ಮೈಸೂರು ಲೋಕಸಭಾ ಕ್ಷೇತ್ರ: ಮಹಿಳಾ ಮತದಾರರು ಹೆಚ್ಚಿದ್ದರೂ ಮಹಿಳೆಯರಿಗೆ ರಾಜಕೀಯ ಪಕ್ಷಗಳಿಂದ ದೊರೆಯದ ಮಾನ್ಯತೆ

chandraprabha urs
Published on

ಸದೇಶ್ ಕಾರ್ಮಾಡ್ ಮೈಸೂರು

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ, ಕ್ಷೇತ್ರದಲ್ಲಿ ಮಹಿಳೆಯರಿಗೆ ವಿಜಯಲಕ್ಷ್ಮಿ ಒಲಿದಿದ್ದು ಒಂದು ಬಾರಿ ಮಾತ್ರ. ಸ್ಪರ್ಧಿಸಿದ ಮಹಿಳೆಯರ ಪೈಕಿ ಠೇವಣಿ ಕಳೆದುಕೊಂಡವರ ಸಂಖ್ಯೆಯೇ ಹೆಚ್ಚು. ಪ್ರತಿ ಚುನಾವಣೆಯಲ್ಲೂ ಪುರುಷರ ಪ್ರಾಬಲ್ಯವೇ ಕಂಡು ಬರುತ್ತಿದೆ.

ಮಹಿಳೆಯರು ಪ್ರತಿಯೊಂದು ಕ್ಷೇತ್ರಗಳಲ್ಲೂ ತಮ್ಮ ಸಾಧನೆಯನ್ನು ತೋರ್ಪಡಿಸುತ್ತಾ ಬಂದಿದ್ದಾರೆ. ಅದೇ ರೀತಿ ರಾಜಕೀಯ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಆದರೆ, ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶಗಳು ದೊರೆತ್ತಿರುವುದು ಕಡಿಮೆ. ಇದಕ್ಕೆ ಮೈಸೂರು-ಕೊಡಗು ಕ್ಷೇತ್ರ ಹೊರತಾಗಿಲ್ಲ. ಯಾವುದೇ ಪಕ್ಷದ ಅಭ್ಯರ್ಥಿಯ ಗೆಲುವಿ ನಲ್ಲಿ ಈ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಲಿದ್ದಾರೆ. ಆದರೆ, ಮಹಿಳಾ ಮತದಾರರು ಹೆಚ್ಚಿರುವ ಕ್ಷೇತ್ರದಲ್ಲಿ ಪುರುಷರ ಪ್ರಾಬಲ್ಯವೇ ಹೆಚ್ಚು ಇದೆ.

ಮೊದಲ ಗೆಲುವು:

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಪುತ್ರಿ ಚಂದ್ರಪ್ರಭಾ ಅರಸ್ 1991ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಏಕೈಕ ಮಹಿಳೆ. ಚಂದ್ರಪ್ರಭಾ ಅರಸ್ ನಂತರ ಯಾವುದೇ ಮಹಿಳೆಯರಿಗೆ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. 1991ರ ಚುನಾವಣೆಯಲ್ಲಿ ಒಟ್ಟು 11 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚಂದ್ರಪ್ರಭಾ ಅರಸ್ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರತ್ನಪ್ರಭಾ ಅರಸ್ 16,882 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಸೋಲಿಸುವ ಮೂಲಕ ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಚಂದ್ರಪ್ರಭಾ ಅರಸ್ 2,25,881 ಮತಗಳನ್ನು ಪಡೆದರೆ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2,08,999 ಮತಗಳನ್ನು ಪಡೆದಿದ್ದರು.

ಒಲಿಯದ ಗೆಲುವು:

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸ್ಪರ್ಧಿಸಲಿಲ್ಲ. ರಾಷ್ಟ್ರೀಯ ಪಕ್ಷಗಳು ಬಹುತೇಕ ಎಲ್ಲ ಚುನಾವಣೆಗಳಲ್ಲೂ ಪುರುಷ ಅಭ್ಯರ್ಥಿಗಳಿಗೆ ಹೆಚ್ಚಿನ ಮಣೆ ಹಾಕಿರುವುದು ಕಂಡು ಬಂದಿದೆ. 2019ರ ಚುನಾವಣೆಯಲ್ಲಿ ಯುಪಿಜೆಪಿ ಪಕ್ಷದಿಂದ ವಿ.ಆಶಾ ರಾಣಿ (ಪಡೆದ ಮತ 4,259), ಎಸ್‌ಯುಸಿಐ(ಸಿ) ಪಕ್ಷದಿಂದ ಪಿ.ಎಸ್. ಸಂಧ್ಯಾ (1473), ಪಕ್ಷೇತರ ಅಭ್ಯರ್ಥಿಯಾಗಿ ಎನ್.ಕೆ. ಕಾವೇರಿಯಮ್ಮ (1046) ಠೇವಣಿ ಕಳೆದುಕೊಂಡರು. ಅದೇ ರೀತಿ 2014ರಲ್ಲಿ ಆಪ್ ಪಕ್ಷದಿಂದ ಸ್ಪರ್ಧಿಸಿದ್ದ ಎಂ.ವಿ. ಪದ್ಮಮ್ಮ (5,650), ಕೆಎಪಿ ಪಕ್ಷದಿಂದ ಸ್ಪರ್ಧಿಸಿದ್ದ ರತಿ ಪೂವಯ್ಯ (3,726) ಠೇವಣಿ ಕಳೆದುಕೊಂಡರು. 2009ರ ಚುನಾವಣೆ ಯಲ್ಲಿ ಆರ್‌ಡಿಎಂಪಿ ಪಕ್ಷದಿಂದ ಸ್ಪರ್ಧಿಸಿದ್ದ ಡಾ.ಇ. ಕೇಶಮ್ಮ (3,830), ಪಿಪಿಒಐ ಪಕ್ಷದಿಂದ ಸ್ಪರ್ಧಿಸಿದ್ದ ಎಂ. ಲೀಲಾವತಿ (2,300) ಠೇವಣಿ ಕಳೆದುಕೊಂಡರು.

ಚಂದ್ರಪ್ರಭಾ ಅರಸ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಯಾವುದೇ ರಾಷ್ಟ್ರೀಯ ಪಕ್ಷಗಳಿಂದ ಅಥವಾ ಪ್ರಮುಖ ಪ್ರಾದೇಶಿಕ ಪಕ್ಷಗಳಿಂದ ಮಹಿಳೆಯರಿಗೆ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಅವರಿಗೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಸ್ಪರ್ಧಿಸಿರುವ ಬಹುತೇಕ ಮಹಿಳೆಯರು ಜನಪ್ರಿಯವಲ್ಲದ ಪಕ್ಷಗಳಿಂದ ಸ್ಪರ್ಧಿಸಿ ಸೋಲನ್ನು ಕಂಡಿದ್ದಾರೆ. ರಾಷ್ಟ್ರೀಯ ಹಾಗೂ ಪ್ರಮುಖ ಪ್ರಾದೇಶಿಕ ಪಕ್ಷಗಳಿಂದ ಟಿಕೆಟ್ ದೊರೆಯದೆ ಇದ್ದರೂ ಕೆಲವು ಮಹಿಳೆಯರು ಗೆಲುವಿಗೆ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಲೇ ಇದ್ದಾರೆ.

ಮಹಿಳಾ ಮತದಾರರೇ ಹೆಚ್ಚು

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 20,72,337 ಮತದಾರರು ಇದ್ದಾರೆ. ಈ ಪೈಕಿ 10,17,120 ಪುರುಷ, 10,55,035 ಮಹಿಳೆ ಹಾಗೂ 182 ತೃತೀಯ ಲಿಂಗಿ ಮತದಾರರು ಇದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಇದ್ದು, ಈ ಎಲ್ಲ ಕ್ಷೇತ್ರಗಳಲ್ಲೂ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ವಿಶೇಷ.

ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,15,159 ಪುರುಷರು, 1,21,394 ಮಹಿಳೆಯರು, 9 ಇತರೆ, ವಿರಾಜಪೇಟೆಯಲ್ಲಿ 1,13,319 ಪುರುಷರು, 1,16,266 ಮಹಿಳೆಯರು, 7 ಇತರೆ, ಪಿರಿಯಾಪಟ್ಟಣದಲ್ಲಿ 98,447 ಪುರುಷರು, 98,764 ಮಹಿಳೆಯರು, 4 ಇತರೆ, ಹುಣಸೂರಿನಲ್ಲಿ 1,22,284 ಪುರುಷರು, 1,24,208 ಮಹಿಳೆಯರು, 16 ಇತರೆ, ಚಾಮುಂಡೇಶ್ವರಿಯಲ್ಲಿ 1,71,090 ಪುರುಷರು, 1,74,196 ಮಹಿಳೆಯರು, 34 ಇತರೆ, ಕೃಷ್ಣರಾಜದಲ್ಲಿ 1,24,419 ಪುರುಷರು, 1,31,168 ಮಹಿಳೆಯರು, 28 ಇತರೆ, ಚಾಮರಾಜದಲ್ಲಿ 1,24,897 ಪುರುಷರು 1,29,996 ಮಹಿಳೆಯರು, 32 ಇತರೆ, ನರಸಿಂಹರಾಜದಲ್ಲಿ 1,47,505 ಪುರುಷರು, 1,59,043 ಮಹಿಳೆಯರು ಹಾಗೂ 52 ಇತರೆ ಮತದಾರರು ಇದ್ದಾರೆ.

ಕ್ಷೇತ್ರ ಪರಿಚಯ

1951 ಹಾಗೂ 1957ರ ಚುನಾವಣೆಯಲ್ಲಿ ಮೈಸೂರು ದ್ವಿ ಸದಸ್ಯ ಕ್ಷೇತ್ರವಾಗಿತ್ತು. ಆ ಸಂದರ್ಭ ಅವಿಭಜಿತ ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತು. 1962ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ ರಚನೆಯಾದ ನಂತರ ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಎಚ್.ಡಿ. ಕೋಟೆ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್. ನಗರ ವಿಧಾನಸಭಾ ಕ್ಷೇತ್ರಗಳು ಇದ್ದವು. 2009ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಮೈಸೂರು ಕ್ಷೇತ್ರ ವ್ಯಾಪ್ತಿಗೆ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ, ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಸೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net