

ಮೈಸೂರು: ಸಾಂಸ್ಕೃತಿಕ ನಗರದಲ್ಲಿ ಕರೊನಾ ಪ್ರಕರಣಗಳು ಕ್ಷೀಪ್ರಗತಿಯಲ್ಲಿ ಹೆಚ್ಚುತ್ತಿರುವ ಕಾರಣ ಗುರುವಾರ 4 ಮಾರುಕಟ್ಟೆಗಳನ್ನು ನಾಲ್ಕು ದಿನಗಳ ಮಟ್ಟಿಗೆ ಬಂದ್ ಮಾಡಲಾಯಿತು.
ನಗರದ ದೇವರಾಜ ಮಾರುಕಟ್ಟೆ, ಸಂತೆಪೇಟೆ, ಶಿವರಾಂಪೇಟೆ, ಮನ್ನಾರ್ಸ್ ಮಾರ್ಕೆಟ್ ಮತ್ತು ಬೋಟಿ ಬಜಾರ್‌ನಲ್ಲಿ ಎಲ್ಲ ರೀತಿಯ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಭಾಗದ ಸಂಪೂರ್ಣ ಪ್ರದೇಶವನ್ನು ಪಾಲಿಕೆ ಸಿಬ್ಬಂದಿ ಸ್ಯಾನಿಟೈಸ್ ಮಾಡಿ, ಸ್ವಚ್ಛಗೊಳಿಸಿದರು.
ನಗರದಲ್ಲಿ ಕಳೆದ ಒಂದು ವಾರದಿಂದ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಪ್ರದೇಶಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಜನಸಂದಣಿಯಾಗುತ್ತಿದೆ. ಜತೆಗೆ, ಸೋಂಕಿತರೊಬ್ಬರು ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ತರಕಾರಿ ಖರೀದಿ ಮಾಡಿದ್ದರು. ಈ ಎಲ್ಲ ಕಾರಣಗಳಿಂದ ಗುರುವಾರದಿಂದ ಜೂ.28ರವರೆಗೆ ಈ ಮಾರುಕಟ್ಟೆಗಳನ್ನು ಬಂದ್ ಮಾಡಲು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಆದೇಶಿಸಿದ್ದರು. ಇದಕ್ಕೆ ವ್ಯಾಪಾರಸ್ಥರಿಂದಲೂ ಸ್ಪಂದನೆ ದೊರೆತಿದೆ. ಸ್ವಯಂ ಪ್ರೇರಣೆಯಿಂದ ಮಳಿಗೆಗಳನ್ನು ಮುಚ್ಚಿದ್ದರು.
ಕೆಡುವ ಪದಾರ್ಥಗಳಾದ ಹಣ್ಣು-ತರಕಾರಿಗಳನ್ನು ಬೀದಿ ಬದಿ ಮಾರಾಟಕ್ಕೆ 2 ದಿನಗಳ ಕಾಲ ಅವಕಾಶ ನೀಡುವಂತೆ ವ್ಯಾಪಾರಸ್ಥರು ಕೋರಿದ್ದರು. ಇದಕ್ಕೆ ಸ್ಪಂದಿಸಿರುವ ಪಾಲಿಕೆಯು, ಇದಕ್ಕಾಗಿ ನಾಳೆವರೆಗೆ ಮಾತ್ರ ಅವಕಾಶ ನೀಡಿದ್ದಾರೆ. ಇದನ್ನು ಹೊರತುಪಡಿಸಿ ಯಾವುದೇ ವಹಿವಾಟುಗಳು ನಡೆಯಲಿಲ್ಲ. ಇಲ್ಲಿಯ ಪ್ರದೇಶ, ರಸ್ತೆ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
4 ದಿನಗಳ ಬಳಿಕ ವಹಿವಾಟು ಆರಂಭಿಸುವಾಗ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ವ್ಯಾಪಾರಿಗಳಿಗೆ ಪಾಲಿಕೆ ಸಿಬ್ಬಂದಿ ತಿಳಿ ಹೇಳಿದರು. ವ್ಯಾಪಾರ ಸ್ಥಳದಲ್ಲಿ ಸೂಕ್ತ ಅಂತರ ಕಾಯ್ದುಕೊಳ್ಳಲು ಗುರುತು ಮಾಡಬೇಕು. ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಕಡ್ಡಾಯವಾಗಿ ಮಾಡಬೇಕು. ಸೋಂಕಿನ ಲಕ್ಷಣಗಳಾದ ಶೀತ, ಜ್ವರ ಕಂಡುಬಂದರೆ ಪಾಲಿಕೆ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಬೇಕು. ಗ್ರಾಹಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಸುತ್ತಮುತ್ತಲಿನ ಸ್ಥಳಗಳನ್ನು ಕ್ರಿಮಿನಾಶಕ ಸಿಂಪಡಿಸಿ ಶುಚಿಯಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು. ಇದಕ್ಕೆ ವ್ಯಾಪಾರಸ್ಥರು ಕೂಡ ಸಮ್ಮತಿಸಿದರು.