

ಮೈಸೂರು: ತುಳುನಾಡಿನ ಕಂಗೀಲು ನೃತ್ಯ ವೈಭೋಗ, ಜನಪದ ಕಾರ್ಯಕ್ರಮಗಳ ಸೊಗಡು, ಸಿನಿಮಾಗಳ ರಸಗವಳ, ನಾಟಕಗಳ ಪ್ರದರ್ಶನ…! ಇದು ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಮಂಗಳವಾರ ಕಂಡು ಬಂದ ಚಂದದ ದೃಶ್ಯಾವಳಿಗಳು.
ರಂಗೋತ್ಸವಕ್ಕೆ ಮಂಗಳವಾರ ಉತ್ತಮ ಪ್ರತಿಕ್ರಿಯೆ ದೊರೆಯಿತು. ರಂಗಾಯಣದ ಅಂಗಳದಲ್ಲಿ ‘ರಂಗ’ ಕಲೆ ಮೇಳೈಸಿತು. ಜನಪದ ಸಂಸ್ಕೃತಿ ಅನಾವರಣ, ವೈವಿಧ್ಯಮಯ ನಾಟಕಗಳು ಹಾಗೂ ಚಲನಚಿತ್ರ ಪ್ರದರ್ಶನ ಜನರನ್ನು ಆಕರ್ಷಿಸಿತು.
ಕಳೆದೆರಡು ದಿನಗಳಿಂದ ವರುಣನ ಅವಕೃಪೆಯಿಂದ ಜನರಿಲ್ಲದೆ ಭಣಗುಡುತ್ತಿದ್ದ ರಂಗಾಯಣದ ಅಂಗಳದಲ್ಲಿ ತುಸು ಜನಜಂಗುಳಿ ಕಂಡುಬಂದಿತು. ಮಳೆ ಬಿಡುವು ನೀಡಿದ ಪರಿಣಾಮ ರಂಗಾಸಕ್ತರು, ಹಿರಿಯರು, ಯುವ ಮನಸುಗಳು ತಮ್ಮ ಸ್ನೇಹಿತರು ಮತ್ತು ಹಿತೈಷಿಗಳ ಜತೆಗೂಡಿ ಜಮಾಯಿಸಿ ‘ರಂಗರಸ’ ಸವಿದರು.
ತಂಡೋಪತಂಡವಾಗಿ ಹೆಚ್ಚು ಜನರು ಭಾಗಿಯಾದ ಕಾರಣ ನಾಟಕ, ಜನಪದ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಖ್ಯವಾಗಿ ಜನಪದೋತ್ಸವದ ಕಂಗೀಲು ನೃತ್ಯ ಬಹುರೂಪಿ ರಂಗೋತ್ಸವಕ್ಕೆ ಹೊಸ ರಂಗು ತಂದಿತು. ಬಿ.ವಿ.ಕಾರಂತ ರಂಗ ಚಾವಡಿ ಆವರಣದಲ್ಲಿ ಕಂಗೀಲು ನೃತ್ಯ ಪ್ರದರ್ಶನ ಮೋಡಿ ಮಾಡಿತು.
ಕಂಗೀಲು ಪಾತ್ರಧಾರಿಗಳು ತೆಂಗಿನ ತಿಲಂಗ ಧರಿಸಿ ಕುಣಿಯುತ್ತಿದ್ದ ಬಗೆ ನೋಡುಗರನ್ನು ಒಂದುಕ್ಷಣ ಅವಕ್ಕಾಗಿಸಿತು. ಕಂಗೀಲು ಒಂದು ಜಾನಪದ ಕುಣಿತವೂ ಹೌದು, ಆಚರಣೆಯೂ ಹೌದು. ಊರಿಗೆ ಬಂದ ಮಾರಿಯನ್ನು ಓಡಿಸುವ ಆಶಯವಿರುವ ಈ ಜನಪದ ಕುಣಿತ ತುಳುನಾಡಿನ ಪ್ರಮುಖ ಪ್ರದರ್ಶಕ ಕಲೆ ಆಗಿದ್ದು, ಸಾಂಸ್ಕೃತಿಕ ನಗರಿಯ ರಂಗಾಸಕ್ತರು ಈ ಕಲೆಯ ಸವಿ ಸವಿದರು.
ಬಳಿಕ ನಡೆದ ಡಾ.ಮಳವಳ್ಳಿ ಮಹದೇವಸ್ವಾಮಿ ಮತ್ತು ತಂಡದ ‘ಮಂಟೇಸ್ವಾಮಿ ಹಾಡು’ಗಳ ಮೋಡಿಗೆ ಮನಸೋತರು. ಶರಣು ಶರಣಯ್ಯ ಸಿದ್ದಪ್ಪಾಜಿ ಸೇರಿದಂತೆ ನಾನಾ ಹಾಡುಗಳನ್ನು ಹಾಡಿ ಪ್ರೇಕ್ಷಕರು ತಲೆದೂಗುವಂತೆ ಮಾಡಿದರು. ಇದಕ್ಕೂ ಮುನ್ನ ನಡೆದ ದೇಸಿ ವೈಭವ ನೃತ್ಯ ರೂಪಕ ಆಕರ್ಷಿಸಿತು.
ಭಾರತೀಯತೆ ಸಾರಿದ ಸಿನಿಮಾಗಳು!
ಭಾರತೀಯತೆ ಆಶಯದೊಂದಿಗೆ ರಂಗಾಯಣದ ಶ್ರೀರಂಗದಲ್ಲಿ ಪ್ರದರ್ಶನಗೊಂಡ ಸಿನಿಮಾಗಳನ್ನು ವೀಕ್ಷಿಸಿದ ಸಿನಿಮಾಸಕ್ತರು ಭಾರತವೆಂದರೆ ಅದು ಕೇವಲ ನೆಲವೊಂದೇ ಅಲ್ಲ, ‘ಮಾತೆ’, ನಮ್ಮ ವ್ಯಕ್ತಿತ್ವದ ಹೆಗ್ಗುರುತು. ಅನೇಕ ಭಾಷೆ, ಧರ್ಮ, ಜಾತಿ ಜನಾಂಗಗಳ ಏಕ ಸಮೂಹವೇ ಭಾರತ ಎನ್ನುವುದನ್ನು ತಿಳಿದುಕೊಂಡರು.
ಮೊದಲಿಗೆ ಇಂಗ್ಲಿಷ್ ಭಾಷೆಯ ರೀಟಾ ಬ್ಯಾನರ್ಜಿ ನಿರ್ದೇಶನದ ‘ಗೌರ್ ಇನ್ ಮೈ ಗಾರ್ಡನ್’ ಸಿನಿಮಾ ಪ್ರದರ್ಶನವಾಯಿತು. ಇದು ಭಾರತ ಪ್ರಮುಖ ಜೀವವೈವಿಧ್ಯ ಕೇಂದ್ರಗಳಲ್ಲಿ ಒಂದಾದ ನೀಲಗಿರಿ ಪ್ರಾಂತ್ಯದ ಕೋಟಗಿರಿ ಎಂಬಲ್ಲಿ ಉಂಟಾಗುವ ಮಾನವ-ಪ್ರಾಣಿ ಸಂಘರ್ಷವನ್ನು ಅವಲೋಕಿಸುವ ಚಿತ್ರ.
ಹಿಂದಿ ಭಾಷೆಯ ಬಿಜು ತೊಪ್ಪು ನಿರ್ದೇಶನದ ‘ಝರಿಯಾ’, ಇಂಗ್ಲಿಷ್ ಭಾಷೆಯ ಕರೀಮ್ ಜಲಾಲ್ ಮತ್ತು ಹರಿಶಂಕರ್ ನಿರ್ದೇಶನದ ‘ದಿ ಸ್ಟೋರಿ ಆಫ್ ಜೆಲ್ಲಿಕಟ್ಟು’ ಹಾಗೂ ಇಂಗ್ಲಿಷ್ ಭಾಷೆಯ ಉಷಾ ಆಲ್ಬುಕರ್ಕಿ ನಿರ್ದೇಶನದ ‘ಸೀಡ್ಸ್ ಆಫ್ ಲೈಫ್’, ತಮಿಳಿನ ‘ಮೆರ್ಕು ತೊಡರ್ಚಿ ಮಲೈ’ ಚಿತ್ರ ಪ್ರದರ್ಶನಗೊಂಡವು.
ಉಳಿದಂತೆ, ಕರಕುಶಲ ವಸ್ತುಗಳು, ಪುಸ್ತಕ ಹಾಗೂ ಆಹಾರ ಮಳಿಗೆಗಳ ಮುಂದೆ ಹೆಚ್ಚು ಜನ ಕಂಡು ಬಂದರು. ನಾಟಕ ನೋಡಿದ ಕಲಾರಸಿಕರು ಮಳಿಗೆಗಳಿಗೆ ಭೇಟಿ ನೀಡಿ ನೆಚ್ಚಿನ ಪುಸ್ತಕಗಳನ್ನು ಖರೀದಿಸಿದರು. ಆಹಾರ ಮೇಳದಲ್ಲಿ ಬಗೆ-ಬಗೆಯ ರುಚಿ ಸವಿದರು.
ನಾಟಕಗಳಿಗೂ ಉತ್ತಮ ಸ್ಪಂದನೆ
ಮಂಗಳವಾರ ಪ್ರದರ್ಶನಗೊಂಡ ನಾಲ್ಕು ನಾಟಕಗಳಿಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಭೂಮಿಗೀತ ರಂಗ ವೇದಿಕೆಯಲ್ಲಿ ಕನ್ನಡ ಭಾಷೆಯ ‘ಬೈ 2 ಕಾಫಿ’ ನಾಟಕ ಪ್ರದರ್ಶನಗೊಂಡಿತು. ಅಭಿಷೇಕ್ ಅಯ್ಯಂಗಾರ್ ನಿರ್ದೇಶನದ ಈ ನಾಟಕವನ್ನು ಬೆಂಗಳೂರಿನ ವಿಮೂವ್ ಥಿಯೇಟರ್ ತಂಡ ಪ್ರಸ್ತುತಪಡಿಸಿತು. ಸಂಪತ್ ರಂಗಮಂದಿರದಲ್ಲಿ ಕನ್ನಡ ಭಾಷೆಯ ‘ತುಕ್ಕೋಜಿ’ ನಾಟಕ ಪ್ರದರ್ಶನಗೊಂಡಿತು. ಕಲಾಮಂದಿರದಲ್ಲಿ ಕನ್ನಡ ಭಾಷೆಯ ಉಂಡಿಯೊಳಗಣ ಕಿಚ್ಚು, ವನರಂಗದಲ್ಲಿ ಹರಿಯಾಣ್ವಿಯ ಬೋಡಾಸ್ ದೇ ಸಾಂಗ್ರೆ ನಾಟಕ ಪ್ರದರ್ಶನಗೊಂಡಿತು.