ಬಹಿರಂಗ ಪ್ರಚಾರ ಅಂತ್ಯ

CAN_9995
Published on

ಮೈಸೂರು: ನಗರ ಪಾಲಿಕೆ ವಾರ್ಡ್ ನಂ. 18 (ಯಾದವಗಿರಿ)ರ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಫೆ.7 ರಂದು ಬೆಳಗ್ಗೆ 7ಕ್ಕೆ ತೆರೆ ಬೀಳ ಲಿದ್ದು, ಶುಕ್ರವಾರದಿಂದ ಮನೆ ಮನೆ ಪ್ರಚಾರ ಪ್ರಾರಂಭಗೊಳ್ಳಲಿದೆ. ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಫೆ.9 ರಂದು ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ವಾರ್ಡ್ ನಂ.18ರಿಂದ ಬಿಜೆಪಿ ಅಭ್ಯರ್ಥಿ ಗುರುವಿನಾಯಕ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಆರೋಪಿಸಿ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಆರ್. ರವೀಂದ್ರಕುಮಾರ್ ಅವರು ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಜಿಲ್ಲಾ ನ್ಯಾಯಾಲಯ ಗುರುವಿನಾಯಕ ಅವರ ಸದಸ್ಯತ್ವ ರದ್ದುಗೊಳಿಸಿತ್ತು. ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಗುರುವಿನಾಯಕ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಜಿಲ್ಲಾ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದೆ.
ಕಣದಲ್ಲಿ ಮೂವರು ಅಭ್ಯರ್ಥಿಗಳು: ಅಂತಿಮ ಕಣದಲ್ಲಿ ಬಿಜೆಪಿಯ ಬಿ.ವಿ. ರವೀಂದ್ರ, ಕಾಂಗ್ರೆಸ್‌ನ ರವೀಂದ್ರಕುಮಾರ್ ಹಾಗೂ ಜೆಡಿಎಸ್‌ನ ಸ್ವಾಮಿ ಉಳಿದುಕೊಂಡಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಚಾಮರಾಜ ಎಸ್ಟಿ ಮೋರ್ಚಾ ಅಧ್ಯಕ್ಷ ಶಿವಪ್ರಕಾಶ್ ನಾಮಪತ್ರ ಹಿಂಪಡೆದಿದ್ದು, ಬಿಜೆಪಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
11,877 ಮತದಾರರು: ವಾರ್ಡ್ ನಂ.18ರಲ್ಲಿ ಒಟ್ಟು 11,877 ಮತದಾರರು ಇದ್ದು, ಈ ಪೈಕಿ 5,793 ಪುರುಷರು ಹಾಗೂ 6,084 ಮಹಿಳೆಯರು ಇದ್ದಾರೆ. ವಾರ್ಡ್ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಫೆ.9 ರಂದು ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದ್ದು, ಫೆ.11 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಕಳೆದ ಬಾರಿ ಚುನಾವಣೆಯ ಅಂಕಿ ಅಂಶ: ಒಟ್ಟು 11,815 ಮತಗಳ ಪೈಕಿ 5651 ಮತಗಳು ಚಲಾವಣೆಗೊಂಡಿದ್ದವು. ಬಿಜೆಪಿ ಅಭ್ಯರ್ಥಿ ಗುರುವಿನಾಯಕ್ 2683 ಮತಗಳನ್ನು ಪಡೆದು 454 ಮತಗಳ ಅಂತರದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಆರ್.ರವೀಂದ್ರಕುಮಾರ್ 2,229 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಜೆಡಿಎಸ್ ಅಭ್ಯರ್ಥಿ ಎನ್.ರಾಜು ಕೇವಲ 421 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net