ಮೈಸೂರು ಪಿಯುಸಿ ಫಲಿತಾಂಶದಲ್ಲಿ ಶೇ.74.30 ಸಾಧನೆ

Published on

ಮೈಸೂರು: ದ್ವಿತೀಯ ಪಿಯು ಫಲಿತಾಂಶದಲ್ಲಿ ಶೇ.74.30ರಷ್ಟು ಸಾಧನೆ ಮಾಡಿರುವ ಮೈಸೂರು ಜಿಲ್ಲೆ ಈ ಬಾರಿ 12ನೇ ಸ್ಥಾನಕ್ಕೆ ಜಿಗಿದಿದೆ.

ಕಳೆದ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯೇ 17ನೇ ಸ್ಥಾನಕ್ಕೆ ಕುಸಿದು ಚರ್ಚೆಗೆ ಗ್ರಾಸವಾಗಿತ್ತಲ್ಲದೆ ಮುಜುಗರಕ್ಕೀಡಾಗಿತ್ತು. ಈ ಬಾರಿ ಸವಾಲಾಗಿ ಸ್ವೀಕರಿಸಿದ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಫಲಿತಾಂಶ ಉತ್ತಮ ಪಡಿಸಲು ಹಲವು ಕಾರ್ಯಕ್ರಮ ರೂಪಿಸಿತ್ತು. ಅದರಂತೆ ಈ ಬಾರಿ ಉತ್ತಮ ಫಲಿತಾಂಶ ಕಂಡು ಕಳೆದ ಬಾರಿಗಿಂತ 5 ಸ್ಥಾನ ಜಿಗಿತ ಕಂಡಿದೆ.

ಫಲಿತಾಂಶ ಹೆಚ್ಚಳಕ್ಕಾಗಿ ಮೇಲಿಂದ ಮೇಲೆ ಎಲ್ಲ ಕಾಲೇಜಿನ ಪ್ರಾಂಶುಪಾಲ ಸಭೆ ನಡೆಸಿದಲ್ಲದೆ ವಿಶೇಷ ತರಗತಿಗಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳ ಪೂರಕ ಯೋಜನೆಗಳನ್ನು ರೂಪಿಸಲಾಗಿತ್ತು.

23,485 ವಿದ್ಯಾರ್ಥಿಗಳು ತೇರ್ಗಡೆ:

ಈ ಬಾರಿ ಒಟ್ಟು 31,610 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇದರಲ್ಲಿ 23,485 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇವರಲ್ಲಿ 15,733 ವಿದ್ಯಾರ್ಥಿಗಳು ಹಾಗೂ 18,491 ವಿದ್ಯಾರ್ಥಿನಿಯರು ಇದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಪಿರಿಯಾಪಟ್ಟಣ ತಾಲೂಕು ಕೊಪ್ಪದ ಭಾರತ್ ಮಾತಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಂ.ಎ.ತೇಜಸ್ವಿನಿ (598) ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಸರಸ್ವತಿಪುರಂನ ಎಸ್‌ವಿಐಸಿ ಜ್ಞಾನೋದಯ ಪಿಯು ಕಾಲೇಜಿನ ಅನಘ ಎಸ್.ಕರ್ನ್ಸಿ (594), ಕಲಾ ವಿಭಾಗದಲ್ಲಿ ನಗರದ ಬನ್ನಿಮಂಟಪದ ಸೆಂಟ್ ಜೋಸೆಫ್ ಪಿಯು ಕಾಲೇಜಿನ ಬೀ ಬೀ ಅಮೀನಾ (584) ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಲಾ ವಿಭಾಗದಲ್ಲಿ ಮರಿಮಲ್ಲಪ್ಪ ಕಾಲೇಜು ವಿದ್ಯಾರ್ಥಿ ಎಸ್. ಪರೀಕ್ಷಾನಂದ 583 ಅಂಕಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ.

ವಿಜಯನಗರದ ಸದ್ವಿದ್ಯಾ ಸೆಮಿ ರೆಸಿಡೆನ್ಶಿಯಲ್ ಪಿಯು ಕಾಲೇಜಿನ ಜಿ.ಧಾತ್ರಿ 596 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದು, ಜಿಲ್ಲೆಯ ದ್ವಿತೀಯ ಟಾಪರ್ ಆಗಿದ್ದಾರೆ.

ಕುವೆಂಪುನಗರದ ಬಿಜಿಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹರ್ಷಿನಿ ಆಚಾರ್, ವಾಣಿಜ್ಯ ವಿಭಾಗದಲ್ಲಿ 594 ಅಂಕ ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಎಸ್. ಸಂಗೀತ, ವಿಜ್ಞಾನ ವಿಭಾಗದಲ್ಲಿ 594 ಅಂಕಗಳಿಸಿದ್ದು, ಜಿಲ್ಲೆಗೆ ಮೂರನೇ ಸ್ಥಾನ ಪಡೆದಿದ್ದಾರೆ.

ಹೆಣ್ಣು ಮಕ್ಕಳೇ ಮೈಲುಗೈ:

ಜಿಲ್ಲೆಯಲ್ಲಿ 34224 ವಿದ್ಯಾರ್ಥಿಗಳ ಪೈಕಿ ಹೊಸದಾಗಿ 31610 ವಿದ್ಯಾರ್ಥಿಗಳು, 1649 ಪುನರಾವರ್ತಿತ, ಖಾಸಗಿಯಾಗಿ 965 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಈ ಪೈಕಿ ಹೊಸದಾಗಿ ಪರೀಕ್ಷೆ ಬರೆದಿದ್ದ 31610 ವಿದ್ಯಾರ್ಥಿಗಳಲ್ಲಿ 23485 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.74.30ರಷ್ಟು ಫಲಿತಾಂಶ ಬಂದಿದೆ.

ನಗರ ಪ್ರದೇಶದಲ್ಲಿ 27486 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 20608 ಮಂದಿ ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 4124 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇವರಲ್ಲಿ 2877 ಮಂದಿ ಉತ್ತೀರ್ಣರಾಗಿದ್ದಾರೆ.

ಈ ಬಾರಿಯ ಪರೀಕ್ಷೆಯಲ್ಲಿ 15733 ಬಾಲಕರು ಪರೀಕ್ಷೆ ಬರೆದಿದ್ದು, ಇವರಲ್ಲಿ 9635 ಮಂದಿ ಉತ್ತೀರ್ಣರಾಗಿದ್ದು, ಶೇ.61.24ರಷ್ಟು ಲಿತಾಂಶ ಪಡೆದಿದ್ದಾರೆ.

ಜತೆಗೆ 18491 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ಇವರಲ್ಲಿ 14323 ಮಂದಿ ಉತ್ತೀರ್ಣರಾಗಿದ್ದು, ಶೇ.77.46 ರಷ್ಟು ಶೇಕಡವಾರು ಫಲಿತಾಂಶ ಪಡೆಯುವ ಮೂಲಕ ಈ ಬಾರಿಯೂ ಹೆಣ್ಣುಮಕ್ಕಳೆ ಜಿಲ್ಲೆಯಲ್ಲಿ ಮೈಲುಗೈ ಸಾಧಿಸಿದ್ದಾರೆ. ವಾಣಿಜ್ಯ, ಕಲಾ ಹಾಗೂ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದವರು ಹೆಣ್ಣುಮಕ್ಕಳೇ ಆಗಿರುವುದು ವಿಶೇಷ.

ಕಲಾ ವಿಭಾಗದಲ್ಲಿ ಫಲಿತಾಂಶ ಇಳಿಕೆ

ದ್ವಿತೀಯ ಪಿಯು ಕಲಾ ವಿಷಯದಲ್ಲಿ ಕಡಿಮೆ ಫಲಿತಾಂಶ ಇಳಿಕೆ ಅಗಿದೆ. 6794 ವಿದ್ಯಾರ್ಥಿಗಳು ಕಲಾ ವಿಷಯ ಪರೀಕ್ಷೆ ಬರೆದಿದ್ದರು. ಇವರಲ್ಲಿ ಕೇವಲ 3915 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.57.62ರಷ್ಟು ಶೇಕಡವಾರು ಫಲಿತಾಂಶ ಬಂದಿದೆ.

ವಾಣಿಜ್ಯ ವಿಷಯದಲ್ಲಿ ಪರೀಕ್ಷೆ ಬರೆದಿದ್ದ 10941 ವಿದ್ಯಾರ್ಥಿಗಳಲ್ಲಿ 8206 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡವಾರು 75ರಷ್ಟು ಫಲಿತಾಂಶ ಬಂದಿದೆ.

ವಿಜ್ಞಾನ ವಿಷಯದಲ್ಲಿ 13875 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 11364 ಮಂದಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇಕಡವಾರು 79.86 ರಷ್ಟು ಫಲಿತಾಂಶ ಲಭಿಸಿದೆ.

ಒಟ್ಟಾರೆ ನಗರ ಪ್ರದೇಶದಲ್ಲಿ ಶೇ.70.88 ರಷ್ಟು ಫಲಿತಾಂಶ ಬಂದರೆ, ಗ್ರಾಮೀಣ ಪ್ರದೇಶದಲ್ಲಿ 64.38ರಷ್ಟು ಫಲಿತಾಂಶ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net