

ಸದೇಶ್ ಕಾರ್ಮಾಡ್ ಮೈಸೂರು
ನೀರಿನ ಶುಲ್ಕ ಬಾಕಿ ಉಳಿಸಿಕೊಂಡವರಿಗೆ ನಗರ ಪಾಲಿಕೆ ಶುಭ ಸುದ್ದಿಯೊಂದನ್ನು ನೀಡಿದ್ದು, ‘ಬಡ್ಡಿ ನಿಶ್ಚಲ’ ಯೋಜನೆಯನ್ನು ಮತ್ತೆ 6 ತಿಂಗಳ ಅವಧಿಗೆ ವಿಸ್ತರಿಸಿದೆ. ನೀರಿನ ಶುಲ್ಕ ವಸೂಲಾತಿ ಪ್ರಮಾಣ ಹೆಚ್ಚಿಸಲು ಹಾಗೂ ಗ್ರಾಹಕರ ಮೇಲೆ ಆಗುತ್ತಿರುವ ಬಡ್ಡಿ ಹೊರೆ ತಗ್ಗಿಸಲು ಪಾಲಿಕೆ ಈ ಯೋಜನೆ ರೂಪಿಸಿದೆ.
ಸಾಕಷ್ಟು ಸಮಯದಿಂದ ನೀರಿನ ಶುಲ್ಕ ಪಾವತಿಸಲು ಬಾಕಿ ಉಳಿಸಿಕೊಂಡ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು 2022ರಲ್ಲಿ ಬಡ್ಡಿ ನಿಶ್ಚಲ ಯೋಜನೆ ಜಾರಿಗೆ ತರಲಾಯಿತು. ಈ ಯೋಜನೆಯು 2002ರ ಜುಲೈ 15 ರಿಂದ ಅನ್ವಯ ಆಗುವಂತೆ 6 ತಿಂಗಳ ಅವಧಿಗೆ ಜಾರಿಗೊಳಸಲಾಯಿತು. ಈ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರು ಯೋಜನೆಯ ಪ್ರಯೋಜನ ಪಡೆದುಕೊಂಡರು. ಹಾಗಾಗಿ ಯೋಜನೆಯ ಲಾಭ ಮತ್ತಷ್ಟು ಜನರಿಗೆ ದೊರೆಯಲಿ ಎಂಬ ಉದ್ದೇಶದಿಂದ ನಗರ ಪಾಲಿಕೆಯು ಯೋಜನೆಯನ್ನು ಎರಡನೇ ಬಾರಿಗೆ 2023ರ ಜುಲೈನಿಂದ ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಿದೆ.
ಪ್ರಸ್ತುತ ನೀರಿನ ಶುಲ್ಕ ಸಕಾಲದಲ್ಲಿ ಪಾವತಿಸದೆ ಬಾಕಿ ಉಳಿಸಿಕೊಂಡವರಿಗೆ ಬಡ್ಡಿಯ ಮೇಲೆ ಬಡ್ಡಿ ವಿಧಿಸಲಾಗುತ್ತಿದೆ. ಈ ಬಡ್ಡಿಯ ಹೊರೆಯಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಹೀಗಾಗಿ ಅಸಲು ಕಟ್ಟಲು ನಾವು ಸಿದ್ಧರಿದ್ದೇವೆ, ಬಡ್ಡಿ ಮನ್ನಾ ಮಾಡಿ ಎಂಬ ಒತ್ತಾಯ ಜನರಿಂದ ಕೇಳಿ ಬರುತ್ತಿದೆ. ಆದರೆ, ಬಡ್ಡಿ ಮನ್ನಾದ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರ ನಗರ ಪಾಲಿಕೆಗೆ ಇಲ್ಲ. ಹಾಗಾಗಿ ನಗರ ಪಾಲಿಕೆಯು ನಗರದ ಜನರ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡ್ಡಿ ಮನ್ನಾ ಪ್ರಸ್ತಾವನೆ ಸಲ್ಲಿಕೆಯಾದರೂ ಇದುವರೆಗೆ ಬಡ್ಡಿ ಮನ್ನಾ ಮಾಡುವ ಮನಸ್ಸನ್ನು ಸರ್ಕಾರ ಮಾಡಿಲ್ಲ. ಇದೀಗ ರಾಜ್ಯ ಸರ್ಕಾರ ರಾಜ್ಯದ ಜನರಿಗೆ ವಿವಿಧ ಭಾಗ್ಯಗಳನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ಆ ಯೋಜನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡುವ ಅನಿವಾರ್ಯತೆ ಇದೆ. ಹಾಗಾಗಿ ಸರ್ಕಾರ ಬಡ್ಡಿ ಮನ್ನಾದಂತಹ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಜನರ ಮೇಲಿನ ಹೊರೆ ಕಡಿಮೆ ಮಾಡಲು ನಗರ ಪಾಲಿಕೆ ರೂಪಿಸಿದ ‘ಬಡ್ಡಿ ನಿಶ್ಚಲ’ ಯೋಜನೆ ಸಹಕಾರಿಯಾಗಲಿದೆ.
ಯೋಜನೆಯಡಿ ಜನರು ತಾವು ಪಾವತಿಸಲು ಬಾಕಿ ಇರುವ ಶುಲ್ಕವನ್ನು ಒಂದೇ ಬಾರಿ ಪಾವತಿಸಿದರೆ ಹಳೆಯ ಬಡ್ಡಿಯ ಮೇಲೆ ಮತ್ತೆ ಬಡ್ಡಿ ವಿಧಿಸುವುದಿಲ್ಲ. ಸರ್ಕಾರ ಬಡ್ಡಿ ಮನ್ನಾ ಮಾಡಿದರೆ ಅದರ ಲಾಭ ಗ್ರಾಹಕರಿಗೆ ದೊರೆಯಲಿದೆ, ಒಂದುವೇಳೆ ಬಡ್ಡಿ ಮನ್ನಾ ಮಾಡದೆ ಇದ್ದರೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಆದರೆ, ಈ ಯೋಜನೆಯ ಲಾಭ ಪಡೆದು ಮತ್ತೆ ಶುಲ್ಕ ಪಾವತಿ ಬಾಕಿ ಉಳಿಸಿಕೊಂಡರೆ ಆ ಸಂದರ್ಭ ಬಡ್ಡಿ ಮೇಲೆ ಬಡ್ಡಿ ವಿಧಿಸಲಾಗುತ್ತದೆ. ಈ ಬಡ್ಡಿ ನಿಶ್ಚಲ ಯೋಜನೆಯ ಸೌಲಭ್ಯ ಕೇವಲ ಗೃಹ ಬಳಕೆಯ ಗ್ರಾಹಕರಿಗೆ ಮಾತ್ರ ದೊರೆಯಲಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ನೀರಿನ ಶುಲ್ಕ ಬಾಕಿ ಮೊತ್ತ 220 ಕೋಟಿ ರೂ. ಇತ್ತು. ಆದರೆ, ಶುಲ್ಕ ವಸೂಲಾತಿಗೆ ನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಹಾಗೂ ಬಡ್ಡಿ ನಿಶ್ಚಲ ಯೋಜನೆಯಿಂದ ಬಾಕಿ ಮೊತ್ತ ಇದೀಗ 140 ಕೋಟಿ ರೂ.ಗೆ ಇಳಿಕೆಯಾಗಿದೆ. ಬಡ್ಡಿನಿಶ್ಚಲ ಯೋಜನೆಯಡಿ 10 ಕೋಟಿ ರೂ.ವರೆಗೆ ಬಾಕಿ ಮೊತ್ತ ವಸೂಲಾತಿಯಾಗಿದೆ. ಡಿಸೆಂಬರ್ ಅಂತ್ಯಕ್ಕೆ ಒಟ್ಟು 2,711 ಬಳಕೆದಾರರು ಬಡ್ಡಿ ನಿಶ್ಚಲ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ನೀರಿನ ಶುಲ್ಕ ವಸೂಲಾತಿಯಲ್ಲಿ ಪಾಲಿಕೆ ಸಾಕಷ್ಟು ಪ್ರಗತಿ ಸಾಧಿಸಿದ್ದು, 2021-22ನೇ ಸಾಲಿನಲ್ಲಿ ಒಟ್ಟು 65 ಕೋಟಿ ರೂ. ನೀರಿನ ಶುಲ್ಕ ವಸೂಲಾತಿ ಮಾಡಿತ್ತು. 2022-23ನೇ ಸಾಲಿನಲ್ಲಿ 93 ಕೋಟಿ ರೂ. ವಸೂಲಾತಿ ಮಾಡಲಾಗಿದೆ.
ನೀರಿನ ಶುಲ್ಕ ಪಾವತಿಸಲು ಸಾಕಷ್ಟು ಸಮಯದಿಂದ ಬಾಕಿ ಉಳಿಸಿಕೊಂಡ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನಗರ ಪಾಲಿಕೆಯು ಬಡ್ಡಿ ನಿಶ್ಚಲ ಯೋಜನೆ ಜಾರಿಗೆ ತಂದಿದೆ. ಇದುವರೆಗೆ 10 ಕೋಟಿ ರೂ.ಗೂ ಹೆಚ್ಚು ಶುಲ್ಕ ಬಡ್ಡಿ ನಿಶ್ಚಲ ಯೋಜನೆಯಡಿ ವಸೂಲಾತಿಯಾಗಿದೆ. ಈ ಯೋಜನೆಯ ಸೌಲಭ್ಯ ಮತ್ತಷ್ಟು ಗ್ರಾಹಕರಿಗೆ ದೊರೆಯಲಿ ಎಂಬ ಕಾರಣಕ್ಕೆ ಡಿಸೆಂಬರ್ ಅಂತ್ಯದವರೆಗೆ ಯೋಜನೆಯನ್ನು ವಿಸ್ತರಿಸಲಾಗಿದೆ. ನಗರದ ನಾಗರಿಕರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆ ಮೂಲಕ ನಗರದ ಅಭಿವೃದ್ಧಿಗೆ ಜೋಡಿಸಬೇಕು.
ಲಕ್ಷ್ಮೀಕಾಂತ್ ರೆಡ್ಡಿ, ಆಯುಕ್ತ, ನಗರ ಪಾಲಿಕೆ