

ಮೈಸೂರು: ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್‌ನಲ್ಲಿ ಮೈಸೂರು ಜಿಲ್ಲೆಗೆ ಏನು ಕೊಡುಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.
ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 15ನೇ ಬಜೆಟ್ ಅನ್ನು ಫೆ.16ರಂದು ಮಂಡನೆ ಮಾಡುವ ಸಾಧ್ಯತೆಯಿದ್ದು, ತವರು ಜಿಲ್ಲೆಗೆ ಏನು ಕೊಡುಗೆ ನೀಡುತ್ತಾರೆ ಎಂಬುದನ್ನು ಸಾರ್ವಜನಿಕರು, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು, ಉದ್ಯಮಿಗಳು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ.
ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದ ಉನ್ನತೀಕರಣ, ಖಾಸಗಿ ಸಹಭಾಗಿತ್ವದಲ್ಲಿ ಫಿಲ್ಮ್ ಸಿಟಿ ನಿರ್ಮಾಣ, ಚಾಮುಂಡಿವಿಹಾರ ಕ್ರೀಡಾಂಗಣದ ಬಳಿ ಕಲಾಗ್ಯಾಲರಿ ನಿರ್ಮಾಣ, 10 ಕೋಟಿ ರೂ. ವೆಚ್ಚದಲ್ಲಿ ಸೈಕ್ಲಿಂಗ್ ವೇಲೋಡ್ರೋಮ್ ಸ್ಥಾಪನೆಗೆ ಚಾಲನೆಯೇ ದೊರೆತಿಲ್ಲ.
ಆದರೆ, ಗುರುದ್ವಾರಗಳ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ, ಟ್ರಾಮಾ ಕೇರ್ ಸೆಂಟರ್, ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ ಹೆಚ್ಚಿನ ಅನುದಾನ ನೀಡಿದ್ದು, ಕಿದ್ವಾಯಿ ಆಸ್ಪತ್ರೆ ನಿರ್ಮಾಣ ಕೆಲಸ ಶುರುವಾಗಿದೆ. ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಸ್ಥಾಪನೆಗೆ ಅನುಮೋದನೆ ದೊರೆತಿದೆ.
ಈ ಸಲ ಹಳೇ ಘೋಷಣೆ ಕಾರ್ಯಗತಗೊಳಿಸುವ ಮೂಲಕ ಹೊಸ ಕಾರ್ಯಕ್ರಮವನ್ನೂ ನೀಡಬೇಕಿದೆ. ಮೈಸೂರಿನ ಜೀವಾಳವಾಗಿರುವ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಕೈಗಾರಿಕಾ ವಲಯದ ಬೇಡಿಕೆಗೆ ಸ್ಪಂದಿಸಿ, ಅದರ ಅಭಿವೃದ್ಧಿಗೆ ವೇಗ ಸ್ಪರ್ಶ ಕೊಡಬೇಕಿದೆ.
ದಸರಾ ಪ್ರಾಧಿಕಾರ ರಚನೆ, ನಗರದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ಪೆರಿಫೆರಲ್ ರಿಂಗ್ ರಸ್ತೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡಬೇಕಿದೆ. ಇಡೀ ಜಿಲ್ಲೆಯ ಅಭಿವೃದ್ಧಿಗೆ ನೀಲಿನಕ್ಷೆ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಮಂಡಿಸುವ ಬಜೆಟ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
ರಾಜ್ಯ ಬಜೆಟ್ ಕುರಿತು ಸಾರ್ವಜನಿಕರು, ತಜ್ಞರು, ಆಯಾ ಕ್ಷೇತ್ರದ ಪ್ರತಿನಿಧಿಗಳಿಂದ ಅಭಿಪ್ರಾಯವನ್ನು ಲೌಡ್ ಸ್ಪೀಕರ್‌ನಲ್ಲಿ ಸಂಗ್ರಹಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಘೋಷಣೆ ಮಾಡಿದ್ದ ರಫ್ತು ಕೇಂದ್ರ ನನೆಗುದಿಗೆ ಬಿದ್ದಿದೆ. 1 ಕೋಟಿ ರೂ. ಅನುದಾನ ನೀಡಿ ಈ ಕೇಂದ್ರ ನಿರ್ಮಾಣಕ್ಕೆ ಮರು ಚಾಲನೆ ನೀಡಬೇಕು. ಕೈಗಾರಿಕಾ ಕ್ಲಸ್ಟರ್ ಸ್ಥಾಪನೆಗೆ ನಿವೇಶನ ನೀಡಬೇಕು. ವರ್ಷಕ್ಕೆ 40ರಿಂದ 45 ಕೋಟಿ ರೂ. ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ನೀಡುತ್ತಿದ್ದರೂ ಕೈಗಾರಿಕೆ ಅಭಿವೃದ್ಧಿಗೆ ಕ್ರಮ ವಹಿಸುತ್ತಿಲ್ಲ. ಹೀಗಾಗಿ, ಕೈಗಾರಿಕಾ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು. ಕೈಗಾರಿಕೆಗಳ ಹಣವನ್ನು ಕೈಗಾರಿಕೆಗಳ ಅಭಿವೃದ್ಧಿಗೆ ಬಳಕೆ ಮಾಡಿದರೆ ಅನುಕೂಲವಾಗುತ್ತದೆ. ಕೈಗಾರಿಕಾ ವಲಯಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು. ವಿದ್ಯುತ್ ಕ್ರಾಸ್ ಸಬ್ಸಿಡಿಯನ್ನು ಸರ್ಕಾರವೇ ಭರಿಸಬೇಕು.
ಸುರೇಶ್‌ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ
ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಎದುರಾಗಿರುವ ತೊಡಕುಗಳನ್ನು ನಿವಾರಿಸಬೇಕು. ಅತಿಥಿಗೃಹ ನಿರ್ಮಾಣ, ಅಲ್ಲಿನ ಬೀದಿಬದಿ ವ್ಯಾಪಾರಿಗಳಿಗೆ ಶಾಶ್ವತ ಸೂರು ಕಲ್ಪಿಸಬೇಕು. ನಂಜನಗೂಡು ರಸಬಾಳೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಂಜನಗೂಡಿನಲ್ಲೇ ಅದರ ಸಂಶೋಧನಾ ಕೇಂದ್ರ ತೆರೆಯಬೇಕು. ನುಗು ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು.
ಮಾನವ- ವನ್ಯಜೀವಿ ಸಂಘರ್ಷ ತಡೆಯಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕುಂಬ್ರಹಳ್ಳಿ, ಕೂಡ್ಲಾಪುರ, ಕುರಹಟ್ಟಿ, ಹುಣಸನಾಳು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಬೇಕು. ನಂಜನಗೂಡು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ದೇವೀರಮ್ಮನಹಳ್ಳಿ, ದೇಬೂರು ಗ್ರಾಪಂ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲು ವಿಶೇಷ ಅನುದಾನ ಘೋಷಿಸಬೇಕು. ಭೌಗೋಳಿಕವಾಗಿ ದೊಡ್ಡ ತಾಲೂಕು ಆಗಿರುವುದರಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು.
ಪ್ರೊ.ಸಿ.ಸುಬ್ಬಣ್ಣ, ನಿವೃತ್ತ ಪ್ರಾಂಶುಪಾಲ, ನಂಜನಗೂಡು
ಮೈಸೂರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕ್ರಮ ವಹಿಸಬೇಕು. ಇದಕ್ಕಾಗಿ 500 ಕೋಟಿ ರೂ. ನೀಡಬೇಕು. ಶಿಥಿಲಗೊಂಡಿರುವ ಪುರಾತನ ಕಟ್ಟಡಗಳನ್ನು ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಪಾರಂಪರಿಕ ಕುರುಹುಗಳನ್ನು ಹಾಗೇ ಉಳಿಸಿಕೊಳ್ಳುವ ಮೂಲಕ ಜೀರ್ಣೋದ್ಧಾರ ಮಾಡಬೇಕು.
ಪ್ರೊ.ಎನ್.ಎಸ್.ರಂಗರಾಜು, ಪಾರಂಪರಿಕ ತಜ್ಞ
ಬಜೆಟ್‌ನಲ್ಲಿ ಕೃಷಿ, ರೈತರ ಅಭಿವೃದ್ಧಿಗೆ ಒತ್ತು ನೀಡಬೇಕು. ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ಕೃಷಿಕರ ನೆರವಿಗೆ ಸರ್ಕಾರ ಬರಬೇಕು. ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಬೇಕು. ಆಹಾರ ಕೈಗಾರಿಕೆಗಳಿಗೂ ಆದ್ಯತೆ ನೀಡಬೇಕು. ನೇರ ಮಾರುಕಟ್ಟೆಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಬೇಕು.
ಬಡಗಲಪುರ ನಾಗೇಂದ್ರ, ಅಧ್ಯಕ್ಷ, ರಾಜ್ಯ ರೈತ ಸಂಘ
ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪ್ರೇಕ್ಷಣೀಯ ತಾಣಗಳಿಗೆ ಮೂಲಸೌಕರ್ಯ ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸಬೇಕು. ಸ್ಥಗಿತಗೊಂಡಿರುವ ವಿಮಾನಯಾನ ಸೇವೆ ಸೌಲಭ್ಯ ವಿಸ್ತರಣೆ ಆಗಬೇಕು. ಡಿಸ್ನಿಲ್ಯಾಂಡ್, ಅಂತಾರಾಷ್ಟ್ರೀಯ ಸಭಾಂಗಣ ಕೇಂದ್ರ ಸ್ಥಾಪನೆ ಮಾಡಬೇಕು. ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡಗಳನ್ನು ಅಭಿವೃದ್ಧಿಪಡಿಸಬೇಕು.
ಸಿ.ನಾರಾಯಣಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ
ಐದು ಗ್ಯಾರಂಟಿಗಳ ಜತೆಗೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಿಗೂ ವಾಹನ ವ್ಯವಸ್ಥೆ ಕಲ್ಪಿಸಬೇಕು. ದುಬಾರಿಯಾಗಿರುವ ಶಿಕ್ಷಣವನ್ನು ಸುಲಭಗೊಳಿಸಿ ಉನ್ನತೀಕರಣಗೊಳಿಸಬೇಕು. ಸಾಮಾನ್ಯವಾಗಿ ರೈತರ ಸಮಸ್ಯೆಗೂ ಕಾಡಂಚಿನ ಭಾಗದ ರೈತರ ಸಮಸ್ಯೆಗೂ ವ್ಯತ್ಯಾಸವಿದ್ದು, ಕಾಡಂಚಿನ ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕಾಡು ಪ್ರಾಣಿಗಳಿಂದಾಗುವ ಬೆಳೆ ನಾಶಕ್ಕೆ ಪರಿಹಾರದ ಬದಲು ನಷ್ಟ ಭರಿಸಲು ಹಣ ಮೀಸಲಿಡಬೇಕು.
ಗ್ರಾಮೀಣ ಮಹೇಶ್, ಪ್ರಗತಿಪರ ಚಿಂತಕ, ಸರಗೂರು