ಮೈಸೂರು ಮೇಯರ್ ಚುನಾವಣೆ : ಜೆಡಿಎಸ್‌ನಿಂದ ಚುನಾವಣಾಧಿಕಾರಿಗೆ ದೂರು

mcc
Published on

ಮೈಸೂರು: ಮೇಯರ್ ಚುನಾವಣೆಯ ಮತದಾರರ ಪಟ್ಟಿಗೆ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಹೆಸರು ಸೇರ್ಪ ಡೆಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಜೆಡಿಎಸ್ ಈ ಕುರಿತು ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತರಿಗೆ ಶನಿವಾರ ದೂರು ನೀಡಿದೆ.

ದಿನೇಶ್ ಗೂಳಿಗೌಡ ಅವರು ಮಂಡ್ಯ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಗೊಂಡಿದ್ದಾರೆ. ಅಲ್ಲದೆ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಮತ ಚಲಾಯಿಸುತ್ತಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಸೇರ್ಪಡೆಗೊಂಡಿದೆ ಹಾಗೂ ಅವರು ಮೈಸೂರಿನ ಜೆಪಿ ನಗರದಲ್ಲಿ ಮನೆ ಹೊಂದಿದ್ದಾರೆ ಎಂಬ ಕಾರಣಕ್ಕೆ ಮೇಯರ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಅವರು ಹೆಸರು ಸೇರ್ಪಡೆ ಮಾಡಿರುವುದು ಸರಿಯಲ್ಲ. ಇದೇ ರೀತಿ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಶಾಸಕರು ಮೈಸೂರಿನಲ್ಲಿ ಮನೆ ಹೊಂದಿದ್ದು, ಅವರಿಗೂ ಮತದಾನದ ಹಕ್ಕು ನೀಡಬೇಕಾಗುತ್ತದೆ. ಹೀಗಾಗಿ ಅವರನ್ನು ಮತದಾರರ ಪಟ್ಟಿಯಿಂದ ಕೈ ಬಿಡಬೇಕು ಎಂದು ಜೆಡಿಎಸ್‌ನ ವಕೀಲ ರವಿಚಂದ್ರೇಗೌಡ ದೂರು ನೀಡಿದರು. ಪ್ರಾದೇಶಿಕ ಆಯುಕ್ತರ ಪರವಾಗಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ರೂಪಾ ದೂರು ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net