ಮೈಸೂರು: ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ

mysore sewage farm
Published on

ಸದೇಶ್ ಕಾರ್ಮಾಡ್ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರು ಸ್ವಚ್ಛ ಸರ್ವೇಕ್ಷಣೆಯಲ್ಲಿ ಪ್ರತಿ ವರ್ಷ ಹಿಂದುಳಿಯಲು ನಗರದಲ್ಲಿ ಪ್ರತಿನಿತ್ಯ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಹಾಗೂ ಸಂಸ್ಕರಣೆ ಆಗದೆ ಇರುವುದೇ ಪ್ರಮುಖ ಕಾರಣ. ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ನಗರ ಪಾಲಿಕೆ ಯು ಇದೀಗ ತ್ಯಾಜ್ಯವನ್ನು ಬಳಸಿಕೊಂಡು ಕಂಪ್ರೆಸ್ಡ್ ಬಯೋಗ್ಯಾಸ್ ತಯಾರಿಸುವ ಯೋಜನೆಗೆ ಮುಂದಾಗಿದೆ.

ನಗರ ಪಾಲಿಕೆ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಸಹಯೋಗದಲ್ಲಿ ನಗರದ ಸೀವೇಜ್ ಫಾರ್ಮ್‌ನಲ್ಲಿ ಬಯೋಗ್ಯಾಸ್ ಘಟಕ ನಿರ್ಮಾಣಗೊಳ್ಳಲಿದೆ. ಸೀವೇಜ್ ಫಾರ್ಮ್‌ನಲ್ಲಿ ಪ್ರತಿನಿತ್ಯ 150 ಟನ್ ತ್ಯಾಜ್ಯವನ್ನು ಬಳಕೆ ಮಾಡಿ ಕೊಂಡು ಬಯೋಗ್ಯಾಸ್ ತಯಾರಿಸುವ ಉದ್ದೇಶವನ್ನು ಹೊಂದಲಾಗಿದೆ. ಯೋಜನೆ ಜಾರಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಗರ ಪಾಲಿಕೆ ಆಯುಕ್ತ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರೊಂದಿಗೆ ಬಿಪಿಸಿಎಲ್ ಅಧಿಕಾರಿಗಳು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಮನೆ ಮನೆಗ ಳಿಂದ ಸಂಗ್ರಹವಾಗುವ ಹಸಿ ತ್ಯಾಜ್ಯವನ್ನು ಶುದ್ಧ, ಸುಸ್ಥಿರ ಇಂಧನವಾಗಿ ಪರಿವರ್ತಿಸುವುದು ಯೋಜನೆಯ ಉದ್ದೇಶವಾಗಿದೆ.

ಬಯೋಗ್ಯಾಸ್ ಉತ್ಪಾದಿಸುವ ಘಟಕ ಸ್ಥಾಪನೆಗೆ 60 ರಿಂದ 66 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಹೊಂದಲಾಗಿದೆ. ನಗರವು ಪ್ರತಿನಿತ್ಯ 600 ಟನ್ ತ್ಯಾಜ್ಯವನ್ನು ಉತ್ಪಾದಿಸುತ್ತಿದೆ. ನಗರದ ಸೀವೇಜ್‌ಫಾರ್ಮ್, ಕೆಸೆರೆ ಘಟಕದಲ್ಲಿ ಇದೀಗ ತ್ಯಾಜ್ಯವನ್ನು ಸಂಸ್ಕರಣೆ ಮಾಡಿ ಗೊಬ್ಬರವಾಗಿ ಪರಿವರ್ತಿಸುವ ಘಟಕ ಕಾರ್ಯನಿರ್ವಹಿಸುತ್ತಿದೆ. ಬಯೋಗ್ಯಾಸ್ ಘಟಕ ಪ್ರಾರಂಭವಾದರೆ ತ್ಯಾಜ್ಯ ಸಂಸ್ಕರಣೆಯ ಸಮಸ್ಯೆಗೆ ಮತ್ತಷ್ಟು ಪರಿಹಾರ ದೊರೆಯುವ ಸಾಧ್ಯತೆ ಇದೆ. ಈಗಾಗಲೇ ಕೊಚ್ಚಿ, ತಿರುವನಂತಪುರಂ, ಕೋಝಿಕೋಡ್‌ನಲ್ಲಿ ಬಿಪಿಸಿಎಲ್ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಘಟಕ ನಿರ್ಮಾಣದ ಕಾರ್ಯವು ಜುಲೈನಲ್ಲಿ ಪ್ರಾರಂಭಗೊಳ್ಳುವ ನಿರೀಕ್ಷೆ ಇದ್ದು, ಎರಡು ವರ್ಷಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.

ಸ್ವಚ್ಛ ಸರ್ವೇಕ್ಷಣೆಗೆ ಸಹಕಾರಿ: ನಗರವು ಸ್ವಚ್ಛತೆಯಲ್ಲಿ ರಾಷ್ಟ್ರಮಟ್ಟದಲ್ಲಿ 27ನೇ ಸ್ಥಾನದಲ್ಲಿ ಇದ್ದು, ಮತ್ತೆ ಟಾಪ್ 10 ಸ್ಥಾನಕ್ಕೆ ಮರಳಲು ಇಂತಹ ಉಪಕ್ರಮಗಳ ಅವಶ್ಯ ಕತೆ ಇದೆ. ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಹಾಗೂ ಸಂಸ್ಕರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸ್ವಚ್ಛ ಸರ್ವೇಕ್ಷಣೆಗೆ ಒಟ್ಟು 12,500 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಈ ಪೈಕಿ ಬಡಾವಣೆ, ವಾಣಿಜ್ಯ ಪ್ರದೇಶಗಳನ್ನು ದಿನನಿತ್ಯ ಶುಚಿಗೊ ಳಿಸುವುದು ಹಾಗೂ ಇತ್ಯಾದಿಗೆ 1,500 ಅಂಕಗಳು, ತ್ಯಾಜ್ಯದ ವಿಂಗಡಣೆ, ಸಂಗ್ರಹಣೆ ಹಾಗೂ ಸಾಗಾಟಕ್ಕೆ 1,000 ಅಂಕಗಳು ಹಾಗೂ ಘನತ್ಯಾಜ್ಯ ನಿರ್ವಹಣೆಗೆ 1,500 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಹಾಗಾಗಿ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಹಾಗೂ ಸಂಸ್ಕರಣೆ ಮಾಡುವುದು ಅತ್ಯಂತ ಪ್ರಮುಖವಾದ ವಿಚಾರವಾಗಿದೆ.

ನಗರದ ಸೀವೇಜ್‌ಫಾರ್ಮ್‌ನಲ್ಲಿ ಹಳೆಯ ತ್ಯಾಜ್ಯವು ಸಂಸ್ಕರಣೆಯಾಗದೆ ಬೆಟ್ಟದ ರೀತಿಯಲ್ಲಿ ಬೆಳೆದಿದ್ದು, ಇದನ್ನು ಬಯೋ ಮೈನಿಂಗ್ ಮೂಲಕ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಈ ತ್ಯಾಜ್ಯ ಸಂಪೂರ್ಣವಾಗಿ ತೆರವುಗೊಂಡು ನಗರದಲ್ಲಿ ಪ್ರತಿನಿತ್ಯ ಸಂಗ್ರಹವಾ ಗುವ ತ್ಯಾಜ್ಯ ಆಯಾ ದಿನವೇ ವಿಲೇವಾರಿಯಾದರೆ ತ್ಯಾಜ್ಯದ ಸಮಸ್ಯೆಗೆ ಸಂಪೂರ್ಣ ಪರಿಹಾರ ಕಂಡುಕೊಳ್ಳಬಹುದು.

ಸ್ವಚ್ಛತೆಗೆ ಇಂದೊರ್ ಮಾದರಿ: ದೇಶದ ನಂ.1 ಸ್ವಚ್ಛ ನಗರಿಯಾಗಿರುವ ಇಂದೋರ್ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಹಾಗೂ ಸಂಸ್ಕರಣೆಯಲ್ಲಿ ದೇಶಕ್ಕೆ ಮಾದರಿಯಾಗಿದೆ. ಇಂದೋರ್‌ನಗರದಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯದಿಂದ ಬಯೋ ಗ್ಯಾಸ್ ತಯಾರಿಸಲಾಗುತ್ತಿದೆ. ಬಯೋಗ್ಯಾಸ್ ಘಟಕವನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದ್ದು, ಈ ಬಯೋಗ್ಯಾಸ್‌ಅನ್ನು ಇಂದೋರ್‌ನ ಸರ್ಕಾರಿ ಸಿಎನ್‌ಜಿ ಬಸ್‌ಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಒಣಕಸದಲ್ಲಿ ಪೇಪರ್, ಪ್ಲಾಸ್ಟಿಕ್, ಕಬ್ಬಿಣ, ಗಾಜಿನ ಬಾಟಲಿಗಳನ್ನು ಬೇರ್ಪಡಿಸಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ಕಂಪನಿಗಳಿಗೆ ಪೂರೈಕೆ ಮಾಡಲಾಗುತ್ತಿದ್ದು, ಉಳಿದ ತ್ಯಾಜ್ಯವನ್ನು ಮರುಬಳಕೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಒಟ್ಟು 6 ಕಡೆಗಳಲ್ಲಿ ಕಟ್ಟಡ ತ್ಯಾಜ್ಯಗಳನ್ನು (ಡಬ್ರಿಸ್) ವಿಲೇವಾರಿ ಮಾಡಲು ಜಾಗ ಒದಗಿಸಲಾಗಿದ್ದು, ಈ ಕಟ್ಟಡ ತ್ಯಾಜ್ಯದಿಂದ ಟೈಲ್ಸ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಿ ಇಂದೋರ್ ಆದಾಯ ಗಳಿಸುತ್ತಿದೆ. ಮೈಸೂರು ನಗರ ಪಾಲಿಕೆಯ ತಂಡ 2023ರಲ್ಲಿ ಇಂದೋರ್‌ಗೆ ಭೇಟಿ ಅಧ್ಯಯನ ನಡೆಸಿದ ನಂತರ ನಗರದಲ್ಲೂ ಬಯೋಗ್ಯಾಸ್ ಘಟಕ ಅಳವಡಿಕೆಗೆ ಮಾಡುವ ಉದ್ದೇಶ ಹೊಂದಿತ್ತು. ಇದೀಗ ಬಿಪಿಸಿಎಲ್ ಸಹಯೋಗದೊಂದಿಗೆ ನಗರದಲ್ಲೂ ಬಯೋಗ್ಯಾಸ್ ಘಟಕ ನಿರ್ಮಾಣ ಮಾಡುವ ಕಾಲ ಕೂಡಿ ಬಂದಿದೆ.

ನಗರದಲ್ಲಿ ಉತ್ಪತಿಯಾಗುವ ತ್ಯಾಜ್ಯವು ಪರಿಣಾಮಕಾರಿಯಾಗಿ ಸಂಸ್ಕರಣೆಯಾಗಬೇಕು ಎಂಬ ಉದ್ದೇಶದೊಂದಿಗೆ ಸೀವೇಜ್ ಫಾರ್ಮ್‌ನಲ್ಲಿ ಬಿಪಿಸಿಎಲ್ ಸಹಯೋಗದೊಂದಿಗೆ ಕಂಪ್ರೆಸ್ಡ್ ಬಯೋಗ್ಯಾಸ್ ಘಟಕ ತೆರೆಯಲು ಉದ್ದೇಶಿಸಲಾಗಿದೆ. ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಿ, 2 ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದರಿಂದ ನಗರ ಎದುರಿಸುತ್ತಿರುವ ತ್ಯಾಜ್ಯ ಸಂಸ್ಕರಣೆಯ ಸಮಸ್ಯೆ ಹಂತ ಹಂತವಾಗಿ ಬಗೆಹರಿಯಲಿದೆ.

ಶೇಖ್ ತನ್ವೀರ್ ಆಸಿಫ್, ನಗರ ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net