

ಮೈಸೂರು: ಅಲ್ಪಸಂಖ್ಯಾತರನ್ನು ಅಧಿಕಾರದಿಂದ ದೂರ ಇಡುವ ಪ್ರಯತ್ನ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಂದ ನಡೆಯುತ್ತಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದರು.
ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಅವಕಾಶ ಇತ್ತು. ಆದರೆ ಅದನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಪ್ಪಿಸಿದರು. ಪಾಲಿಕೆ ಚುನಾವಣೆ ಸಿದ್ದರಾಮಯ್ಯ ಅವರ ಪ್ರತಿಷ್ಠೆಗೆ ಅಡ್ಡಿಯಾಗುತ್ತದೆ ಎಂದಾದರೆ ಚುನಾವಣೆಯ ಜವಾಬ್ದಾರಿಯನ್ನು ಅವರು ಸ್ಥಳೀಯ ನಾಯಕರಿಗೆ ವಹಿಸಬಹುದಿತ್ತು. ಆದರೆ, ಸಿದ್ದರಾಮಯ್ಯ ಮೈತ್ರಿಗೆ ಅವಕಾಶ ನೀಡದ ಪರಿಣಾಮ ಈ ಬಾರಿ ಪಾಲಿಕೆ ಆಡಳಿತ ಕೋಮುವಾದಿಗಳ ಪಾಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ಬಿಜೆಪಿಯೊಂದಿಗೆ ಕೈ ಜೋಡಿಸುವ ಮೂಲಕ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದೆ. ಪರಿಸ್ಥಿತಿಯ ಲಾಭವನ್ನು ಪಡೆದ ಬಿಜೆಪಿ ಮೇಯರ್ ಹಾಗೂ ಉಪ ಮೇಯರ್ ಸ್ಥಾನವನ್ನು ಪಡೆದುಕೊಂಡಿದೆ. ಜೆಡಿಎಸ್ ಉಪ ಮೇಯರ್ ಅಭ್ಯರ್ಥಿ ರೇಷ್ಮಾ ಬಾನು ನಾಮಪತ್ರ ತಿರಸ್ಕೃತಗೊಳ್ಳುವುದರ ಹಿಂದೆ ಷಡ್ಯಂತ್ರ ಅಡಗಿದೆ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ರೇಷ್ಮಾ ಬಾನು ಬಿಸಿಎ ಮಹಿಳೆಗೆ ಮೀಸಲಾದ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸುವ ಸಂದರ್ಭ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ಸಾಮಾನ್ಯ ಜ್ಞಾನ ಜೆಡಿಎಸ್ ನಾಯಕರಿಗೆ ಇರಲಿಲ್ಲವೇ? ಮುಸ್ಲಿಂ ಸಮುದಾಯದವರಿಗೆ ಅಧಿಕಾರ ತಪ್ಪಿಸುವ ಹುನ್ನಾರದ ಇದರ ಹಿಂದಿದೆ. ಇನ್ನಾದರೂ ಅಲ್ಪಸಂಖ್ಯಾತ ಸಮುದಾಯ ಈ ಮೂರು ಪಕ್ಷಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.