

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಬಹುಕಲೆಗಳ ರಂಗಿನ ಸಂಭ್ರಮ ಮೇಳೈಸಿತು.
ಮೈಸೂರು ರಂಗಾಯಣ ಆಯೋಜಿಸಿರುವ ಈ ರಂಗೋತ್ಸವದಲ್ಲಿ 4ನೇ ದಿನವೂ ಅದೇ ಸಡಗರ ಇಲ್ಲಿ ಎಲ್ಲೆಡೆ ಪಸರಿಸಿತು. ನಾಟಕಗಳ ಖದರ್, ಸಿನಿಮಾಗಳ ಝಲಕ್, ಜಾನಪದ ಕಲೆಗಳ ಸೊಗಡು ಇಲ್ಲಿ ಅನಾವರಣಗೊಂಡಿತು.
ಸೂರ್ಯಾಸ್ತವಾಗುತ್ತಿದ್ದಂತೆ ಕಿಂದಗಿಜೋಗಿ ವೇದಿಕೆಯಲ್ಲಿ ಜಾನಪದ ನೃತ್ಯಲೋಕವೇ ಬಿಚ್ಚಿಕೊಂಡಿತ್ತು. ಕಡೂರು ತಾಲೂಕಿನ ಹಡಗಲು ಗ್ರಾಮದ ಕೆ.ಎಂ.ಅಣ್ಣಪ್ಪ ಮತ್ತು ತಂಡದವರು ಡೊಳ್ಳು ಕುಣಿತವನ್ನು ಸೊಗಸಾಗಿ ಪ್ರಸ್ತುತಪಡಿಸಿದರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕದಲಗೆರೆ ಗ್ರಾಮದ ರವಿ ಮತ್ತು ತಂಡದವರು ಪಟ ಕುಣಿತವನ್ನು ಪ್ರದರ್ಶಿಸಿದರು.
ಭೂಮಿಗೀತ ರಂಗವೇದಿಕೆಯಲ್ಲಿ ಪ್ರಸ್ತುತಗೊಂಡ ‘ಜಂಪ್’ ಬಹುಭಾಷಾ ನಾಟಕಕ್ಕೆ ಉತ್ತಮ ಸ್ಪಂದನೆ ದೊರೆಯಿತು. ಹಿಂದಿ, ಇಂಗ್ಲಿಷ್ ಮಿಶ್ರಿತ ನಾಟಕಕ್ಕೆ ಪ್ರೇಕ್ಷಕರು ತಲೆದೂಗಿದರು. ಮಾನಸಿಕ ಖಿನ್ನತೆ, ಮಾನಸಿಕ ಒತ್ತಡ, ಸಾಮಾಜಿಕ ವಿಷಯಗಳು ಇನ್ನಿತರ ವಿಷಯಗಳ ಮೇಲೆ ನಾಟಕ ಬೆಳಕು ಚೆಲ್ಲಿತು.
ಬಹುಮಹಡಿ ಕಟ್ಟಡದ ಮೇಲಿನಿಂದ ಆತ್ಮಹತ್ಯೆಗೆ ಪ್ರಯತ್ನಿಸುವ ಶ್ರೀಮಂತ ಮನೆತನದ ಮಹಿಳೆಯನ್ನು ಆಟೋ ವಾಲಾ ರಕ್ಷಣೆ ಮಾಡುತ್ತಾನೆ. ತದನಂತರ ಅವರಿಬ್ಬರ ನಡುವೆ ಮುಕ್ತ ಮಾತಿನ ಹರಟೆ ಹೊರಹೊಮ್ಮುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ವ್ಯವಸ್ಥೆ, ರಾಜಕೀಯ, ಕಾರ್ಪೋರೇಟ್ ವಂಚನೆಯ ಮುಖ, ವ್ಯಕ್ತಿಯೊಳಗಿ ತಲ್ಲಣಗಳು ಸೇರಿದಂತೆ ಇಡೀ ಸಾಮಾಜಿಕ ವ್ಯವಸ್ಥೆಯನ್ನೇ ಎರಡು ಗಂಟೆ ನಾಟಕದಲ್ಲಿ ಅನಾವರಣಗೊಳಿಸಲಾಗಿದೆ.
ನಟಿ ವಿದುಷಿ ಚಡ್ಡಾ ಮತ್ತು ನಟ ಸಂದೀಪ್ ಶಿಖರ್ ನಡುವೆ ಹಾಸ್ಯದೊಂದಿಗೆ ಸಾವು ಮತ್ತು ಜೀವನದ ಪ್ರತಿ ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತವೆ. ಕೇವಲ ಇಬ್ಬರು ಕಲಾವಿದರ ಅಭಿನಯ, ಸುದೀರ್ಘ ಸಂಭಾಷಣೆ ಪ್ರೇಕ್ಷಕರಿಗೆ ಎಲ್ಲಿಯೂ ನಿರಾಸೆ, ಬೇಸರವನ್ನು ಉಂಟು ಮಾಡುವುದಿಲ್ಲ.
ಬದಲಿಗೆ ಚಿನಕುರುಳಿ ಹಾಸ್ಯ, ವಿಡಂಬನೆಯನ್ನು ಉಣಬಡಿಸಿತು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ ಇಡೀ ಸಭಾಂಗಣದಲ್ಲಿ ನೆರೆದಿದ್ದ ರಂಗಾಸಕ್ತರು ತದೇಕಚಿತ್ತದಿಂದ ವೀಕ್ಷಿಸಿದ್ದು ನಾಟಕದ ಗಟ್ಟಿತನ, ಉತ್ತಮ ನಟನೆಗೆ ಸಾಕ್ಷಿ.
ಕಿರುರಂಗಮಂದಿರದಲ್ಲಿ ಚಿಂದಬರ ರಾವ್ ಜಂಬೆ ನಿರ್ದೇಶನದ ಸಾಗರದ ಜಿ.ಎಸ್.ಭಟ್ ರಚನೆಯ ಕನ್ನಡ ನಾಟಕ ‘ಗ್ಲಾನಿ’ ಪ್ರದರ್ಶನಗೊಂಡಿತ್ತು. ಸಾಗರದ ಉದಯ ಕಲಾವಿದರು ಉತ್ತಮವಾಗಿ ಅಭಿನಯಿಸಿದರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು
ವನರಂಗದಲ್ಲಿ ಖಟಾರ ಮರಾಠಿ ನಾಟಕ ಪ್ರದರ್ಶನಗೊಂಡಿತು. ಮಹಾರಾಷ್ಟ್ರದ ಅಹಮದ್‌ನಗರದ ಅಪ್ಲ ಘರ್ ತಂಡದ ಕಲಾವಿದರು ಸೊಗಸಾಗಿ ಅಭಿನಯಿಸಿದರು. ಆದರೆ, ಪ್ರೇಕ್ಷಕರ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ.
ಕಲಾಮಂದಿರದಲ್ಲಿ ಚಾವುಂಡರಾಯ ನಾಟಕ ಪ್ರದರ್ಶನಗೊಂಡಿತು. ಎಚ್.ಕೆ.ಶ್ವೇತಾರಾಣಿ ನಿರ್ದೇಶನದಲ್ಲಿ ಜಯರಾಮ್ ರಾಯಪುರ ರಚನೆಯ ಈ ನಾಟಕವನ್ನು ಶೇಷಗಿರಿ ಗಜಾನನ ಯುವಕ ಮಂಡಳಿ ಕಲಾವಿದರು ಉತ್ತಮ ಅಭಿನಯದ ಮೂಲಕ ತೆರೆದಿಟ್ಟರು.
ಚಲನಚಿತ್ರೋತ್ಸವದಲ್ಲಿ ವಿದೇಶಿ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಿದವು. ಶ್ರೀರಂಗದಲ್ಲಿ ಗಾಜಾ(ಇಂಗ್ಲಿಷ್), ಆಫ್ಟರ್ ಸೆಲ್ಮಾ(ಇಂಗ್ಲಿಷ್), ಇಟ್ಸ್ ಲಿಮೋನ್(ಅರೇಬಿಕ್/ಹಿಬ್ರೂ) ಸಿನಿಮಾ ಪ್ರದರ್ಶನಗೊಂಡವು. ಎಲ್ಲ ಚಿತ್ರಗಳು ಹೌಸ್‌ಫುಲ್ ಆಗಿದ್ದು ವಿಶೇಷ.
ರಂಗಾಯಣದಲ್ಲಿ ಒಂದು ಸುತ್ತುಹಾಕಿ ಬಂದರೆ ಈ ಧ್ವನಿ ಮಾರ್ದನಿಸುತ್ತದೆ. ಶನಿವಾರ ವಾರಾಂತ್ಯ ದಿನವಾದರೂ ನಿರೀಕ್ಷಿತ ಮಟ್ಟದಲ್ಲಿ ಜನರು ಇರಲಿಲ್ಲ.
ಬಹುರೂಪಿ ರಂಗೋತ್ಸವ ರಂಗಾಸಕ್ತರು, ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತದೆ. ಬಹುರಂಗಿನ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಣ್ತುಂಬಿಕೊಳ್ಳಲು ಜನರು ಮುಗಿಬೀಳುತ್ತಾರೆ. ಇದರಿಂದ ರಂಗಾಯಣದ ಅಂಗಳದಲ್ಲಿ ಜನರು ಗಿಜಿಗುಡುತ್ತಾರೆ.
ಆದರೆ, ಈ ಸಲ ಇದಕ್ಕೆ ವ್ಯತರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ‘ಬಹುರೂಪಿ’ ಶುರುವಾಗಿ 4 ದಿನವಾದರೂ ಇನ್ನೂ ರಂಗು ಪಡೆದುಕೊಂಡಿಲ್ಲ. ಜನರು ಬರುತ್ತಿಲ್ಲ. ಚಿಣ್ಣರ ಸಂಭ್ರಮವೂ ಕಾಣುತ್ತಿಲ್ಲ.
ಸಂಕ್ರಾಂತಿ ಬದಲು ಈ ಸಲ ಮಾರ್ಚ್ 2ನೇ ವಾರದಲ್ಲಿ ಇದನ್ನು ಆಯೋಜಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ಪರೀಕ್ಷಾ ಸಮಯವಾಗಿರುವುದರಿಂದ ಮಕ್ಕಳು ಬರುತ್ತಿಲ್ಲ. ಅವರೊಂದಿಗೆ ಪಾಲಕರು ಬರುತ್ತಿಲ್ಲ. ಇದರಿಂದ ‘ಬಹುರೂಪಿ’ ಖಾಲಿ ಖಾಲಿ ಹೊಡೆಯುತ್ತಿದೆ