

ಮೈಸೂರು: ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗಾಗಿ ತಾಂಡವಪುರದ ಮಹಾರಾಜ ಎಜುಕೇಷನ್ ಟ್ರಸ್ಟ್ (ಎಂಐಟಿ) ಕಾಲೇಜಿನಲ್ಲಿ ಆಯೋಜಿಸಿದ್ದ ಎರಡು ವಾರಗಳ ಸಿಇಟಿ ಉಚಿತ ತರಬೇತಿ ಯಶಸ್ವಿಯಾಗಿ ನೆರವೇರಿತು.
ಎಂಐಟಿಯ ಎರಡನೇ ತಾಂತ್ರಿಕ ಮಹಾವಿದ್ಯಾಲಯವಾಗಿರುವ ತಾಂಡವಪುರ ಕೇಂದ್ರದಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭಾನ್ವಿತ, ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಮೂಲಕ ದೇಶದ ತಾಂತ್ರಿಕ ಅಭಿವೃದ್ಧಿಗೆ ಸಹಕಾರ ನೀಡುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು.
ಮೈಸೂರು ಹಾಗೂ ಸುತ್ತಮುತ್ತಲ ತಾಲೂಕು, ಜಿಲ್ಲೆಯ ಪ್ರತಿಭಾನ್ವಿತ ಅಭ್ಯರ್ಥಿಗಳ ತಾಂತ್ರಿಕ ಭವಿಷ್ಯಕ್ಕೆ ಅನುಕೂಲವಾಗಲಿ ಎಂದು ಸತತ 8 ವರ್ಷಗಳಿಂದ ಉಚಿತ ಸಿಇಟಿ ತರಬೇತಿ ನೀಡುತ್ತಾ ಬರಲಾಗುತ್ತಿದೆ. ಅದರಂತೆಯೇ 2025-2026ನೇ ಸಾಲಿನ ಅಭ್ಯರ್ಥಿಗಳಿಗಾಗಿ ಈ ಬಾರಿಯೂ ಸಹ ಇದೆ ಮಾರ್ಚ್ 20ರಿಂದ ಎರಡು ವಾರಗಳ ತನಕ ಉಚಿತ ಸಿಇಟಿ ತರಬೇತಿ, ಮಧ್ಯಾಹ್ನದ ಊಟದ ವ್ಯವಸ್ಥೆ ಹಾಗೂ ಬರುವ ಎಲ್ಲ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯವನ್ನೂ ಕಲ್ಪಿಸಲಾಗಿತ್ತು. 600ಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳು ಈ ಸೌಲಭ್ಯವನ್ನು ಬಳಸಿಕೊಂಡರು.
ಆಕಾಂಕ್ಷಿಗಳ ತರಬೇತಿಗೆ ಸಿಇಟಿ ಸಂಯೋಜಕ ಪ್ರೊ.ಎನ್.ಪ್ರದೀಪ್, ಸಿಇಟಿ ಮಾರ್ಗದರ್ಶಕ ಪ್ರೊ.ಮೊಹಮ್ಮದ್ ಸಲಮತ್, ಕಾಲೇಜಿನ ಪ್ರಾಂಶುಪಾಲ ಡಾ. ವೈ.ಟಿ. ಕೃಷೇಗೌಡ, ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಎಚ್.ಕೆ ಚೇತನ್, ಆಡಳಿತ ಮಂಡಳಿ ಪದಾಧಿಕಾರಿಗಳು, ಬೋಧಕರು ಸೇರಿದಂತೆ ಇತರರು ಸಹಕಾರ ನೀಡಿದ್ದರು.