

ಈ ಹಿಂದಿನ ಸರ್ಕಾರದ ಭ್ರಷ್ಟಾಚಾರ (ಶೇ.40 ಕಮಿಷನ್) ಅವ್ಯವಸ್ಥೆಯಿಂದ ರಂಗಭೂಮಿ ಮೇಲಾದ ಪರಿಣಾಮಗಳ ಬಗ್ಗೆ ಕಲಾವಿದರು ನೂತನ ಸರ್ಕಾರಕ್ಕೆ ಸಲಹೆ ಕೊಡಬೇಕು ಎಂದು ರಂಗಕರ್ಮಿ ಪ್ರಸನ್ನ ಸಲಹೆ ನೀಡಿದರು.
ಭಾರತೀಯ ರಂಗ ಶಿಕ್ಷಣ ಸಂಸ್ಥೆಯ ಆಕ್ಟಿಂಗ್ ಶಾಸ್ತ್ರ ವತಿಯಿಂದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ರಂಗಾಯಣ ಏಕೆ, ಏನು, ಏತ್ತ? ವಿಷಯದ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಬಂದ ಮಾತ್ರಕ್ಕೆ ರಂಗಾಯಣ ಸರಿಹೋಗುತ್ತದೆಯೇ? ಅಧಿಕಾರ ರಾಜಕಾರಣ ನಿಲ್ಲುತ್ತದೆಯೇ? ಅಧಿಕಾರ ರಾಜಕಾರಣವನ್ನು ರಂಗಾಯಣಕ್ಕೆ ತಂದ ಬಿಜೆಪಿ ಮತ್ತು ಅಡ್ಡಂಡ ಕಾರ್ಯಪ್ಪ ಅವರನ್ನು ಜನರೇ ತಿರಸ್ಕರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಯಂತ್ರ ಚಾಲಿತ ಮನರಂಜನೆ ಬಂದ ಮೇಲೆ ರಂಗಭೂಮಿ ಸೋತಿತು. ಇದರ ವಿರುದ್ಧ ನಿಲ್ಲಲು ಆಗಲಿಲ್ಲ. ಆಗಲೇ ಹುಟ್ಟಿದ್ದು ರಂಗಾಯಣ. ವಿದೇಶದಲ್ಲಿ ಸ್ಥಳೀಯ ಸಂಸ್ಥೆಗಳು ರಂಗಸಂಸ್ಥೆಗೆ ಸಹಕಾರ ನೀಡುತ್ತವೆ. ಅಧಿಕಾರ ರಾಜಕಾರಣ ಒಳಗಡೆ ತರುವುದಿಲ್ಲ. ಈ ವ್ಯವಸ್ಥೆ ನಮ್ಮಲ್ಲಿಯೂ ಬರಬೇಕು ಎಂದರು.
ನಟರನ್ನು ದಾರಿದ್ರೃಕ್ಕೆ ತಳ್ಳುತ್ತಿದ್ದೇವೆ. ಸರ್ಕಾರಿ ಜವಾನನಿಗೆ 60ರಿಂದ 70 ಸಾವಿರ ಸಂಬಳ ಕೊಡುತ್ತೇವೆ. ನಟರಿಗೆ 12 ಸಾವಿರ ರೂ. ನೀಡುತ್ತಿದ್ದೇವೆ. ಇದು ದಾರಿದ್ರೃ ಅಲ್ಲವೇ? ಇದನ್ನು ಪ್ರಶ್ನಿಸುವುದು ತಪ್ಪೇ ಎಂದರು.
ರಂಗಾಯಣ ಸರಿಹೋಗಬೇಕಾದರೆ ಸ್ವಾಯತ್ತೆ ಬೇಕು. ಗುತ್ತಿಗೆ ಆಧಾರದಲ್ಲಿ ನಟರನ್ನು ನೇಮಿಸಿಕೊಂಡು ಸೂಕ್ತ ಸಂಭಾವನೆ, ಗೌರವ ಕೊಡಬೇಕು. ದಲಿತರು, ಹಿಂದುಳಿದವರು, ಹಳ್ಳಿಗಳಿಂದ ಬರುತ್ತಿರುವ ಯುವ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಶೈಕ್ಷಣಿಕ ರಂಗಭೂಮಿ ಆದ್ಯತೆ ಕೊಡಬೇಕು ಎಂದು ಸಲಹೆ ನೀಡಿದರು.
ರಂಗಕರ್ಮಿ ಕೃಷ್ಣ ಜನಮನ ಮಾತನಾಡಿ, ನಾಟಕಗಳಿಗೆ ಪೊಲೀಸರು ರಕ್ಷಣೆಗೆ ನಿಲ್ಲುವುದು ಇತಿಹಾಸದಲ್ಲಿ ಇರಲಿಲ್ಲ. ರಂಗಾಯಣದ ಆವರಣದಲ್ಲಿ ಹೆಜ್ಜೆ ಇಡುವುದು ಬೇಸರದ ಸಂಗತಿಯಾಗಿತ್ತು. ಮೈಸೂರು ರಂಗಾಯಣ ಇವತ್ತಿಗೂ ಕಮರ್ಷಿಯಲ್ ಆಗಿಲ್ಲ. ಮಾನವೀಯ ನೆಲಗಟ್ಟಿನಲ್ಲೇ ಉಳಿದಿದೆ. ಮುಂದಿನ ದಿನಗಳಲ್ಲಿ ರಂಗಾಯಣ ಕಲ್ಮಶ ಮತ್ತು ಬೇರೆ ಮನಸ್ಥಿತಿಯಿಂದ ಹೊರ ಬರುತ್ತದೆಂದು ಆಶಿಸಿಸುತ್ತೇನೆ ಎಂದು ಹೇಳಿದರು.
ರಂಗಕರ್ಮಿ ನಿರಂತರ ಶ್ರೀನಿವಾಸ್ ಮಾತನಾಡಿ, ರಂಗಾಯಣ ರಂಗಕರ್ಮಿಗಳ ಮನೆ. ತಮ್ಮ ಮನೆಗೆ ಹೋಗಲಿಕ್ಕೆ ಇರಿಸುಮುರಿಸು ಅನುಭವಿಸುವಂತಾಯಿತು. ಟಿಪ್ಪುಸುಲ್ತಾನ್ ವಿಷಯ ಅಗತ್ಯವೇ ಇರಲಿಲ್ಲ. ವೈಯಕ್ತಿಕ ಆಲೋಚನೆಗಳನ್ನು ಸಮಾಜಕ್ಕೆ ಹರಡಿದರು. ರಂಗಾಯಣದ ವಾತಾವರಣ ಹಾಳು ಮಾಡಿದರು. ಈಗ ವಾತಾವರಣ ತಿಳಿಯಾಗುತ್ತಿದೆ ಎಂದು ನುಡಿದರು.
ಯುವ ಕಲಾವಿದ ರಾಜೇಶ್ ಮಾಧವನ್ ಮಾತನಾಡಿ, ರಂಗ ಸಮಾಜ ಎಲ್ಲಿದೆ ಎಂದು ಪ್ರಶ್ನಿಸಿದರು. ಯುವ ನಟರ ಪರವಾಗಿ ಧ್ವನಿ ಎತ್ತುವವರು ಯಾರು? ಈಗ ಯುವ ನಟರಿಗೆ ನಿರ್ಧರಿಸಿರುವ ಸಂಬಳದಿಂದ ಜೀವನ ನಡೆಸಬಹುದೇ? ಕರ್ನಾಟಕದ 5 ರಂಗಾಯಣಗಳಿಂದ ಪ್ರತಿವರ್ಷ 60ರಿಂದ 70 ಕಲಾವಿದರು ತರಬೇತಿ ಪಡೆಯುತ್ತಾರೆ. ಅವರು ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಯೋಚಿಸಬೇಕಿದೆ ಎಂದರು.
ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಚಾಮರಾಜನಗರದ ಕೆ.ವೆಂಕಟರಾಜು, ಸಂಚಾಲಕ ಬಿ.ರಾಜೇಶ್ ಮುಂತಾದವರಿದ್ದರು.