

ಮೈಸೂರು: ಹಲವಾರು ವಿದ್ವಾಂಸರಿಗೆ ಮೈಸೂರು ಮಹಾರಾಜರು ರಾಜಾಶ್ರಯ ನೀಡಿದ ಪರಿಣಾಮ ಸನಾತನ ಸಂಸ್ಕೃತಿ, ಪರಂಪರೆ ಮೈಸೂರಿನಲ್ಲಿ ಉಳಿದು ಬೆಳೆದಿದೆ ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪಂಡಿತರತ್ನಂ ಕೆ.ಎಸ್. ವರದಾಚಾರ್ಯ ಶತಮಾನೋತ್ಸವ ಸಮಿತಿ ವತಿಯಿಂದ ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾ ನೋತ್ಸವ ಭವನದಲ್ಲಿ ಶನಿವಾರ ಹಮ್ಮಿಕೊಂಡ ಕೆ.ಎಸ್. ವರದಾಚಾರ್ಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿ, ಮೈಸೂರು ಮಹಾರಾಜರು ಸನಾತನ ಸಂಸ್ಕೃತಿ, ಪರಂಪರೆ ಉಳಿವಿಗೆ ನೀಡಿದ ಕೊಡುಗೆಗಳನ್ನು ನಾವು ಸ್ಮರಿಸಿಕೊಳ್ಳಬೇಕಾಗಿದೆ. ರಾಜಾಶ್ರಯದಿಂದ ಮೈಸೂರು ಹಲವಾರು ವಿದ್ವಾಂಸರನ್ನು ಕಂಡಿದೆ ಎಂದರು.
ವರದಾಚಾರ್ಯರು ಸೇರಿದಂತೆ ಅನೇಕ ಹಿರಿಯರು ನಮ್ಮನ್ನು ಅಗಲಿದ್ದಾರೆ. ಹಿರಿಯರು ನಮ್ಮನ್ನು ಅಗಲುವುದು ಪ್ರಕೃತಿಯ ನಿಯಮ. ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ನಾವು ಸ್ಮರಿಸಿಕೊಳ್ಳಬೇಕು. ಆ ಮೂಲಕ ಅವರ ನೆನಪುಗಳನ್ನು ಹಸಿರಾಗಿಡುವುದು ಸಮಾಜದ ಕರ್ತವ್ಯ. ಆ ನಿಟ್ಟಿನಲ್ಲಿ ವರದಾಚಾರ್ಯರ ಶತಮಾನೋತ್ಸವ ಸಮಾರಂಭವು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.