ಶತಮಾನ ಪೂರೈಸಿದ ಮೈಸೂರು ಮೆಡಿಕಲ್ ಕಾಲೇಜಿನ ಅಂಚೆ ಚೀಟಿ ಬಿಡುಗಡೆ

15
Published on

ಮೈಸೂರು: ಶತಮಾನ ಪೂರೈಸಿರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಜನರಿಗೆ ಸಾಕಷ್ಟು ಸೇವೆ ಸಲ್ಲಿಸಿದೆ ಎಂದು ಕರ್ನಾಟಕ ವೃತ್ತದ ಅಂಚೆ ಪ್ರಧಾನ ಮುಖ್ಯ ಅಧಿಕಾರಿ ಕೆ.ಪ್ರಕಾಶ್ ಹೇಳಿದರು.

ಮೈಸೂರು ಮೆಡಿಕಲ್ ಕಾಲೇಜಿನ ಕೌನ್ಸಿಲ್ ಸಭಾಂಗಣದಲ್ಲಿ ಕಾಲೇಜು 100 ವರ್ಷ ಪೂರೈಸಿದ್ದರಿಂದ ಕಾಲೇಜಿನ ಸ್ಮರಣಾರ್ಥ ಇತ್ತೀಚೆಗೆ ಅಂಚೆ ಚೀಟಿ ಬಿಡುಗಡೆಗೊಳಿಸಿ ಮಾತನಾಡಿದರು. ರಾಜರು ಸ್ಥಾಪಿಸಿದ್ದಕ್ಕೆ ಮೈಸೂರು ಭಾಗದ ಅನೇಕ ರೋಗಿಗಳಿಗೆ ಆಸ್ಪತ್ರೆ ಸೇವೆ ನೀಡುವ ಮೂಲಕ ತನ್ನ ಸಾರ್ಥಕತೆ ಮೆರೆದಿದೆ. ಈ ಮೂಲಕ ಆರೋಗ್ಯ ಕ್ಷೇತ್ರ ಮೈಸೂರು ಮೆಡಿಕಲ್ ಕಾಲೇಜಿನ ಕೊಡುಗೆ ವಿಶಿಷ್ಟವಾದದ್ದು ಎಂದು ಬಣ್ಣಿಸಿದರು.

ಕಾಲೇಜಿನ ಡೀನ್ ದಾಕ್ಷಾಯಿಣಿ ಮಾತನಾಡಿ, ಮೈಸೂರು ಮೆಡಿಕಲ್ ಕಾಲೇಜು ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಸರ್ಕಾರವು 65 ಕೋಟಿ ರೂ. ವೆಚ್ಚದಲ್ಲಿ ಒಪಿಡಿ ಘಟಕಕ್ಕೆ ಅನುಮತಿ ನೀಡಿದೆ. ಅನುದಾನ ನೀಡಿ ಅನುಮತಿ ನೀಡಿದ ಮುಖ್ಯಮಂತ್ರಿ ಮತ್ತು ಅಂಚೆ ಚೀಟಿ ಹೊರತಂದ ಅಂಚೆ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಎಂಎಂಸಿ ಮತ್ತು ಆರ್‌ಐನ ನೋಡಲ್ ಅಧಿಕಾರಿ ಡಾ.ಕೆ.ಪುರುಷೋತ್ತಮ್ ಅವರು ಕಾಲೇಜಿನ ಇತಿಹಾಸ ಮತ್ತು ಸಾಧನೆಯ ಕುರಿತು ಪರಿಚಯ ಮಾಡಿಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಮೈಸೂರು ಮೆಡಿಕಲ್ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ಕೃಷ್ಣೇಗೌಡ ಶತಮಾನೋತ್ಸವದ ಯಶಸ್ವಿ ಆಚರಣೆಗೆ ಕಾರಣಕರ್ತರಾದ ಹಾಲಿ ನಿರ್ದೇಶಕರ ಪಾತ್ರವನ್ನು ಪ್ರಶಂಸಿಸಿದರು.

ಕರ್ನಾಟಕ ಅಂಚೆ ವೃತ್ತದ ಫಿಲಾಟೆಲಿ ವಿಭಾಗದ ಸಹಾಯಕ ನಿರ್ದೇಶಕಿ ಶಾಂತಲಾಭಟ್, ಮೈಸೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕ ಜಿ.ಹರೀಶ್, ಉಪ ಅಧೀಕ್ಷಕ ವಿ.ಎಲ್.ನವೀನ್, ಮೈಸೂರು ಪ್ರಧಾನ ಅಂಚೆ ಕಚೇರಿಯ ಹಿರಿಯ ಅಂಚೆ ಪಾಲಕ ಸೋಮಯ್ಯ, ಮೈಸೂರು ಮೆಡಿಕಲ್ ಕಾಲೇಜಿನ ಸಿಬ್ಬಂದಿ ಮತ್ತು ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net