‘ರಿಲೋ ಪ್ಲೇಕ್’ ಅಳವಡಿಕೆಗೆ ಚಾಲನೆ

31 A
Published on

ಗೂಗಲ್ ಮ್ಯಾಪ್‌ನಲ್ಲಿ ಐತಿಹಾಸಿಕ ಸ್ಥಳ ಗುರುತಿಸುವ ಕಾರ್ಯ

ಮೈಸೂರು: ಯುವ ಬ್ರಿಗೇಡ್‌ಗೆ ಆರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಹಿತಿಗಳು, ಗಣ್ಯರು, ಪ್ರಮುಖ ಐಸಿಹಾಸಿಕ ಸ್ಥಳಗಳನ್ನು ಗೂಗಲ್ ಮ್ಯಾಪ್‌ನಲ್ಲಿ ತೋರಿಸುವ ‘ರಿಲೋ ಪ್ಲೇಕ್’ ಅಳವಡಿಕೆಗೆ ನಗರದಲ್ಲಿ ಚಾಲನೆ ನೀಡಲಾಯಿತು.
ವಾಣಿವಿಲಾಸ (ವಿವಿ) ಮೊಹಲ್ಲಾದಲ್ಲಿರುವ ರಾಷ್ಟ್ರಕವಿ ಕುವೆಂಪು ವಾಸವಾಗಿದ್ದ ಮನೆಗೆ ಅಳವಡಿಸಿರುವ ರಿಲೋ ಪ್ಲೇಕ್ (ಕೆಂಪು, ಹಳದಿ ಮಿಶ್ರಣ) ಅನ್ನು ಕುವೆಂಪು ಅವರ ಮಗಳು ತಾರಿಣಿ ಹಾಗೂ ಅಳಿಯ ಡಾ.ಚಿದಾನಂದಗೌಡ ಅವರು ಅನಾವರಣಗೊಳಿಸಿದರು.
ಅಂಕಣಕಾರ ಹಾಗೂ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ನಾಡಿನಲ್ಲಿ ಸಾಹಿತಿಗಳು, ಗಣ್ಯರು, ಐತಿಹಾಸಿಕ ಸ್ಥಳಗಳನ್ನು ಸುಲಭವಾಗಿ ಗೂಗಲ್‌ನಲ್ಲಿ ಗುರುತಿಸಲು ಸಹಕಾರಿಯಾಗುವಂತೆ ಜೋಡಣೆ ಮಾಡಲಾಗುತ್ತಿದೆ. ಇದಕ್ಕಾಗಿ ನಮ್ಮ ಯುವ ಬ್ರಿಗೇಡ್‌ನಿಂದ ತಜ್ಞರ ಸಲಹೆ, ಸಹಕಾರದಿಂದ 600 ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.
ಈ ಸ್ಥಳಗಳಲ್ಲಿ ವ್ಯಕ್ತಿ, ಸ್ಥಳದ ಮಹತ್ವವನ್ನು ತಿಳಿಸಿಕೊಡುವ ಮಾಹಿತಿ ನಮ್ಮ ‘ರಿಲೋ ಪ್ಲೇಕ್ ಡಾಟ್ ಕಾಮ್’ನಲ್ಲಿ ದೊರೆಯುತ್ತದೆ. ಅಲ್ಲದೇ ಅದರಲ್ಲಿ ಸಿಗುವ ಗೂಗಲ್ ಮ್ಯಾಪ್ ಮೂಲಕ ಆ ಸ್ಥಳಕ್ಕೆ ಪ್ರವಾಸಿಗರು ಭೇಟಿ ನೀಡಿ ನೋಡಲು ಅವಕಾಶವಾಗಲಿದೆ. ಮುಂದೆ ಮಹತ್ವ ಇದ್ದರೂ, ಹೆಚ್ಚು ಪ್ರಚಲಿತಕ್ಕೆ ಬಾರದ ಸ್ಥಳಗಳನ್ನು ಜೋಡಣೆ ಮಾಡುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಕನ್ನಡಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದ ಕೊಟ್ಟ ಕುವೆಂಪು ಅವರ ಮೈಸೂರು ನಿವಾಸದ ಬಗ್ಗೆ ಗೂಗಲ್ ಮ್ಯಾಪ್‌ನಲ್ಲಿ ಮಾಹಿತಿಯೇ ದೊರೆಯುತ್ತಿರಲಿಲ್ಲ. ಹಾಗಾಗಿ ಇಂತಹ ಸಾಹಿತಿಗಳ ಮನೆಗಳನ್ನು ಪ್ರಥಮ ಹಂತದಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಪ್ರಥಮ ದಿನ ರಾಜ್ಯದಲ್ಲಿ 60 ಸ್ಥಳಗಳನ್ನು ಗುರುತಿಸಿ ರಿಲೋ ಪ್ಲೇಕ್ ಅಳವಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತ, ಹಂತವಾಗಿ ಎಲ್ಲೆಡೆ ಸೇರ್ಪಡೆ ಮಾಡುವ ಕಾರ್ಯ ಮಾಡಲಾಗುವುದು ಎಂದರು.
ಇಂಗ್ಲೆಂಡ್‌ನಲ್ಲಿ ಸ್ಥಳ, ಗಣ್ಯರು ಉಳಿದುಕೊಳ್ಳುವ ಮನೆ, ಮರ ಸೇರಿ ಇನ್ನಿತರ ಮಾಹಿತಿ ನೀಡಲು ಬ್ಲೂ ಪ್ಲೇಕ್ ನಿಂದ ಪ್ರವಾಸಿಗರು ಸುಲಭವಾಗಿ ಗುರುತಿಸಲು ಸಹಕಾರಿಯಾಗಿದೆ. ಅದರಿಂದ ಪ್ರೇರಿತವಾಗಿ ರಾಜ್ಯದಲ್ಲಿಯೂ ಈ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು. ಪ್ರತಿ ಜಿಲ್ಲೆಯ ಅತಿ ವಿಶಿಷ್ಟವಾದ ಸ್ಥಳಗಳನ್ನು ಗುರುತಿಸುವುದಲ್ಲದೇ ಆ ಕುರಿತ ಸಂಪೂರ್ಣ ವಿವರವೂ ಇಲ್ಲಿ ಲಭ್ಯವಿದೆ. ತಮ್ಮೂರಿನ ವಿಶಿಷ್ಟ ಸ್ಥಳಗಳ ಕುರಿತಂತೆ ಪ್ಲೇಕ್ ಹಾಕಿಸಲು ಈ ಮೂಲಕ ವಿನಂತಿಸಿಕೊಳ್ಳುವುದೂ ಸಾಧ್ಯವಿದೆ. ತಜ್ಞರ ತಂಡ ಪರಿಶೀಲಿಸಿ ಅಲ್ಲಿ ಪ್ಲೇಕ್ ಹಾಕಿಸುವ ವ್ಯವಸ್ಥೆಯನ್ನೂ ಮಾಡುತ್ತದೆ. ಗೂಗಲ್ ಮ್ಯಾಪ್ ಜೋಡಿಸಿರುವುದರಿಂದ ಯಾವ ಸ್ಥಳಕ್ಕೆ ಬೇಕಿದ್ದರೂ ಯಾರ ಸಹಾಯವೂ ಇಲ್ಲದೇ ಸುಲಭವಾಗಿ ತಲುಪಬಹುದು ಎಂದು ವಿವರಿಸಿದರು. ನಗರದಲ್ಲಿ 15 ಸ್ಥಳಗಲ್ಲಿ ‘ರಿಲೋ ಪ್ಲೇಕ್’ ಅಳವಡಿಸಲಿದ್ದು, ಏಕೈಕ ಸಂಸ್ಕೃತ ದಿನಪತ್ರಿಕೆಯಾಗಿರುವ ‘ಸುಧರ್ಮ’ ಕಚೇರಿಗೂ ಅಳವಡಿಕೆ ಮಾಡಲಾಗುವುದು ಎಂದರು.

ಕುವೆಂಪು ಮನೆ ಮ್ಯೂಸಿಯಂ ಮಾಡಲು ಒಪ್ಪಿಗೆ
ಕುವೆಂಪು ಅವರ ಬಾಳಿ, ಬದುಕಿದ್ದ ಮೈಸೂರಿನ ಮನೆಯನ್ನು ಕುಪ್ಪಳ್ಳಿಯ ಮಾದರಿ ವಸ್ತು ಸಂಗ್ರಹಾಲಯ ಮಾಡಲು ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಕುವೆಂಪು ಅವರ ಮಗಳು ತಾರಿಣಿ ಹಾಗೂ ಅಳಿಯ ಡಾ.ಚಿದಾನಂದಗೌಡ ತಿಳಿಸಿದರು.
ಮೇರು ಸಾಹಿತಿ ಕುವೆಂಪು ಅವರಿದ್ದ ಮನೆ ಎಂದು ಸಾಕಷ್ಟು ಜನ ಬರುತ್ತಿದ್ದಾರೆ. ಹಾಗಾಗಿ ಈ ಮನೆಯನ್ನು ವಸ್ತು ಸಂಗ್ರಹಾಲಯ ಮಾಡಬೇಕು ಎಂದು ಸರ್ಕಾರ ಬಯಸಿತ್ತು. ಕೆಲ ಅಧಿಕಾರಿಗಳು ಬಂದು ನಮ್ಮೊಂದಿಗೆ ಚರ್ಚಿಸಿದ್ದರು. ಆದರೆ ಲಾಕ್‌ಡೌನ್‌ನಿಂದಾಗಿ ಆ ಪ್ರಸ್ತಾಪ ಅಲ್ಲಿಗೆ ನಿಂತಿದೆ ಎಂದು ‘ರಿಲೋ ಪ್ಲೇಕ್’ ಅಳವಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುವೆಂಪು ಅವರು ಮನೆಯನ್ನು ಗೂಗಲ್‌ನಲ್ಲಿ ಅಳವಡಿಕೆ ಮಾಡಿರುವುದು ಉತ್ತಮ ಕಾರ್ಯವಾಗಿದೆ. ಎಷ್ಟೋ ಜನರು ಕುವೆಂಪುನಗರಕ್ಕೆ ಹೋಗಿ ಕುವೆಂಪು ಮನೆ ಎಲ್ಲಿ ಎಂದು ಹುಡಕಾಟ ನಡೆಸಿದ ಪ್ರಸಂಗವೂ ಇದೆ. ಈಗ ಗೂಗಲ್‌ನಲ್ಲಿ ಮನೆ ಹುಡುಕಲು ನೆರವಾಗುವ ಕಾರ್ಯ ಮಾಡಿರುವ ಯುವ ಬ್ರಿಗೇಡ್ ತಂಡವನ್ನು ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಕುಪ್ಪಳ್ಳಿಯಂತೆ ಇಲ್ಲಿಯೂ ಸಮಿತಿಯೊಂದನ್ನು ರಚಿಸಿ ಅದರಲ್ಲಿ ಕುವೆಂಪು ಕುಟುಂಬದ ಇಬ್ಬರು ಸದಸ್ಯರು ಯಾವಾಗಲೂ ಇರುವಂತೆ ನೋಡಿಕೊಳ್ಳಬೇಕು ಎನ್ನುವ ಬೇಡಿಕೆ ಇಡಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net