ಮೈಸೂರಿಗೆ ಬೇಕಿದೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು

mysore
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಕೊರತೆ ಈಗಲಾದರೂ ನೀಗಲಿದೆಯೇ?

ರಾಜ್ಯ ಸರ್ಕಾರದ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆ ಜಿಲ್ಲೆಯಲ್ಲಿ ಕೇಳಿಬರುತ್ತಿರುವ ಪ್ರಶ್ನೆ ಇದು.

ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ.16ರಂದು ಆಯ್ಯವಯ ಮಂಡನೆ ಮಾಡಲಿದ್ದಾರೆ. ಬಹಳ ವರ್ಷಗಳ ಈ ಬೇಡಿಕೆಗೆ ವರುಣ ಕ್ಷೇತ್ರದ ಶಾಸಕರೂ ಆಗಿರುವ ಸಿಎಂ ಸ್ಪಂದಿಸಲಿದ್ದಾರೆಯೇ ಎಂಬ ನಿರೀಕ್ಷೆ ಮೂಡಿದೆ. ಇದರಿಂದಾಗಿ ಬಜೆಟ್‌ನತ್ತ ಜಿಲ್ಲೆಯ ಚಿತ್ತ ನೆಟ್ಟಿದೆ.

ನಗರದಲ್ಲಿ ವರ್ಷದಿಂದ ವರ್ಷಕ್ಕೆ ತಾಂತ್ರಿಕ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿವೆ. ಕೆಲವೆಡೆ ಗುಣಮಟ್ಟ ಶಿಕ್ಷಣ ದೊರೆಯುತ್ತಿಲ್ಲ. ಅದೇ ಸರ್ಕಾರಿ ಕಾಲೇಜು ಸ್ಥಾಪನೆಯಾದರೆ ಬಡವರಿಗೆ ಸಹಾಯವಾಗುತ್ತದೆ. ಆದ್ದರಿಂದ ಈ ಕುರಿತು ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಬೇಕು.

ಮೈಸೂರಿನಲ್ಲಿ 15 ಖಾಸಗಿ ಬಿಇ ಕಾಲೇಜು

ಶೈಕ್ಷಣಿಕ ತಾಣವಾದ ಮೈಸೂರಿನಲ್ಲಿ ಪೂರ್ವ ಪ್ರಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣದ ವರೆಗೂ ಅತ್ಯುತ್ತಮ ಸರ್ಕಾರಿ ಶೈಕ್ಷಣಿಕ ಕೇಂದ್ರಗಳಿವೆ. ಆದರೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮಾತ್ರ ಇಲ್ಲ ಎಂಬುದು ಅಚ್ಚರಿ. ಈ ಕೊರತೆ ಜಿಲ್ಲೆಯನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ಬರೋಬ್ಬರಿ 15 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿವೆ. ಈ ಪೈಕಿ ಸರ್ಕಾರಿ ಬಿಇ ಕಾಲೇಜು ಇಲ್ಲ. ಎಸ್‌ಜೆಸಿಇ, ವಿದ್ಯಾವರ್ಧಕ, ಎನ್‌ಐಇ, ಎಂಐಟಿ, ಎಟಿಎಂಇ, ವಿದ್ಯಾವಿಕಾಸ್, ಜಿಎಸ್‌ಎಸ್‌ಎಸ್ ಮಹಿಳಾ ಕಾಲೇಜು, ಮೈಸೂರು ರಾಯಲ್ ಇನ್ಸ್‌ಸಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದಂತೆ ಇನ್ನಿತರ ತಾಂತ್ರಿಕ ಕಾಲೇಜುಗಳಿವೆ. ಈ ಪೈಕಿ ಎಸ್‌ಜೆಸಿಇ, ಎನ್‌ಐಇನಲ್ಲಿ ಪ್ರತ್ಯೇಕ ಸಂಜೆ ಬಿಇ ಕಾಲೇಜು ಕಾರ್ಯ ನಿರ್ವಹಿಸುತ್ತಿವೆ. ವಾಸ್ತುಶಿಲ್ಪ ಶಿಕ್ಷಣಕ್ಕೆ ಮೀಸಲಾಗಿರುವ ಮೈಸೂರು ಒಡೆಯರ್ ಸೆಂಟರ್ ಆಫ್ ಆರ್ಕಿಟೆಕ್ಚರ್ ಕಾಲೇಜು ಸಹ ಇದೆ.

ಮೈಸೂರು ವಿಶ್ವವಿದ್ಯಾಲಯದ ಬಿಇ ಕಾಲೇಜು ಕಳೆದ ನಾಲ್ಕು ವರ್ಷದಿಂದ ಶೈಕ್ಷಣಿಕ ಚಟುವಟಿಕೆ ನಡೆಸುತ್ತಿದೆ. ಬೆಳಗಾವಿ ಕೇಂದ್ರೀತ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯದ(ವಿಟಿಯು) ಪ್ರಾದೇಶಿಕ ಕೇಂದ್ರದಲ್ಲೇ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದೆ. ಹೊಸದಾಗಿ ಒಂದು ಕೋರ್ಸ್ ಸೇರಿದಂತೆ 4 ಕೋರ್ಸ್‌ಗಳನ್ನು ಇಲ್ಲಿ ಕಲಿಸಲಾಗುತ್ತಿದೆ. ಇಷ್ಟೆಲ್ಲ ತಾಂತ್ರಿಕ ಶಿಕ್ಷಣದ ಕಣಜವಾಗಿರುವ ಜಿಲ್ಲೆಗೆ ಒಂದು ಸರ್ಕಾರಿ ತಾಂತ್ರಿಕ ಕಾಲೇಜು ಸ್ಥಾಪನೆ ಯಾಗಬೇಕು ಎಂದು ಏಕೆ ಅನಿಸಲಿಲ್ಲ? ಎಂಬ ಪ್ರಶ್ನೆ ಮೂಡುತ್ತದೆ.

ಅಕ್ಕಪಕ್ಕದ ಜಿಲ್ಲೆಯಲ್ಲಿವೆ ಸರ್ಕಾರಿ ಬಿಇ ಕಾಲೇಜುಗಳು

ಅಕ್ಕಪಕ್ಕದ ಜಿಲ್ಲೆಯಲ್ಲೂ ಇಂಜಿನಿಯರಿಂಗ್ ಕಾಲೇಜು ಇದೆ. ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಸೇರಿದಂತೆ ಮಂಡ್ಯ ಜಿಲ್ಲೆಯಲ್ಲಿ 2 ಬಿಇ ಕಾಲೇಜುಗಳಿವೆ. ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಚಾಮರಾಜನಗರದಲ್ಲಿ ಸರ್ಕಾರಿ ತಾಂತ್ರಿಕ ಕಾಲೇಜು ಇದೆ. ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದಿರುವ ಮೈಸೂರು ಜಿಲ್ಲೆಯಲ್ಲಿ ಮಾತ್ರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಲ್ಲ ಎಂಬುದು ಗಮನಾರ್ಹ ಸಂಗತಿ.


ಇತ್ತೀಚಿನ ದಶಕದಲ್ಲಿ ಹಾಸನ, ಬೆಂಗಳೂರು, ರಾಮನಗರ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಹಾವೇರಿ, ರಾಯಚೂರು, ಕಾರವಾರ ಸೇರಿದಂತೆ 10 ಕಡೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲಾಗಿದೆ. ನೂರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಮೈಸೂರಿನಲ್ಲಿ ತಾಂತ್ರಿಕ ಕಾಲೇಜು ಸ್ಥಾಪನೆಯ ಬೇಡಿಕೆ ಮಾತ್ರ ಇನ್ನು ಈಡೇರಿಲ್ಲ.

ಡಿಪ್ಲೊಮಾ ಕೋರ್ಸ್‌ಗೆ ಒಲವು:

ಸರ್ಕಾರಿ ಬಿಇ ಕಾಲೇಜು ಇಲ್ಲದೆ ಇರುವುದರಿಂದ ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ದಾಖಲಾಗುತ್ತಿದ್ದಾರೆ. ಇಲ್ಲವೆ ಬೇರೆ ಜಿಲ್ಲೆಗಳಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಹೆಚ್ಚಿನ ಡೊನೇಷನ್ ಹೊರೆಯ ಕಾರಣಕ್ಕೆ ಎಷ್ಟೋ ವಿದ್ಯಾರ್ಥಿಗಳು ಬಿಇ ಬಿಟ್ಟು ಡಿಪ್ಲೋಮಾ ಮತ್ತಿತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಾರೆ. ನಗರದಲ್ಲೇ ಸರ್ಕಾರಿ ತಾಂತ್ರಿಕ ವಿದ್ಯಾಲಯ ನಿರ್ಮಾಣಗೊಂಡರೆ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಡಿಮೆ ಖರ್ಚಿನಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳಬಹುದಾಗಿದೆ. ಕಲಿಕೆಗೆ ಉತ್ತಮ ವಾತಾವರಣ ಹೊಂದಿರುವ ಮೈಸೂರಿನಲ್ಲಿ ಬಿಇ ಕಾಲೇಜು ಸ್ಥಾಪನೆಯಾಗುವುದರಿಂದ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಹಕಾರಿ ಆಗಲಿದೆ.

ಪಾಲಿಟೆಕ್ನಿಕ್ ಮೇಲ್ದರ್ಜೆಗೇರಿಸಿ:

ನಗರದಲ್ಲಿ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್, ಮೇಟಗಳ್ಳಿಯಲ್ಲಿ ಸರ್ಕಾರಿ ಪರಿಕರ ಕೊಠಡಿ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಕಾರ್ಯನಿರ್ವಹಿಸುತ್ತಿದೆ. ಇಲ್ಲಿಗೆ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಇದರಲ್ಲಿ ಒಂದನ್ನು ಉನ್ನತೀಕರಣಗೊಳಿಸಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆಗಿ ಪರಿವರ್ತನೆ ಮಾಡಬಹುದು. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಯೋಚಿಸಬೇಕು.

ನಗರದಲ್ಲಿ ಸರ್ಕಾರಿ ತಾಂತ್ರಿಕ ಕಾಲೇಜು ಸ್ಥಾಪನೆ ಮಾಡಬೇಕು ಎಂಬುದು ಅನೇಕ ವರ್ಷದ ಬೇಡಿಕೆ. ಈ ಕುರಿತು ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಪ್ರಸ್ತಕ ಬಜೆಟ್‌ನಲ್ಲಿಯಾದರೂ ಈ ಕುರಿತು ಘೋಷಣೆ ಮಾಡಬೇಕು.
ಮರಿತಿಬ್ಬೇಗೌಡ, ವಿಧಾನಪರಿಷತ್ ಸದಸ್ಯ

ಮೈಸೂರು ನಗರದಲ್ಲಿ ಬಹಳಷ್ಟು ಇಂಜಿನಿಯರಿಂಗ್ ಕಾಲೇಜುಗಳಿವೆ. ಮೈಸೂರು ವಿಶ್ವವಿದ್ಯಾಲಯ ಮತ್ತು ನಮ್ಮ ವಿಟಿಯು ಮೈಸೂರು ಪ್ರಾದೇಶಿಕ ಕ್ಯಾಂಪಸ್‌ನಲ್ಲೂ ತಾಂತ್ರಿಕ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಹೀಗಾಗಿ ಮೈಸೂರಿಗೆ ಮತ್ತೊಂದು ಸರ್ಕಾರಿ ತಾಂತ್ರಿಕ ಕಾಲೇಜಿನ ಅಗತ್ಯ ಇಲ್ಲ.
ಡಾ.ಟಿ.ಪಿ.ರೇಣುಕಾಮೂರ್ತಿ, ಮೈಸೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ, ವಿಟಿಯು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net