

ಸದೇಶ್ ಕಾರ್ಮಾಡ್ ಮೈಸೂರು
ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮ ತಡೆಗಟ್ಟಲು ನಗರದ ವಿವಿಧೆಡೆ ಪ್ಲಾಸ್ಟಿಕ್ ಮರು ಬಳಕೆಯ ಯಂತ್ರ ಅಳವಡಿಸಲು ನಗರ ಪಾಲಿಕೆ ವರ್ಷದ ಹಿಂದೆ ರೂಪಿಸಿದ್ದ ಯೋಜನೆ ಅನುದಾನದ ಕೊರತೆಯಿಂದ ನನೆಗುದಿಗೆ ಬಿದ್ದಿದೆ.
ನಗರದಲ್ಲಿ ಪ್ರತಿನಿತ್ಯ 500 ಟನ್ ತ್ಯಾಜ್ಯ ನಗರದಲ್ಲಿ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಶೇ.25 ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ದೊರೆಯುತ್ತಿದೆ. ಸಾಕಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳು ರಸ್ತೆ, ಬದಿಗಳಲ್ಲಿ, ಚರಂಡಿಗಳಲ್ಲಿ, ಉದ್ಯಾನಗಳಲ್ಲಿ ಕಂಡು ಬರುತ್ತಿದ್ದು, ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ನಗರದ ವಿವಿಧೆಡೆ ಪ್ಲಾಸ್ಟಿಕ್ ಮರು ಬಳಕೆಯ ಯಂತ್ರ ಅಳವಡಿಸಲು ನಗರ ಪಾಲಿಕೆ ಯೋಜನೆ ರೂಪಿಸಿ ಪ್ರಾಯೋಗಿಕವಾಗಿ ನಗರ ಪಾಲಿಕೆ ಆವರಣದಲ್ಲಿ ಒಂದು ಯಂತ್ರವನ್ನು ಅಳವಡಿಸಿ 6 ಜುಲೈ 2024 ರಂದು ಅಂದಿನ ನಗರ ಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್ ಚಾಲನೆ ನೀಡಿದ್ದರು. ಇದೇ ಮಾದರಿಯ ಯಂತ್ರಗಳನ್ನು ನಗರದ ವಿವಿಧೆಡೆ ಅಳವಡಿಸಲು ಉದ್ದೇಶಿಸಲಾಗಿತ್ತು. ಆದರೆ, ಅನುದಾನದ ಕೊರತೆಯಿಂದ ಈ ಯೋಜನೆ ಕಾರ್ಯಗತವಾಗಲೇ ಇಲ್ಲ.
ಏನಿದು ಯೋಜನೆ?: ನಗರ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು (ಪೆಟ್ ಬಾಟಲ್) ಬಳಕೆಯಾಗುತ್ತಿವೆ. ಇದರ ಜತೆಗೆ ಜ್ಯೂಸ್ ಬಾಟಲಿಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಆದರೆ, ಈ ಪೈಕಿ ಬಹುಪಾಲು ಪ್ಲಾಸ್ಟಿಕ್ ಬಾಟಲಿಗಳು ಸೂಕ್ತವಾಗಿ ವಿಲೇವಾರಿಯಾಗುತ್ತಿಲ್ಲ. ಜನರು ನೀರು, ಜ್ಯೂಸ್ ಕುಡಿದ ನಂತರ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದನ್ನು ತಪ್ಪಿಸಲು ಬಾಟಲಿಯನ್ನು ಸಹ ಆದಾಯದ ಮೂಲವಾಗಿ ಮಾಡಬೇಕು ಎಂಬುದು ನಗರ ಪಾಲಿಕೆಯ ಯೋಜನೆಯಾಗಿತ್ತು.
ನಗರ ಪಾಲಿಕೆ ಅಳವಡಿಸುವ ಪ್ಲಾಸ್ಟಿಕ್ ಮರು ಬಳಕೆ ಯಂತ್ರಕ್ಕೆ ಜನರು ತಾವು ಉಪಯೋಗಿಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಕಿದರೆ ಯಂತ್ರವು ಪ್ಲಾಸ್ಟಿಕ್ ಬಾಟಲಿಗಳನ್ನು ಸ್ಕಾೃನ್ ಮಾಡಿ ಹಣ ನೀಡುತ್ತದೆ. ಯಂತ್ರಕ್ಕೆ ಎರಡು ಪ್ಲಾಸ್ಟಿಕ್ ಬಾಟಲಿಗಳನ್ನು ಹಾಕಿದರೆ ಒಂದು ರೂ. ಪ್ರೋತ್ಸಾಹ ಧನ ದೊರೆಯುತ್ತದೆ. ಯಂತ್ರಕ್ಕೆ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಕಿದರೆ 25 ಸೆಕೆಂಡ್‌ಗಳಲ್ಲಿ ಒಂದು ರೂ. ನಾಣ್ಯ ಎಟಿಎಂ ಯಂತ್ರದಲ್ಲಿ ಹಣ ಹೊರ ಬರುವಂತೆ ಹೊರ ಬರುತ್ತದೆ. ಇದರಿಂದ ಜನರಿಗೆ ಅಲ್ಪ ಮೊತ್ತದ ಹಣ ದೊರೆಯುತ್ತದೆ. ಬಹುಮುಖ್ಯವಾಗಿ ಪ್ಲಾಸ್ಟಿಕ್ ಬಾಟಲಿಗಳು ಎಲ್ಲೆಂದರಲ್ಲಿ ಹರಡುವುದು ತಪ್ಪುತ್ತದೆ. ಆದರೆ, ಈ ಯೋಜನೆ ನನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಇಂದಿಗೂ ನಗರದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಬಿದ್ದಿರುವುದನ್ನು ಕಾಣಬಹುದುದಾಗಿದೆ.
ಬಟ್ಟೆಬ್ಯಾಗ್ ನೀಡುವ ಯಂತ್ರ: ನಗರದಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆ ಸಂಪೂರ್ಣ ನಿಷೇಧಿಸಿದ್ದರೂ, ನಗರ ಪಾಲಿಕೆ ಅಧಿಕಾರಿಗಳು ನಿರಂತರವಾಗಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ, ದಾಳಿ ನಡೆಸುತ್ತಿದ್ದರೂ ನಗರದಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆ ಮಾತ್ರ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಪ್ಲಾಸ್ಟಿಕ್ ಬ್ಯಾಗ್ ಮಾರಾಟ ಮಾಡುವವರು ಹಾಗೂ ಬಳಕೆ ಮಾಡುವವರಿಗೆ ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ದಂಡ ವಿಧಿಸುವುದು ಒಂದೆಡೆಯಾದರೆ ಜನರಿಗೆ ಸುಲಭವಾಗಿ ಬಟ್ಟೆ ಬ್ಯಾಗ್‌ಗಳು ಎಲ್ಲೆಡೆ ಕಡಿಮೆ ದರಕ್ಕೆ ದೊರೆಯುವಂತೆ ಮಾಡಬೇಕು ಎಂಬುದು ನಗರ ಪಾಲಿಕೆಯ ಉದ್ದೇಶವಾಗಿತ್ತು. ಇದಕೋಸ್ಕರ ನಗರದ ವಿವಿಧೆಡೆ ಹಣ ನೀಡಿದರೆ ಬಟ್ಟೆ ಬ್ಯಾಗ್ ನೀಡುವ ಯಂತ್ರಗಳನ್ನು ಅಳವಡಿಸಲು ನಗರ ಪಾಲಿಕೆ ಯೋಜನೆ ರೂಪಿಸಿತ್ತು. ಈ ಯೋಜನೆಯು ಅನುದಾನದ ಕೊರತೆಯಿಂದ ಜಾರಿಗೆ ಬಂದಿಲ್ಲ.
ಪ್ರವಾಸಿ ತಾಣಗಳು, ದೇವಾಲಯ, ಮಾರುಕಟ್ಟೆ, ಜನನಿಬಿಡ ಪ್ರದೇಶಗಳಲ್ಲಿ ಈ ಯಂತ್ರವನ್ನು ಅಳವಡಿಸಲು ಉದ್ದೇಶಿಸಲಾಗಿತ್ತು. ಗೂಗಲ್, ಫೋನ್ ಪೇ ಮೂಲಕ ಜನರು ಈ ಯಂತ್ರದಲ್ಲಿ ಸ್ಕಾೃನ್ ಮಾಡಿ 10 ರೂ. ಪಾವತಿಸಿ ಬಟ್ಟೆ ಬ್ಯಾಗ್ ಪಡೆಯಬಹುದಿತ್ತು. ಗೂಗಲ್, ಫೋನ್ ಪೇ ಇಲ್ಲದವರು 10 ರೂ.ನ ಒಂದು ಕಾಯಿನ್ ಅಥವಾ 5 ರೂ.ನ ಎರಡು ಕಾಯಿನ್‌ಗಳನ್ನು ಹಾಕಿ ಬ್ಯಾಗ್‌ಗಳನ್ನು ಪಡೆಯಬಹುದಿತ್ತು.
ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ನಗರದ ವಿವಿಧೆಡೆ ಪ್ಲಾಸ್ಟಿಕ್ ಬಾಟಲಿಗಳ ಮರು ಬಳಕೆಯ ಯಂತ್ರಗಳು ಹಾಗೂ ಹಣ ನೀಡಿದರೆ ಬಟ್ಟೆ ಬ್ಯಾಗ್ ನೀಡುವ ಯಂತ್ರಗಳನ್ನು ಅಳವಡಿಸಲು ಯೋಜನೆ ಉದ್ದೇಶಿಸಲಾಗಿತ್ತು. ಆದರೆ, ಅನುದಾನದ ಕೊರತೆಯಿಂದ ಯೋಜನೆ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಯೋಜನೆ ಜಾರಿಗೆ ಕ್ರಮ ವಹಿಸಲಾಗುವುದು. ಈ ಯಂತ್ರಗಳನ್ನು ಅಳವಡಿಸಿದ ನಂತರ ಯಂತ್ರಗಳ ಬಳಕೆ ಪ್ರಮಾಣ ಹೆಚ್ಚಾದರೆ ನಗರದಲ್ಲಿ ಪ್ಲಾಸ್ಟಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಡಾ.ವೆಂಕಟೇಶ್, ನಗರ ಪಾಲಿಕೆ ಆರೋಗ್ಯಾಧಿಕಾರಿ