

ಆರ್.ಕೃಷ್ಣ ಮೈಸೂರು
ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಶೇ.100ರಷ್ಟು ತೆರಿಗೆ ಸಂಗ್ರಹ ಗುರಿ ಸಾಧನೆ ಇಟ್ಟುಕೊಂಡಿರುವ ಮೈಸೂರು ನಗರಪಾಲಿಕೆ, ತೆರಿಗೆ ಪಾವತಿಸದವರಿಗೆ ನೋಟಿಸ್ ಜಾರಿ ಮಾಡುವ ಮೂಲಕ ಬಿಸಿ ಮುಟ್ಟಿಸಲು ಮುಂದಾಗಿದೆ.
ಆರ್ಥಿಕ ವರ್ಷಾಂತ್ಯದೊಳಗೆ ಶೇ. 100ರಷ್ಟು ತೆರಿಗೆ ವಸೂಲಿಯಾಗಬೇಕು ಎಂದು ಕಂದಾಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗೆ ಗುರಿ ನಿಗದಿಪಡಿಸಿರುವ ನಗರಪಾಲಿಕೆ ಆಯುಕ್ತರು, ಬಹುತೇಕ ಪೂರ್ಣ ಪ್ರಮಾಣದಲ್ಲಿ ಬಾಕಿ ಇರುವ ತೆರಿಗೆ ಸಂಗ್ರಹ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.
ತೆರಿಗೆ ಪಾವತಿಸದ ತೆರಿಗೆದಾರರಿಗೆ ನೋಟಿಸ್ ನೀಡುವುದಲ್ಲದೇ ಅದಕ್ಕೂ ಜಗ್ಗದವರಿಗೆ ಸೌಕರ್ಯ ಕಡಿತಗೊಳಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ ಕಂದಾಯ ವಸೂಲಿಗೆ ರಸ್ತೆಗಿಳಿದಿರುವ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ, ದೊಡ್ಡ ಮಟ್ಟದಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ನೋಟಿಸ್ ನೀಡುತ್ತಿದ್ದಾರೆ.
ಕಳೆದ ವರ್ಷ ಶೇ.83ರಷ್ಟು ಕಂದಾಯ ಸಂಗ್ರಹಣೆ ಅಗಿತ್ತು. ಈ ಬಾರಿ ಆ ಗುರಿಯನ್ನು ಮೀರಿ ಸಾಧನೆ ಮಾಡುವ ಮೂಲಕ ಪೂರ್ಣ ತೆರಿಗೆ ಸಂಗ್ರಹಿಸಬೇಕು ಎನ್ನುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಬಾರಿಯ ಆರ್ಥಿಕ ವರ್ಷದಲ್ಲಿ ಡಿಸೆಂಬರ್ ಅಂತ್ಯದವರೆಗೆ ಶೇ. 75ರಷ್ಟು ತೆರಿಗೆ ಸಂಗ್ರಹವಾಗಿದೆ. ತಿಂಗಳಿನಿಂದ ಅಧಿಕಾರಿ, ಸಿಬ್ಬಂದಿಯೊಂದಿಗೆ ನಿರಂತರವಾಗಿ ಸಭೆ ನಡೆಸಿ ತೆರಿಗೆ ವಸೂಲಿ ಮಾಡುವ ಕುರಿತು ನಿರ್ದೇಶನ ನೀಡಲಾಗುತ್ತಿದೆ. ಅಲ್ಲದೆ ಪ್ರತಿ ಹಂತದಲ್ಲಿಯೂ ಪ್ರಗತಿ ಪರಾಮರ್ಶೆ ಸಹ ನಡೆಸಲಾಗುತ್ತಿದೆ.
ಪಾಲಿಕೆಗೆ ಆಸ್ತಿ ಸಂಖ್ಯೆ ಹೆಚ್ಚಳ:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳು ಇತ್ತೀಚೆಗೆ ನಗರಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಆಸ್ತಿ ಸಂಖ್ಯೆ ಹೆಚ್ಚಳವಾಗಿದೆ. 2022-23ನೇ ಸಾಲಿನಲ್ಲಿ 1,98,752 ಆಸ್ತಿ ಪಾಲಿಕೆ ವ್ಯಾಪ್ತಿಯಲ್ಲಿದ್ದರೆ 2023-24ನೇ ಸಾಲಿನಲ್ಲಿ 2,27,893 ಆಸ್ತಿ ಸಂಖ್ಯೆ ಏರಿಕೆಯಾಗಿದ್ದು, 29,141 ಆಸ್ತಿ ಹೆಚ್ಚಳವಾಗಿದೆ. ಪಾಲಿಕೆ ವಲಯ ಕಚೇರಿ 7 ಹಾಗೂ 8ರಲ್ಲೇ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಪಾಲಿಕೆಯ ವಲಯ ಕಚೇರಿ 7 ಮತ್ತು 8ರ ವ್ಯಾಪ್ತಿಗೆ ನಗರದ ಹೃದಯ ಭಾಗದ ಬಡಾವಣೆಗಳು, ವಾಣಿಜ್ಯ ಮಳಿಗೆಗಳು ಬರುವುದರಿಂದ ಹೆಚ್ಚು ತೆರಿಗೆ ಸಂಗ್ರಹವಾಗಲಿದೆ. ವಲಯ 7ರಲ್ಲಿ 88.13 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದರೆ, ವಲಯ 8ರ ವ್ಯಾಪ್ತಿಯಲ್ಲಿ 83.58 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.
ಶೇ. 75ರಷ್ಟು ಸಾಧನೆ: 2023-24ನೇ ಸಾಲಿನಲ್ಲಿ 214.55 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಹೊಂದಲಾಗಿದ್ದು, ಡಿಸೆಂಬರ್ ಅಂತ್ಯದವರೆಗೆ 162.06 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದೆ. 2022-23ನೇ ಸಾಲಿನಲ್ಲಿ 160 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಹೊಂದಲಾಗಿದ್ದು, ಡಿಸೆಂಬರ್‌ವರೆಗೆ 106.5 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿತ್ತು.
ತೆರಿಗೆ ಹಣದಿಂದ ಪಾಲಿಕೆಯ ಅಭಿವೃದ್ಧಿ ಕಾರ್ಯ ನಡೆಯಬೇಕಾಗಿರುವುದರಿಂದ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಲಾಗಿದೆ. ಈ ವರ್ಷ ಆರ್ಥಿಕ ವರ್ಷದ ಅಂತ್ಯಕ್ಕೆ ಶೇ.100 ರಷ್ಟು ತೆರಿಗೆ ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ನೋಟಿಸ್ ನೀಡಿ ವಸೂಲಿ ಮಾಡುವಂತೆ ನಿರ್ದೇಶನ ನೀಡಲಾಗಿದೆ.
ಅಶಾದ್ ಉರ್ ರೆಹಮಾನ್ ಷರೀಫ್
ಆಯುಕ್ತರು, ಮೈಸೂರು ನಗರ ಪಾಲಿಕೆ
ಮಾಸಿಕ ತೆರಿಗೆ ಸಂಗ್ರಹ
ಏಪ್ರಿಲ್-75.77 ಕೋಟಿ ರೂ.
ಮೇ-24.15 ಕೋಟಿ ರೂ.
ಜೂನ್-15.20 ಕೋಟಿ ರೂ.
ಜುಲೈ- 11.38 ಕೋಟಿ ರೂ.
ಆಗಸ್ಟ್-7.53 ಕೋಟಿ ರೂ.
ಸೆಪ್ಟೆಂಬರ್-7.72 ಕೋಟಿ ರೂ.
ಅಕ್ಟೋಬರ್-7.94 ಕೋಟಿ ರೂ.
ನವೆಂಬರ್-5.59 ಕೋಟಿ ರೂ.
ಡಿಸೆಂಬರ್-6.74 ಕೋಟಿ ರೂ.