ಮೈಸೂರಿನಲ್ಲಿ ಹುತಾತ್ಮ ಯೋಧರ ಮಡದಿ, ತಾಯಂದಿರಿಗೆ ಗೌರವ

3
Published on

ಮೈಸೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯಿಂದ ಹುತಾತ್ಮ ಯೋಧರ ನೆನಪಿನಲ್ಲಿ ಅವರ ತಾಯಂದಿರು ಮತ್ತು ಮಡದಿಯರನ್ನು ಗೌರವಿಸಲಾಯಿತು.

ನಗರದ ಪುರಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧ ಹೇಮಚಂದ್ರ ಅವರ ತಾಯಿ ಲಕ್ಷ್ಮೀ, ಎ.ಪಿ.ಪ್ರಕಾಶ್ ಅವರ ತಾಯಿ ಸರೋಜಾ, ಸಕ್ರಿಯ ನಾಯಕ್ ಅವರ ಪತ್ನಿ ಜ್ಯೋತಿ, ಸುಂದರ್ ಅವರ ತಾಯಿ ಮಹದೇವಿ, ಕಿರಣ್ ಕುಮಾರ್ ಅವರ ಪತ್ನಿ ಸರಳಾ, ರಮೇಶ ಕುಂದಪ್ಪ ಅವರ ಪತ್ನಿ ಲಕ್ಷ್ಮೀ ಪಾಟೀಲ್, ಮಹೇಶ್ ಅವರ ತಾಯಿ ರತ್ನಮ್ಮ, ನಾಯಕ್ ಶಿವನಾಂದ ಅವರ ಪತ್ನಿ ಸುವರ್ಣಾ, ಸುಧೀರ್ ಅವರ ತಾಯಿ ವಿಮಲಾ, ಜಿ.ಶರತ್ ಅವರ ತಾಯಿ ಬಾಲಮಣಿ, ಜಿ.ಡಿ.ಗುರು ಅವರ ಪತ್ನಿ ಕಲಾವತಿ ಮತ್ತು ಜಿ.ಡಿ.ಸತೀಶ ಅವರ ತಾಯಿ ಸಾವಿತ್ರಮ್ಮ ಅವರಿಗೆ ಮೈಸೂರು ಪೇಟ, ಹಾರ-ಶಾಲು ಹಾಕಿ ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ದೇಶದ ರಕ್ಷಣೆಗಾಗಿ ಯೋಧರು ತಮ್ಮ ಪ್ರಾಣವನ್ನೇ ಬಲಿ ಕೊಡುಲು ಸಿದ್ಧರಾಗಿದ್ದಾರೆ. ಇಂತಹ ದೇಶ ಸೇವೆ ಸಲ್ಲಿಸಲು ಮಕ್ಕಳನ್ನು ನೀಡುವ ತಾಯಂದಿರು, ದೃಢ ನಿರ್ಧಾರ ಮಾಡುವ ಪತ್ನಿಯರ ಕೊಡುಗೆ ಕೂಡ ಅಪಾರ ಎಂದು ಸ್ಮರಿಸಿದರು.

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ದೇಶದ ಉಳಿವಿಗೆ ನಿಸ್ವಾರ್ಥ ಸೇವೆ ಸಲ್ಲಿಸಿ ಹುತಾತ್ಮರಾದ ಯೋಧ ಕುಟುಂಬಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ರಾಜ್ಯವು ಆರ್ಥಿಕ ಹಾಗೂ ಉದ್ಯೋಗ ಕೇಂದ್ರವಾಗಿ ವ್ಯಾಪಕವಾಗಿ ಬೆಳೆಯುತ್ತಿದೆ. ವಿವಿಧ ರಾಜ್ಯದ ಜನರು ಇಲ್ಲಿಗೆ ಆಗಮಿಸಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕನ್ನಡದ ಉಳಿವಿಗೆ, ಏಳಿಗೆಗೆ ನಾವೆಲ್ಲರೂ ಹೆಚ್ಚಿನ ಶ್ರಮವಹಿಸಬೇಕು ಎಂದರು.

ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಕರ್ನಾಟಕದ ಏಕೀಕರಣ ಸಂದರ್ಭದಲ್ಲಿ ಹಲವು ಕನ್ನಡ ಪರ ಸಂಘಟನೆಯ ಹೋರಾಟಗಾರರು ಶ್ರಮಿಸಿದ್ದಾರೆ. ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಹೋರಾಟದ ಮಾಡಿದವರಲ್ಲಿ ಮೈಸೂರಿನವರೇ ಜಾಸ್ತಿ. ಇವರೆಲ್ಲೂ ಇಂದು ಕಷ್ಟದ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕನ್ನಡಪರ ಹೋರಾಟಗಾರರಿಗೆ ಸರ್ಕಾರ ಗೌರವಧನ ನೀಡಬೇಕು ಎಂದು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷೆ ಬಿ.ಪಿ.ಸುಶೀಲಾ, ಛಲವಾದಿ ಮಹಾಸಾಭದ ಅಧ್ಯಕ್ಷೆ ವಾಣಿ ಕೆ.ಶಿವರಾಮ್, ರೈತ ಪರ್ವದ ಅಧ್ಯಕ್ಷ ಅರುಣ್ ಕುಮಾರ್, ಮುಖಂಡರಾದ ರಂಜನ್ ನಾಗೇಂದ್ರ, ಗುತ್ತಿಗೆದಾರ ಎಂ. ಪವನ್‌ಕುಮಾರ್, ಅಖಿಲ ಭಾರತ ಗಾಣಿಗ ಮಹಾಸಭಾ ಅಧ್ಯಕ್ಷ ವಿಜಯ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net