ಮೈಸೂರು: ಇ-ಖಾತೆ ಮಾಡುವಲ್ಲಿ ಮೈಸೂರು ನಗರಪಾಲಿಕೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಎಲ್ಲರಿಗೂ ಇ-ಖಾತೆ ಮಾಡಬೇಕು ಎನ್ನುವ ಸರ್ಕಾರದ ಗುರಿಗೆ ಸ್ಪಂದಿಸಿರುವ ನಗರಪಾಲಿಕೆ ಒಟ್ಟು 50,022 ಖಾತೆ ಮಾಡುವ ಮೂಲಕ ರಾಜ್ಯದ ಮೊದಲ ಸ್ಥಾನದಲ್ಲಿ ನಿಂತಿದೆ. ಬೆಂಗಳೂರಿನ ಬಳಿಕ ಅತಿ ವೇಗವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ ಆಸ್ತಿ ನೋಂದಣಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರತಿ ಶುಕ್ರವಾರ ಸಾರ್ವಜನಿಕರ ಅಹವಾಲು ಸ್ವೀಕಾರದ ಜತೆಗೆ ಖಾತೆ ಅಭಿಯಾನ ನಡೆಸಿಕೊಂಡು ಬರುತ್ತಿದೆ.
ಈ ಶುಕ್ರವಾರ ‘ಎ’ ಖಾತೆ ವಿಭಾಗದಲ್ಲಿ 256, ‘ಬಿ’ ವಿಭಾಗದಲ್ಲಿ 55 ಖಾತೆಗಳನ್ನು ಇ-ಖಾತೆಗೆ ಅಳವಡಿಸಿದೆ. ಇದುವರೆಗೆ ‘ಎ’ ವಿಭಾಗದಲ್ಲಿ 34,130 ಹಾಗೂ ‘ಬಿ’ ವಿಭಾಗದಲ್ಲಿ 15,892 ಖಾತೆಗಳನನ್ನು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.