

ಅವಿನಾಶ್ ಜೈನಹಳ್ಳಿ ಮೈಸೂರು
ಗಣೇಶ ಚತುರ್ಥಿ ಆಚರಣೆ ಸಂಭ್ರಮಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಿದ್ಧಗೊಳ್ಳುತ್ತಿದ್ದು, ನಗರದ ವಿವಿಧೆಡೆ ಬಗೆ ಬಗೆಯ ಗಣಪತಿ ಮೂರ್ತಿಗಳು ಕಲಾವಿದರ ಕೈಯಲ್ಲಿ ಸುಂದರವಾಗಿ ಅರಳಿ ನಿಂತಿವೆ.
ಮುಖ್ಯವಾಗಿ ಈ ಬಾರಿ ‘ಚಂದ್ರಯಾನ ಗಣಪ’ ಮೂರ್ತಿಯ ವಿಶೇಷತೆ ಕಾಣಬಹುದು. ವಿಘ್ನ ನಿವಾರಕನ ಆಗಮನಕ್ಕೆ ಇನ್ನೂ ಎರಡು ವಾರ ಬಾಕಿ ಇದ್ದು, ನಗರದ ವಿವಿಧ ಭಾಗಗಳಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು 50 ಸಾವಿರ ಗಣಪತಿ-ಗೌರಿ ಮೂರ್ತಿಗಳನ್ನು ಸಿದ್ಧಪಡಿಸಿದ್ದು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಬಹು ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿಗೊಂಡು ದೇಶಶಕ್ತಿ ಇಡೀ ಪ್ರಪಂಚಕ್ಕೆ ತಿಳಿದಿದೆ. ಇದಕ್ಕೆ ಕಾರಣರಾದ ಇಸ್ರೋ ವಿಜ್ಞಾನಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಗಣೇಶ ಮೂರ್ತಿ ತಯಾರಕರು ಈ ಬಾರಿ ವಿಶೇಷವಾಗಿ ‘ಚಂದ್ರಯಾನ ಗಣಪ’ ಮೂರ್ತಿಯನ್ನು ತಯಾರಿಸಿದ್ದಾರೆ. ಚಂದ್ರನ ಮೇಲೆ ಗಣೇಶ ಕೂತಿರುವುದೇ ಇದರ ವಿಶೇಷತೆಯಾಗಿದೆ.
ಎಂಟು-ಹತ್ತು ತಿಂಗಳಿನಿಂದ ಗಣೇಶ ಮೂರ್ತಿ ತಯಾರಕರು ವಿವಿಧ ಗಣೇಶ ಮೂರ್ತಿಗಳ ತಯಾರಿಕೆ ಮಾಡಿದ್ದಾರೆ. ಮನೆ, ವಠಾರ, ಬಡಾವಣೆ, ದೇಗುಲ, ಸಂಘ-ಸಂಸ್ಥೆ, ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನನ್ನು ಇಡಲು ಅರ್ಧ ಅಡಿಯಿಂದ ಹಿಡಿದು ಆರು ಅಡಿ ಎತ್ತರದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳೂ ಮಾರುಕಟ್ಟೆಗೆ ಈಗಾಗಲೇ ಅಡಿಯಿಟ್ಟಿವೆ.
‘ಆರ್‌ಎಸ್‌ಎಸ್ ಗಣೇಶ’ ಮೂರ್ತಿಯೂ ಈ ಬಾರಿ ಗಮನ ಸೆಳೆಯುತ್ತಿದೆ. ಹಿಂದು ಧರ್ಮದ ಕೇಸರಿ ಬಾವುಟ ಹಿಡಿದು ಗಣೇಶ ನಿಂತಿರುವುದು ಇದರ ವಿಶೇಷವಾಗಿದೆ. ಜತೆಗೆ, ಗಣೇಶನೊಂದಿಗೆ ಪುನೀತ್ ರಾಜ್‌ಕುಮಾರ್ ಇರುವ ವಿಶಿಷ್ಟ ಮೂರ್ತಿ, ಗೌರಿ ಜತೆ ಕುಳಿತಿರುವ ಗಣಪ ಸೇರಿದಂತೆ ವಿಭಿನ್ನ ಸ್ವರೂಪದ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ.
ನಗರದ ಹೆಬ್ಬಾಳದಲ್ಲಿರುವ ಸುಮಿತ್ರಾ-ನಂಜುಂಡ ದಂಪತಿಯ ಪುತ್ರ ಸುನೀಲ್, ಈ ಬಾರಿಯ ಗಣೇಶೋತ್ಸವಕ್ಕೆ ವಿಶಿಷ್ಟ ರೀತಿಯ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಮುಖ್ಯವಾಗಿ ಹತ್ತು ‘ಚಂದ್ರಯಾನ ಗಣಪ’ ತಯಾರು ಮಾಡಿದ್ದು, ಈಗಾಗಲೇ ಬಹುತೇಕ ಎಲ್ಲ ಗಣಪ ಮೂರ್ತಿಯನ್ನು ಮುಂಗಡ ಹಣ ನೀಡಿ ಸಾರ್ವಜನಿಕರು ಖರೀದಿಸಿದ್ದಾರೆ.
ಇತ್ತೀಚೆಗೆ ಜನರಲ್ಲಿ ಪರಿಸರ ಕಾಳಜಿ ಹೆಚ್ಚುತ್ತಿರುವುದರಿಂದ ಎಲ್ಲೆಡೆ ಗಣೇಶ ಚತುರ್ಥಿಯಂದು ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಬಣ್ಣ ಲೇಪನದೊಂದಿಗೆ ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳ ಖರೀದಿಗೆ ಜನರು ಹೆಚ್ಚು ಉತ್ಸುಕರಾಗಿದ್ದು, ಸಾವಿರಾರು ಮೂರ್ತಿಗಳಿಗೆ ಮುಂಗಡ ಹಣ ನೀಡಿದ್ದಾರೆ. ಜತೆಗೆ, ತಯಾರಕರು ಅರ್ಧ ಅಡಿಯಿಂದ ಹಿಡಿದು ಆರು ಅಡಿ ಎತ್ತರದವರೆಗಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿದ್ದು, ಒಂದೊಂದು ಮೂರ್ತಿಯೂ ವಿಭಿನ್ನ ಶೈಲಿ, ಬಣ್ಣ, ಭಂಗಿಯೊಂದಿಗೆ ನೋಡುಗರನ್ನು ಆಕರ್ಷಿಸುತ್ತಿವೆ.
ಈ ಬಾರಿ ಅದ್ದೂರಿಯಾಗಿ ಹಬ್ಬ ಆಚರಿಸುತ್ತಿರುವುದರಿಂದ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಎಲ್ಲ ಬಡಾವಣೆಗಳಲ್ಲೂ ವಿವಿಧ ಸಂಘ-ಸಂಸ್ಥೆಗಳು ಹಾಗೂ ಮುಖ್ಯವಾಗಿ ಯುವಕರ ಗುಂಪುಗಳು ಗಣೇಶ ಹಬ್ಬ ಆಚರಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿವೆ. 8-10 ತಿಂಗಳಿನಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳು ತಲಾ 3 ರಿಂದ 4 ಸಾವಿರ ರೂ. ಮೌಲ್ಯದ ಗಣೇಶ-ಗೌರಿ ಮೂರ್ತಿಗಳನ್ನು ಸಿದ್ಧಪಡಿಸಿರುವುದಲ್ಲದೆ, ವ್ಯಾಪಾರವೂ ಉತ್ತಮವಾಗಿದೆ.
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ಮಾರಾಟ ಮತ್ತು ತಯಾರಿಕೆಯನ್ನು ಸರ್ಕಾರ ನಿಷೇಧಿಸಿದ್ದರೂ ಕೆಲವೆಡೆ ಪಿಒಪಿ ಗಣೇಶ ಮೂರ್ತಿಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಇದರಿಂದ ಸಹಜವಾಗಿಯೇ ನೈಸರ್ಗಿಕ ಉತ್ಪನ್ನಗಳನ್ನು ಬಳಕೆ ಮಾಡಿಕೊಂಡು ತಯಾರಿಸಲಾದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ತಗ್ಗಲಿದೆ ಎಂಬುದು ಗಣೇಶ ಮೂರ್ತಿ ತಯಾರಕರ ಆತಂಕವಾಗಿದೆ. ಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಸಾಮಾನ್ಯವಾಗಿ 6 ಅಡಿ ಎತ್ತರ ಮಾತ್ರ ಇರಲಿವೆ. ಆದರೆ 8 ರಿಂದ 10 ಅಡಿ ಎತ್ತರದ ಮೂರ್ತಿಗಳು ಬೇಕಾದರೆ ಪಿಒಪಿ ಬಳಸಬೇಕು. ಕೆಲವರು ಎತ್ತರದ ಗಣೇಶನಿಗಾಗಿ ಪಿಒಪಿ ಮೂರ್ತಿಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ.
ಗಣೇಶ ಚತುರ್ಥಿ ಹಿಂದುಗಳ ಪ್ರಮುಖ ಹಬ್ಬ. ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದು. ದೇಶದಾದ್ಯಂತ ಅತ್ಯಂತ ವಿಜೃಂಭಣೆಯಿಂದ ದೇವ ಗಣೇಶನ ಜನ್ಮ ದಿನದಂದು ಆಚರಿಸಲಾಗುತ್ತದೆ. ಈ ದಿನದಂದೇ ತಂದೆ ಶಿವನಿಂದ ತುಂಡರಿಸಲ್ಪಟ್ಟ ಗಣೇಶನ ಮುಖದ ಜಾಗದಲ್ಲಿ ಆನೆ ಮುಖವನ್ನು ಸೇರಿಸಲಾಯಿತು. ಈ ಮೂಲಕ ಗಣೇಶನು ಗಜಾನನ ಆದನು. ಗಣೇಶನ ಮಾತಾಪಿತರು ಶಿವ-ಪಾರ್ವತಿ. ಗಣೇಶ ಅದೃಷ್ಟ, ಸಮೃದ್ಧಿ ಮತ್ತು ಬುದ್ಧಿವಂತಿಕೆಯ ದೇವರೆಂದು ಭಕ್ತರು ನಂಬಿದ್ದಾರೆ. ಅದಕ್ಕಾಗಿಯೇ ಜನರು ಅದೃಷ್ಟಕ್ಕಾಗಿ ಮತ್ತು ಯಾವುದೇ ವಿಘ್ನ ಬಾರದೆ ಇರಲು ಯಾವುದೇ ಪವಿತ್ರ ಸಂದರ್ಭಕ್ಕೂ ಮುನ್ನ ಗಣೇಶನನ್ನು ಪೂಜಿಸುತ್ತಾರೆ. ಹೀಗಾಗಿ ಅವನನ್ನು ವಿಘ್ನಹತ ಎಂದೂ ಕರೆಯುತ್ತಾರೆ.
ಅನೇಕ ವರ್ಷಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದು, ಇದೇ ನಮ್ಮ ವೃತ್ತಿಯಾಗಿದೆ. ಈ ಬಾರಿ ಬೇಡಿಕೆ ಹೆಚ್ಚಿದ್ದು, ವಿವಿಧ ಅಳತೆಯ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿದ್ದೇವೆ. ವಿಶೇಷವಾಗಿ ‘ಚಂದ್ರಯಾನ ಗಣಪ’ ತಯಾರಿಸಿದ್ದೇವೆ.ಸುನೀಲ್, ಗಣೇಶ ಮೂರ್ತಿ ತಯಾರಕರು, ಹೆಬ್ಬಾಳು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಬಳಕೆ ನಿಷೇಧಿಸಿದ್ದು, ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಗಳನ್ನು ಬಳಕೆ ಮಾಡಿ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸಬೇಕು. ಪಿಒಪಿ ಬಳಕೆ ಮಾಡಿರುವ ಗಣಪತಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಮಾಡುವುದು ಕಂಡುಬಂದರೆ ತಕ್ಷಣ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ ಬಾರಿ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರು ಮಾಡಿದ್ದ ಕಡೆಗಳಲ್ಲಿ ಈ ಬಾರಿ ಪರಿಶೀಲಿಸಬೇಕು. ತಯಾರಿಕೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ತಯಾರಿಕೆ ಮತ್ತು ಮಾರಾಟ ಕಂಡುಬಂದಲ್ಲಿ ಸಾರ್ವಜನಿಕರು ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ