನ ಮತ್ತು ಮೀಸಲಾತಿ ಬಗ್ಗೆ ಮಾತನಾಡುವ ಸವಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ತಾಕತ್ತು ಇದ್ದರೆ ಈ ಸಮಸ್ಯೆಗಳನ್ನು ಬಗೆಹರಿಸಬೇಕು. ಸಿದ್ದರಾಮಯ್ಯ ಭಾಷಣ ಮಾಡುವುದನ್ನು ಬಿಟ್ಟು ಜನರಿಗೆ ನ್ಯಾಯ ದೊರಕಿಸಿಕೊಡಬೇಕು. ಬಿಜೆಪಿಗೆ ಯಾವುದೇ ತತ್ವ, ಸಿದ್ಧಾಂತ ಇಲ್ಲ. ಎಲ್ಲದಕ್ಕೂ ಟೀಕೆ ಮಾಡುತ್ತಾರೆ. ಸ್ವಾಮೀಜಿಗಳು ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮಾಡಿದರೆ ಅಶಾಂತಿಗೆ ಕಾರಣವಾಗುತ್ತದೆ. ಪರಸ್ಪರ ಅಪನಂಬಿಕೆ ಬಿತ್ತಿದಂತಾಗುತ್ತದೆ ಎಂದು ಹೇಳಿದರು.