ಮೈಸೂರು: ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ ನ. 8ರಿಂದ 10ರವರೆಗೆ ‘ಮೈಸೂರು ಸಂಗೀತ ಸುಗಂಧ ಫೆಸ್ಟಿವಲ್’ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ದಾಸ ಪರಂಪರೆಯನ್ನು ಹಿರಿಮೆಗೊಳಿಸುವ ಹಿನ್ನೆಲೆಯಲ್ಲಿ ‘ಕರ್ಣಾಟಕ ಸಂಗೀತ’ ಆಯೋಜಿಸಲಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಉತ್ಸವಕ್ಕೆ ಚಾಲನೆ ನೀಡಲಿದ್ದು, ರಾಜ್ಯದ ವಿವಿಧ ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಪ್ರಾದೇಶಿಕ ನಿರ್ದೇಶಕ ಡಾ. ವೆಂಕಟೇಶನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಗೀತ ಪರಂಪರೆ ಪರಿಚಯಿಸುವ ಜತೆಗೆ ಕರ್ನಾಟಕದ ಪ್ರವಾಸಿತಾಣ, ಊಟೋಪಚಾರ, ಕೈಗಾರಿಕೆಗಳು, ಕರಕುಶಲ ಕಲೆಯನ್ನು ಪರಿಚಯಿಸಲಾಗುವುದು. ಇದರಿಂದ ಸಾಂಸ್ಕೃತಿಕ ತಾಣವಾಗಿರುವ ಮೈಸೂರಿನ ಗೌರವವನ್ನು ಹೆಚ್ಚಿಸುವುದಲ್ಲದೆ ಪ್ರವಾಸೋದ್ಯಮ, ಆರ್ಥಿಕ ಲಾಭ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯನ್ನು ಉತ್ತೇಜಿಸಲು ಈ ಉತ್ಸವವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.
ಕರ್ನಾಟಕದ ರಾಜ್ಯ ಅಲ್ಲದೆ ಇನ್ನಿತರ ಪ್ರಾಂತ್ಯಗಳ ಕಲಾವಿದರ ಪ್ರತಿಭೆಯನ್ನು ಪ್ರಸ್ತುತ ಪಡಿಸುತ್ತವೆ, ಪ್ರೇಕ್ಷಕರಿಗೆ ಸಂಪೂರ್ಣ ಸಂಗೀತ ಅನುಭವವನ್ನು ಒದಗಿಸುತ್ತದೆ. ಈ ಹಿಂದೆ ಹೈದರಾಬಾದ್‌ನಲ್ಲಿ ಪ್ರಥಮವಾಗಿ ಉತ್ಸವ ನಡೆಸಿದ್ದು, ಈಗ ಕರ್ನಾಟಕದ ಮೈಸೂರಿನಲ್ಲಿ ಪ್ರಥಮ ಬಾರಿಗೆ ಉತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮೂರು ದಿನಗಳ ಈ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣ ಸೇರಿದಂತೆ ಇನ್ನಿತರ ಚಾನಲ್‌ಗಳ ಮೂಲಕ ನೇರ ಪ್ರಸಾರ ವ್ಯವಸ್ಥೆ ಮಾಡಲಾಗುವುದು. ಕರ್ನಾಟಕದ ಸಾಂಪ್ರದಾಯಿಕ ಹಸ್ತಕಲೆಗಳು ಮತ್ತು ಹತ್ತಿಯ ವಸ್ತ್ರಗಳ ಪ್ರದರ್ಶನವನ್ನು ಹಸ್ತಕಲಾ ಆಯುಕ್ತರು ಮತ್ತು ಹತ್ತಿಯ ವಸ್ತ್ರಗಳ ಆಯುಕ್ತರ ಮೂಲಕ ಆಯೋಜಿಸಲಾಗುತ್ತದೆ. ಕಾರ್ಯಾಗಾರ, ವಸ್ತುಗಳ ಮಾರಾಟ, ಪ್ರದರ್ಶನಕ್ಕೆ ವ್ಯವಸ್ಥೆ ಇರಲಿದೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ ಸುದರ್ಶನ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ಇತರರು ಇದ್ದರು.