ಮೈಸೂರು ಮಹಾರಾಜಾಸ್ ತಂಡ ಚಾಂಪಿಯನ್

Cricket
Published on

ಚಂದ್ರಶೇಖರ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ‘ಮೈಸೂರು ಮಹಾರಾಜಾಸ್’ ತಂಡವು ಲೆಜೆಂಡ್ಸ್ ಪ್ರೀಮಿಯರ್ ಲೀಗ್ ಟಿ10 ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಮೈಸೂರು ಲ್ಯಾನ್ಸರ್ಸ್ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು.

ಮಳೆ ಕಾರಣದಿಂದಾಗಿ 10 ಓವರ್‌ಗಳ ಪಂದ್ಯವನ್ನು 5 ಓವರ್‌ಗೆ ಇಳಿಸಲಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲ್ಯಾನ್ಸರ್ಸ್ ತಂಡಕ್ಕೆ ಎ.ಸಿ.ಚೇತನಕುಮಾರ್ ನೆರವಾದರು. ತಂಡವು 5 ವಿಕೆಟ್ ನಷ್ಟಕ್ಕೆ 32 ರನ್ ಗುರಿ ನೀಡಿತು. ಮಹಾರಾಜಾಸ್ ತಂಡದ ಸಿ.ಸುನೀಲ್, ಸಿ.ರಾಘವೇಂದ್ರ, ಸಿ.ಕೆ.ಚಂದ್ರಶೇಖರ್ ಮತ್ತು ಎಂ.ಕೆ.ಸಪ್ತಗಿರೀಶ್ ತಲಾ ಒಂದು ವಿಕೆಟ್ ಪಡೆದರು. ಗುರಿಯನ್ನು ಬೆನ್ನಟ್ಟಿದ ಮಹಾರಾಜಾಸ್ ತಂಡವು ಕೇವಲ 2.1 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು.

ಮೈಸೂರು ಲ್ಯಾನ್ಸರ್ಸ್ ತಂಡದ ಎ.ವಿ.ಸಂದೀಪ್‌ಗೆ ಉತ್ತಮ ಬ್ಯಾಟರ್, ಎ.ಸಿ.ಚೇತನ್‌ಗೆ ಉತ್ತಮ ಫೀಲ್ಡರ್ ಹಾಗೂ ಮಹಾರಾಜಾಸ್ ತಂಡದ ಸುನೀಲ್ ಚಿನ್ನಸ್ವಾಮಿಗೆ ಉತ್ತಮ ಬೌಲರ್ ಪ್ರಶಸ್ತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net