ಮೈಸೂರು ರತ್ನ ಪ್ರಶಸ್ತಿ ಪ್ರದಾನ

Mysore Ratna Award Ceremony
Published on

ಮೈಸೂರು: ಪ್ರತಿಯೊಬ್ಬರು ಹಣ ಸಂಪಾದನೆಯ ಜತೆಗೆ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಎಸ್.ಇ. ಗಿರೀಶ್ ಹೇಳಿದರು.

ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ವತಿಯಿಂದ ಸರಸ್ವತಿಪುರಂನ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿ ಸಿದ್ದ ಮೈಸೂರು ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರೋಟರಿ, ಲಯನ್ಸ್ ಸೇರಿದಂತೆ ವಿವಿದ ಸಂಘ ಸಂಸ್ಥೆಗಳು ಸಮಾಜ ಸೇವಾ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ. ದಾನ ಮಾಡಲು ಲಕ್ಷ, ಕೋಟಿ ರೂ. ಅಗತ್ಯ ಇಲ್ಲ. 1 ರೂ. ನೀಡಿದರೂ ಸಹ ದಾನವೇ. ದುಡಿಮೆಯಲ್ಲಿ ಶೇ.10 ರಷ್ಟು ಹಣವನ್ನು ದಾನ ಧರ್ಮ ಮಾಡಲು ಮೀಸಲಿಡುವುದು ಉತ್ತಮ ಎಂದರು.

18 ವರ್ಷಗಳ ಹಿಂದೆ ನಗರದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರ ಪ್ರಾರಂಭಿಸಿದೆ. ಪ್ರಸ್ತುತ ಜಿಲ್ಲೆಯ 180 ಆಸ್ಪತ್ರೆಗೆ ನಮ್ಮ ರಕ್ತ ನಿಧಿ ಕೇಂದ್ರದಿಂದ ಸೇವೆ ದೊರೆಯುತ್ತಿದೆ. ತಿಂಗಳಿಗೆ 2 ಸಾವಿರ ಜನರಿಗೆ ನಮ್ಮ ಕೇಂದ್ರದಿಂದ ರಕ್ತ ನೀಡಲಾಗುತ್ತಿದೆ ಎಂದು ಹೇಳಿದರು.

ನಂಜನಗೂಡಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಸಹಾಯಕ ಇಂಜಿನಿಯರ್ ಸೋಮು ಮಾತನಾಡಿ, ಪ್ರತಿಯೊಬ್ಬರು ಜೀವನದಲ್ಲಿ ಒಂದು ಗುರಿ, ಉದ್ದೇಶ ಇಟ್ಟುಕೊಂಡು ಬದುಕಬೇಕು. ಆಗ ಮಾತ್ರ ಬದುಕಿಗೆ ಒಂದು ಅರ್ಥ ಬರುತ್ತದೆ. ಪ್ರತಿಯೊಬ್ಬರು ಸೇವಾ ಮನೋಭಾವನೆ ಬೆಳೆಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರಾದ ಎಚ್. ಲೀಲಾವತಿ, ಡಾ.ಪ್ರೇಮಾ ರವಿ, ಎಸ್.ಇ. ಗಿರೀಶ್, ಡಾ.ಜೆ. ದುಂಡರಾಜ್, ಜೆ.ಎಸ್. ಶ್ರೀಧರ್ ರಾವ್, ಅಕ್ಷತಾ ಪಾಂಡವಪುರ, ಬಬಿತಾ ಬಸವರಾಜ್, ಶಶಕಾಂಕ್ ಭಾರದ್ವಾಜ್, ಎಸ್.ತೀರ್ಥಕುಮಾರಿ ಅವರಿಗೆ ಮೈಸೂರು ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ಅಧ್ಯಕ್ಷೆ ಡಾ.ಪ್ರೇಮಾ ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net