

ಮಂಜುನಾಥ ತಿಮ್ಮಯ್ಯ ಮೈಸೂರು
ತನ್ನಲ್ಲಿರುವ ವಿಧಾನಸಭಾ ಕ್ಷೇತ್ರಗಳನ್ನು ಎರಡು ಜಿಲ್ಲೆಗಳಿಗೆ ಹಂಚಿಕೊಂಡು, ಮತ್ತೊಂದು ಜಿಲ್ಲೆಯನ್ನು ಇಡೀ ಆಗಿ ತನ್ನೊಂದಿಗೆ ಸೇರಿಸಿಕೊಂಡಿರುವ ಅಪರೂಪ ಕ್ಷೇತ್ರ ಮೈಸೂರು-ಕೊಡಗು ಲೋಕಸಭಾ ಕಣ. ಇದು ಅನೇಕ ರಾಜಕೀಯ ಏರಿಳಿತ, ಹಾವು-ಏಣಿ ಆಟಕ್ಕೂ ಸಾಕ್ಷಿಯಾಗಿದೆ.
1951ರಿಂದ 17 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ 12 ಬಾರಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಮೊದಲ ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಸೋಷಿಯಲಿಸ್ಟ್ ಪಕ್ಷ ಒಮ್ಮೆ ಮತ್ತು ಬಿಜೆಪಿ 4 ಬಾರಿ ಗೆದ್ದಿದೆ. ಆದರೆ, ಜೆಡಿಎಸ್‌ಗೆ ಇನ್ನೂ ಖಾತೆ ತೆರೆಯಲೂ ಸಾಧ್ಯವಾಗಿಲ್ಲ. ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಒಮ್ಮೆಯೂ ಅವಕಾಶವೇ ದೊರೆತಿಲ್ಲ.
ಹಿಂದುಳಿದ ಅರಸು ಸಮುದಾಯದವರು 5 ಬಾರಿ ಗೆದ್ದಿದ್ದಾರೆ. ಮಹಿಳೆಗೂ ಒಮ್ಮೆ ಅವಕಾಶ ಸಿಕ್ಕಿದೆ. 4 ಬಾರಿ ಜಯಿಸಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2 ಸಲ ಸೋಲಿನ ರುಚಿಯನ್ನೂ ತೋರಿಸಿದೆ. ಇದು ಮೊದಲು ಕೈ ಭದ್ರಕೋಟೆ. ಕಳೆದ 2 ಚುನಾವಣೆಯಲ್ಲಿ ಕಮಲ ಹಿಡಿತಕ್ಕೆ ಜಾರಿದೆ. ಇದೀಗ ಕಾಂಗ್ರೆಸ್-ಬಿಜೆಪಿ ನಡುವೆಯೇ ನೇರ ಸೆಣಸಾಟ.
ಗೆಲುವು ಸಾಧಿಸಲು ಒಕ್ಕಲಿಗ ಸಮುದಾಯದ ಮತಗಳು ನಿರ್ಣಾಯಕವಾಗಿದೆ. ಹೀಗಾಗಿ, ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಂ.ಲಕ್ಷ್ಮಣ್‌ಗೆ ಈ ಸಲ ಕಾಂಗ್ರೆಸ್ ಮಣೆ ಹಾಕಿದೆ. ಈ ಸಮುದಾಯ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿಸಿ ಅರಸು ಸಮುದಾಯದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಅವಕಾಶ ಕಲ್ಪಿಸಲಾಗಿದ್ದು, ಜಾತಿ ಸಮೀಕರಣದ ಆಟ ಹೇಗೆ ಕೆಲಸ ಮಾಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಮೈಸೂರು ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ತುಳಸಿದಾಸ್ ದಾಸಪ್ಪ 1967, 1971 ಮತ್ತು 1977ರಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದರು. ಆ ನಂತರದ ವರ್ಷಗಳಲ್ಲಿ ಬದಲಾದ ರಾಜಕೀಯ ಚಿತ್ರಣದಿಂದ ಈ ಸಮುದಾಯದ ಅಭ್ಯರ್ಥಿಗಳು ಗೆಲುವು ಸಾಧಿಸಲು ಆಗಿಲ್ಲ. ಆದ್ದರಿಂದ 2014, 2019ರಲ್ಲಿ ಈ ಸಮುದಾಯದ ಪ್ರತಾಪ್ ಸಿಂಹ ಸುಲಭವಾಗಿ ಜಯ ಸಾಧಿಸಿದರು. ಈ ಎರಡು ಚುನಾವಣೆಯಲ್ಲೂ ಪ್ರತಾಪ್ ಸಿಂಹ ಜಯಕ್ಕೆ ಜೆಡಿಎಸ್ ತೆರೆಮರೆಯಲ್ಲಿ ನೀರೆರೆಯಿತು. ಇಲ್ಲಿ ಕುರುಬ ಸಮಾಜದವರು 3 ಬಾರಿ ಜಯ ಕಂಡಿದ್ದಾರೆ.
ವೀರಶೈವ- ಲಿಂಗಾಯತರಿಗೂ ಜಯ ಲಭಿಸಿದೆ. ಆದರೆ, 1984ರ ಚುನಾವಣೆಯಿಂದ ಹಿಡಿದು 2004ರ ವರೆಗೆ ಪ್ರಬಲ ಜಾತಿಗಳಾದ ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯತ ಅಭ್ಯರ್ಥಿ ಜಯಿಸಿರಲಿಲ್ಲ. 1984, 1989, 1996 ಹಾಗೂ 1999ರಲ್ಲಿ ಅರಸು ಸಮಾಜದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜಯ ದಾಖಲಿಸಿ ಸಂಸತ್ ಪ್ರವೇಶಿಸಿದ್ದರು. 1991ರಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪುತ್ರಿ, ಅರಸು ಸಮಾಜದ ಚಂದ್ರಪ್ರಭಾ ಅರಸು ಅವರಿಗೆ ಅದೃಷ್ಟ ಒಲಿದಿತ್ತು.
ಕುರುಬ ಸಮಾಜದ ಸಿ.ಎಚ್.ವಿಜಯಶಂಕರ್ ಅವರು ಬಿಜೆಪಿಯಿಂದ 1998 ಹಾಗೂ 2004ರಲ್ಲಿ ಜಯ ಸಾಧಿಸಿದ್ದರು. 2009ರಲ್ಲಿ ಗೆದ್ದ ಎಚ್.ವಿಶ್ವನಾಥ್ ಕೂಡ ಕುರುಬ ಸಮಾಜದವರು. 2014, 2019ರಲ್ಲಿ ಒಕ್ಕಲಿಗ ಸಮಾಜದ ಪ್ರತಾಪ ಸಿಂಹ ಜಯ ಕಂಡಿದ್ದರು.
ಮೈಸೂರು ಕ್ಷೇತ್ರವು ಆರಂಭದಲ್ಲಿ ದ್ವಿಸದಸ್ಯ ಕ್ಷೇತ್ರ. 1952ರಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಸೋಷಿಯಲಿಸ್ಟ್ ಪಕ್ಷ ಎಂ.ಎಸ್. ಗುರುಪಾದಸ್ವಾಮಿ ಮತ್ತು ಕಾಂಗ್ರೆಸ್‌ನಿಂದ ಎನ್.ರಾಚಯ್ಯ ಜಯ ಕಂಡಿದ್ದರು. 1957ರಲ್ಲಿ ಕಾಂಗ್ರೆಸ್‌ನ ಎಂ.ಶಂಕರಯ್ಯ ಹಾಗೂ ಎಸ್.ಎಂ.ಸಿದ್ದಯ್ಯ ಗೆಲವು ಸಾಧಿಸಿದ್ದರು. 1962ರಲ್ಲಿ ಕಾಂಗ್ರೆಸ್‌ನ ಎಂ.ಶಂಕರಯ್ಯ ಮತ್ತು ಎಚ್.ಡಿ.ತುಳಸಿದಾಸ್ ಸಂಸತ್‌ಗೆ ಪದಾರ್ಪಣೆ ಮಾಡಿದ್ದರು. 1971 ಮತ್ತು 1977ರ ಚುನಾವಣೆಯಲ್ಲೂ ತುಳಸಿದಾಸ್ ಕಾಂಗ್ರೆಸ್‌ನಿಂದಲೇ ಗೆಲುವು ಸಾಧಿಸಿದ್ದರು. 1980ರಲ್ಲಿ ಕಾಂಗ್ರೆಸ್(ಐ) ಪಕ್ಷದ ಅಭ್ಯರ್ಥಿ ಎಂ.ರಾಜಶೇಖರ್ ಮೂರ್ತಿ ಅವರಿಗೆ ಮತದಾರರು ಆಶೀರ್ವಾದ ಮಾಡಿದ್ದರು.
1984 ಹಾಗೂ 1989ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆಯ್ಕೆಯಾದವರು. ಅವರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 1991ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಶ್ರೀಕಂಠದತ್ತ ಅವರು ಕಾಂಗ್ರೆಸ್‌ನ ಚಂದ್ರಪ್ರಭಾ ಅರಸು ವಿರುದ್ಧ ಪರಾಜಯಗೊಂಡರು. 1996ರಲ್ಲಿ ಶ್ರೀಕಂಠದತ್ತ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮತ್ತೆ ಜಯ ದಕ್ಕಿಸಿಕೊಂಡರು.
ಬಳಿಕ 1998ರಲ್ಲಿ ಒಡೆಯರ್ ಅವರನ್ನು ಸೋಲಿಸಿದ ಸಿ.ಎಚ್.ವಿಜಯಶಂಕರ್ ಮೊದಲ ಬಾರಿಗೆ ಕಮಲವನ್ನು ಅರಳಿಸಿದ್ದರು. 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಒಲಿಸಿಕೊಂಡ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಿಜೆಪಿಯ ವಿರುದ್ಧ ಸೇಡು ತೀರಿಸಿಕೊಂಡರು. ಬಳಿಕ ಒಡೆಯರ್ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿರಾದರು.
2004ರಲ್ಲಿ ಬಿಜೆಪಿಯ ಸಿ.ಎಚ್.ವಿಜಯಶಂಕರ್ ಆಯ್ಕೆಯಾದರು. 2009ರಲ್ಲಿ ಕ್ಷೇತ್ರ ಮತ್ತೆ ಕಾಂಗ್ರೆಸ್ ಒಲಿಯಿತು. ಆಗ ಎಚ್. ವಿಶ್ವನಾಥ್ ಜಯ ಸಾಧಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು. 2014 ಹಾಗೂ 2019ರ ಚುನಾವಣೆಯಲ್ಲೂ ಬಿಜೆಪಿ ಕ್ಷೇತ್ರವನ್ನು ತನ್ನ ತೆಕ್ಕೆ ತೆಗೆದುಕೊಂಡಿತು. ಬಳಿಕ ಇದನ್ನು ವಶ ಪಡಿಸಿಕೊಳ್ಳಲು ಪ್ರಯತ್ನಿಸಿದ್ದರೂ ಕಾಂಗ್ರೆಸ್‌ಗೆ ಫಲ ಕೊಟ್ಟಿಲ್ಲ
2009ರಲ್ಲಿ ನಡೆದ ಪುನರ್ವಿಂಗಡಣೆ ಬಳಿಕ ಬಹಳಷ್ಟು ಬದಲಾವಣೆಗೆ ಕ್ಷೇತ್ರ ಸಾಕ್ಷಿಯಾಗಿದೆ. ಮೈಸೂರು ಜಿಲ್ಲಾ ವ್ಯಾಪ್ತಿಯ ಎಚ್.ಡಿ.ಕೋಟೆ, ತಿ.ನರಸೀಪುರ, ವರುಣ, ನಂಜನಗೂಡು ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಯಿತು. ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರದ ಪಾಲಾಯಿತು.
ಅಲ್ಲಿಯ ತನಕ ಮಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಕೊಡಗು ಜಿಲ್ಲೆಯು ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರ್ಪಡೆಗೊಂಡಿತು. ಇದು ಪರೋಕ್ಷವಾಗಿ ಬಿಜೆಪಿಗೆ ಅನುಕೂಲವಾಗಿದೆ. ಹೀಗಾಗಿ, 2 ಸಲ ಕಮಲ, ಒಂದು ಸಲ ಕೈ ಅಭ್ಯರ್ಥಿ ಗೆದ್ದಿದ್ದಾರೆ.