ನಂಜನಗೂಡು ಪಯಣ ಮತ್ತಷ್ಟು ದೂರ…!

mysuru-nanjangud-road
Published on

ಮೈಸೂರು: ಭದ್ರತೆ ಹಾಗೂ ಜನರಿಗೆ ಕಿರಿಕಿರಿ ಉಂಟಾಗುವುದನ್ನು ತಪ್ಪಿಸುವ ಸಲುವಾಗಿ ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ (ಮೈಸೂರು ವಿಮಾನ ನಿಲ್ದಾಣದ ರನ್ ವೇ ಹಾದು ಹೋಗುವ ಸ್ಥಳದಲ್ಲಿ) ನಿರ್ಮಿಸಲು ಉದ್ದೇಶಿಸಲಾಗಿದ್ದ ಅಂಡರ್‌ಪಾಸ್ ಯೋಜನೆ ಕೈಬಿಟ್ಟು, ರಸ್ತೆ ತಿರುವು ಮಾಡಲು ಯೋಜನೆ ರೂಪಿಸಲಾಗಿದೆ ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಹಾಗೂ ಬದಲಾದ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.

ಪ್ರಸ್ತುತ ಮೈಸೂರು-ನಂಜನಗೂಡು ಮಾರ್ಗ 23 ಕಿ.ಮೀ. ಹೊಂದಿದ್ದು, ರಸ್ತೆ ತಿರುವ ಯೋಜನೆ ಜಾರಿಯಾದರೆ ನಂಜನಗೂಡು ಪಯಣ 7 ಕಿ.ಮೀ. ಹೆಚ್ಚಾಗಲಿದೆ. ನಗರದ ದಳವಾಯಿ ಕೆರೆಯಲ್ಲಿ ಹೆದ್ದಾರಿಯು ತಿರುವು ಪಡೆದು ಟೋಲ್ ಪ್ಲಾಜಾ ಬಳಿಯಲ್ಲಿ ಹಳೆಯ ಹೆದ್ದಾರಿಗೆ ಸೇರಿಕೊಳ್ಳಲಿದೆ ಎಂದರು.

ಮೈಸೂರು-ನಂಜನಗೂಡು ಹೆದ್ದಾರಿಯನ್ನು 6 ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. 6 ಪಥದ ಜತೆಗೆ ಎರಡು ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣಗೊಳ್ಳಲಿದೆ. ಅಂಡರ್‌ಪಾಸ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 510 ಕೋಟಿ ರೂ.ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್ ಎಐ) ನೀಡಲಾಗುವುದು. ಎನ್‌ಎಚ್‌ಎಐನವರು ಹೆದ್ದಾರಿ ತಿರುವು ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಹೆದ್ದಾರಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net