ಮೇಲ್ದರ್ಜೆಗೇರಲಿದೆ ಮೈಸೂರು ನಗರಪಾಲಿಕೆ: ಸಚಿವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ

20
Published on

ಮೈಸೂರು: ಮೈಸೂರು ನಗರ ಪಾಲಿಕೆಯನ್ನು ಮೇಲ್ದರ್ಜೆಗೇರಿಸಿ ಬೃಹತ್ ಮೈಸೂರು ಮಹಾನಗರ ಪಾಲಿಕೆ ಮಾಡುವ ಸಂಬಂಧ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ (ಭೈರತಿ) ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸಲಾಗಿತ್ತು.

ನಗರ ಪಾಲಿಕೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ ಪ್ರಸ್ತಾಪಿತ ಬೃಹತ್ ಮೈಸೂರು ಮಹಾನಗರ ಪಾಲಿಕೆಯ ಎಲ್ಲೆ (ಗಡಿ)ಯನ್ನು ಗುರುತಿಸಿ 2018ರ ವಾರ್ಡ್ ಮರು ವಿಂಗಡಣೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಹಾಲಿ ಮೈಸೂರು ಮಹಾನಗರ ಪಾಲಿಕೆ ಸರಹದ್ದಿಗೆ ಹೊಂದಿಕೊಂಡಂತೆ ಇರುವ ನಗರಸಭೆ, ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿ ಯೋಜನಾಬದ್ಧ ಬೆಳವಣಿಗೆಗೆ ಉದ್ದೇಶಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳ ಅನುಮೋದನೆ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮೈಸೂರು ಸುತ್ತ ಮುತ್ತಲಿನ 20ರಿಂದ 30 ಹಳ್ಳಿಗಳನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ವಿಸ್ತೃತವಾದ ಯೋಜನಾ ವರದಿಯನ್ನು ಸಿದ್ಧಪಡಿಸಿಕೊಂಡು ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲೂ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದರು.

ಪ್ರಸ್ತುತ ಮೈಸೂರು ನಗರದಲ್ಲಿ 13.30 ಲಕ್ಷ ಜನಸಂಖ್ಯೆ ಇದ್ದು, ಮೈಸೂರು ಮಹಾನಗರ ಪಾಲಿಕೆ ಸರಹದ್ದಿಗೆ ಹೊಂದಿಕೊಂಡಂತೆ ಇರುವ ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳನ್ನು ಸೇರಿಸಿಕೊಂಡರೆ 16.80 ಲಕ್ಷ ಜನಸಂಖ್ಯೆ ಆಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಹೇಳಿದರು.

ಈಗಾಗಲೇ ಮೈಸೂರು ಮಹಾನಗರ ಪಾಲಿಕೆ ಸರಹದ್ದಿಗೆ ಹೊಂದಿಕೊಂಡಿರುವ ಕೆಲವು ಪ್ರದೇಶಗಳಿಗೆ ಪಾಲಿಕೆಯಿಂದಲೇ ಕುಡಿಯುವ ನೀರಿನ ಸವಲತ್ತನ್ನು ಒದಗಿಸಲಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ ಹೆಚ್ಚಿನ ಬಡಾವಣೆಗಳು ಸಹ ಅಭಿವೃದ್ಧಿಗೊಂಡಿವೆ. ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಬೇಡಿಕೆಯೂ ಹೆಚ್ಚಾಗಿರುತ್ತದೆ. ಅದರಂತೆ ಸೇವೆ ಪಾಲಿಕೆಯಿಂದ ವಿಸ್ತರಿಸಬೇಕಾಗಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಗೆ ಕೊರತೆ ಇರುವುದಿಲ್ಲ. ಹೀಗಿರುವಾಗ ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನು ರಚಿಸಲು ಯಾವುದೇ ರೀತಿಯ ಅಡೆತಡೆ ಇರುವುದಿಲ್ಲ. ಆದ್ದರಿಂದ ತ್ವರಿತವಾಗಿ ಪ್ರಕ್ರಿಯೆ ಕೈಗೆತ್ತಿಕೊಳ್ಳಿ. ಈ ಮೂಲಕ ಮೈಸೂರು ಸುತ್ತ ಮುತ್ತಲಿನ ಗ್ರಾಮಗಳ, ಬಡಾವಣೆಗಳನ್ನು ಮೈಸೂರು ಮಹಾನಗರ ಪಾಲಿಕೆ ಆಡಳಿತ ವ್ಯಾಪ್ತಿಗೆ ಒಳಪಡಿಸಿ ಎಂದು ಭೈರತಿ ಸುರೇಶ ಸೂಚಿಸಿದರು.

ನಗರದ ಸುತ್ತಮುತ್ತ ಇರುವ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ, ಕಡಕೊಳ ಮತ್ತು ಬೋಗಾದಿ ಪಟ್ಟಣ ಪಂಚಾಯಿತಿ, ಇಲವಾಲ ಗ್ರಾಮ ಪಂಚಾಯಿತಿಯ ಇಲವಾಲ ಗ್ರಾಮ, ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ, ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ, ಆಲನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ನಾಗನಹಳ್ಳಿ ಗ್ರಾಮ ಪಂಚಾಯಿತಿಯ ಶ್ಯಾದನಹಳ್ಳಿ ಗ್ರಾಮ ಮೈಸೂರು ಮಹಾನಗರ ಪಾಲಿಕೆಯ ಸರಹದ್ದಿಗೆ ಸೇರಿಸಬೇಕು ಎಂದರು.

ಇವುಗಳಲ್ಲಿ ಕೆಲ ಸ್ಥಳೀಯ ಸಂಸ್ಥೆಯ ಕೌನ್ಸಿಲ್ ಸಭೆಯಲ್ಲಿ ಬೃಹತ್ ಮೈಸೂರು ಮಹಾನಗರ ಪಾಲಿಕೆಗೆ ಸೇರಿಸುವ ಪ್ರಸ್ತಾವನೆಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿರುತ್ತಾರೆ. ಬಾಕಿ ಉಳಿದ ಸ್ಥಳೀಯ ಸಂಸ್ಥೆಯ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾವನೆಯನ್ನು ಇರಿಸಿ ಅನುಮೋದನೆಯನ್ನು ಪಡೆದು ಸರ್ಕಾರಕ್ಕೆ ಅದಷ್ಟು ಬೇಗ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳಾನ್, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ. ಶರತ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್. ಸೆಲ್ವಮಣಿ, ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತ ಆರ್.ವೆಂಕಟಾಚಲಪತಿ, ಮೈಸೂರು ನಗರ ಪಾಲಿಕೆ ಆಯುಕ್ತ ತನ್ವೀರ್ ಶೇಖ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಘುನಂದನ್, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕ ಎನ್.ಕೆ.ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net