

ಮೈಸೂರು: ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ 85 ವರ್ಷ ಮೇಲ್ಪಟ್ಟವರು ಹಾಗೂ ಶೇ.40ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವವರಿಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಈ ಮತದಾನ ಪ್ರಕ್ರಿಯೆಗೆ ಶನಿವಾರ ಚಾಲನೆ ದೊರೆಯಲಿದ್ದು, 17ಕ್ಕೆ ಮುಕ್ತಾಯಗೊಳ್ಳಲಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಏ.15 ರಿಂದ 17ರವರೆಗೆ , ವಿರಾಜಪೇಟೆಯಲ್ಲಿ ಏ.15 ರಿಂದ 17ರವರೆಗೆ, ಪಿರಿಯಾಪಟ್ಟಣದಲ್ಲಿ ಏ.14 ರಿಂದ 15ರವರೆಗೆ, ಹುಣಸೂರಿನಲ್ಲಿ ಏ.15 ರಿಂದ 16ರವರೆಗೆ, ಚಾಮುಂಡೇಶ್ವರಿಯಲ್ಲಿ ಏ.13 ರಿಂದ 14ರವರೆಗೆ, ಕೃಷ್ಣರಾಜದಲ್ಲಿ ಏ.13 ರಿಂದ 14ರವರೆಗೆ, ಚಾಮರಾಜದಲ್ಲಿ ಏ.14 ರಿಂದ 15ರವರೆಗೆ, ನರಸಿಂಹರಾಜದಲ್ಲಿ ಏ.13 ರಿಂದ 14 ಮನೆಯಲ್ಲೇ ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಸಾಧ್ಯವಾಗದ ವಯೋವೃದ್ಧರು ಹಾಗೂ ಅಂಗವಿಕಲರಿಗೆ ಮನೆಯಲ್ಲಿಯೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಮನೆಯಲ್ಲಿಯೇ ಮತದಾನ ಮಾಡಲು ಅರ್ಜಿ ನೀಡಿದ ಮತದಾರರ ಮನೆ ಗಳಿಗೆ ಚುನಾವಣಾಧಿಕಾರಿಗಳು ತೆರಳಿ ಮತದಾನ ಮಾಡಿಸಲಿದ್ದಾರೆ.
ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಬಯಸುವ ವಯೋವೃದ್ಧರು ಹಾಗೂ ಅಂಗವಿಕಲರು ಏ.26 ರಂದು ನಡೆಯುವ ಚುನಾವಣೆಯಲ್ಲಿ ಮತವನ್ನು ಚಲಾಯಿಸಬಹುದು. ಮನೆಯಲ್ಲಿಯೇ ಮತದಾನ ಮಾಡಲು ಅರ್ಜಿ ನೀಡಿದವರು ಏ.26 ರಂದು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಅವಕಾಶ ಇಲ್ಲ.
ಮತಗಟ್ಟೆಗಳಲ್ಲಿ ಅಂಗವಿಕಲ ಹಾಗೂ ವಯೋವೃದ್ಧರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಜಿಲ್ಲಾಡಳಿತ ಕ್ರಮ ವಹಿಸಿದೆ. ಮತಗಟ್ಟೆಯಲ್ಲಿ ರ‌್ಯಾಂಪ್, ವೀಲ್‌ಚೇರ್, ಬೂತಗನ್ನಡಿಯ ವ್ಯವಸ್ಥೆಯನ್ನು ಕಲ್ಪಿಸಲು ತಯಾರಿ ಮಾಡಿಕೊಂಡಿದೆ. ದೃಷ್ಟಿದೋಷವುಳ್ಳವರಿಗೆ ಸಹಾಯವಾಗಲು ಬ್ರೈಲ್ ಬ್ಯಾಲೆಟ್ ಪೇಪರ್‌ಅನ್ನು ಸಹ ಒದಗಿಸಲಾಗುವುದು. ಅಂಗವಿಕಲ ಮತದಾರರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಯಾವುದೇ ರೀತಿಯ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತಿದೆ.