ಮೈಸೂರು ಲೋಕಸಭಾ ಕ್ಷೇತ್ರ : ರಾಜವಂಶಸ್ಥ - ಕಾಮನ್‌ಮ್ಯಾನ್ ನಡುವೆ ಫೈಟ್

yaduveer and lakshman
Published on

ಸದೇಶ್ ಕಾರ್ಮಾಡ್ ಮೈಸೂರು
ದಶಕಗಳ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಪ್ರಸ್ತುತ ಬಿಜೆಪಿಯ ಭದ್ರಕೋಟೆ. ಮತ್ತೆ ತನ್ನ ಹಳೆಯ ಭದ್ರಕೋಟೆಯನ್ನು ವಶಪಡಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್ ಇದ್ದು, ಬಿಜೆಪಿ ತನ್ನ ಭದ್ರಕೋಟೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ಉತ್ಸಾಹದಲ್ಲಿದೆ.

ಪ್ರತಿ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗುವ ಈ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಹೊಸ ಮುಖವನ್ನು ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಣಕ್ಕಿಳಿದಿದ್ದಾರೆ. ಅಭ್ಯರ್ಥಿಗಳ ಬದಲಾವಣೆಯು ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಗೂ ಕಾರಣವಾಗಿದ್ದು, ಇದರಿಂದ ಯಾರಿಗೆ ನಷ್ಟ? ಯಾರಿಗೆ ಲಾಭ? ಎಂಬುದು ಕ್ಷೇತ್ರದಲ್ಲಿ ಪ್ರಮುಖ ಚರ್ಚೆಯ ವಿಷಯ.

ಸತತ ಎರಡು ಬಾರಿ ಗೆಲುವು ಸಾಧಿಸಿದ್ದ ಬಿಜೆಪಿಯ ಪ್ರತಾಪ್ ಸಿಂಹರನ್ನು ಎದುರಿಸಲು ಕಾಂಗ್ರೆಸ್ ಎಲ್ಲ ರೀತಿಯ ತಯಾರಿ ಮಾಡಿ ಕೊಂಡಿತ್ತು. ಆದರೆ, ಬಿಜೆಪಿ ಹೈಕಮಾಂಡ್ ದಿಢೀರಾಗಿ ಯದುವೀರ್‌ರನ್ನು ಕಣಕ್ಕಿಳಿಸಿ ಕಾಂಗ್ರೆಸ್‌ಗೆ ಶಾಕ್ ನೀಡಿದೆ. ಚುನಾವಣೆ ಅಂದರೆ ವಾಕ್ಸಮರ, ಟೀಕೆ ಟಿಪ್ಪಣಿಗಳು ಸಹಜ. ಆದರೆ, ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಟೀಕಿಸುವ ಸಾಹಸಕ್ಕೆ ಕಾಂಗ್ರೆಸ್ ಮುಂದಾಗುತ್ತಿಲ್ಲ. ಇದಕ್ಕೆ ಮೈಸೂರು ರಾಜಮನೆತನದೊಂದಿಗೆ ಮೈಸೂರಿಗರು ಹೊಂದಿರುವ ಭಾವನಾತ್ಮಕ ಸಂಬಂಧವೇ ಪ್ರಮುಖ ಕಾರಣ. ಬಿಜೆಪಿಗೆ ಇದುವೇ ಟ್ರಂಪ್ ಕಾರ್ಡ್.

ಬಿಜೆಪಿಯ ‘ಮೈಸೂರು ರಾಜಮನೆತನ’ ಟ್ರಂಪ್‌ಕಾರ್ಡ್‌ಗೆ ಪ್ರತಿಯಾಗಿ ಕಾಂಗ್ರೆಸ್ ಒಕ್ಕಲಿಗ ‘ಟ್ರಂಪ್ ಕಾರ್ಡ್’ ಬಳಸುತ್ತಿದೆ. ಕ್ಷೇತ್ರ ದಲ್ಲಿ ಒಕ್ಕಲಿಗ ಸಮುದಾಯ ಪ್ರಾಬಲ್ಯ ಹೊಂದಿದ್ದು, ಇದರ ಪೂರ್ಣ ಲಾಭ ಪಡೆಯಲು ಕಾಂಗ್ರೆಸ್ ಒಕ್ಕಲಿಗ ಸಮುದಾಯದ ಎಂ. ಲಕ್ಷ್ಮಣ್‌ರನ್ನು ಕಣಕ್ಕಿಳಿಸಿದೆ. ಈ ಲೆಕ್ಕಾಚಾರ ಸುಲಭವಾಗಿ ಕಾಂಗ್ರೆಸ್‌ಗೆ ಒಕ್ಕಲಿಗ ಮತಗಳನ್ನು ತಂದುಕೊಡಬಲ್ಲದು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಬಿಜೆಪಿಯ ಪ್ರತಾಪ್ ಸಿಂಹ ಎರಡು ಬಾರಿ ಗೆಲುವು ಸಾಧಿಸಲು ಜೆಡಿಎಸ್ ಕಾರ್ಯಕರ್ತರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಬಾರಿ ಜೆಡಿಎಸ್ ಎನ್‌ಡಿಎ ಮೈತ್ರಿಕೂಟ ಸೇರ್ಪಡೆಯಾಗಿರುವುದು ಕ್ಷೇತ್ರದಲ್ಲಿ ಬಿಜೆಪಿಯ ಬಲ ಹೆಚ್ಚಿಸಿದೆ. ಆದರೆ, ಒಕ್ಕಲಿಗ ಸಮುದಾಯದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವುದು ಸಹಜವಾಗಿಯೇ ಒಕ್ಕಲಿಗ ಸಮುದಾಯದ ಹಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಇದರ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಮೈಸೂರು ರಾಜಮನೆತನದ ಬಗ್ಗೆ ನಮಗೆ ಗೌರವವಿದೆ ಅನ್ನುತ್ತಲೇ ಈ ಚುನಾವಣೆಯನ್ನು ‘ರಾಜವಂಶಸ್ಥ -ಕಾಮನ್‌ಮ್ಯಾನ್’ ನಡುವಿನ ಫೈಟ್ ಎಂದು ಕಾಂಗ್ರೆಸ್ ಕರೆದಿರುವುದು ಚುನಾವಣೆಯ ರೋಚಕತೆಯನ್ನು ಹೆಚ್ಚಿಸಿದೆ.

ಅಭ್ಯರ್ಥಿಗಳ ಪ್ಲಸ್-ಮೈನಸ್

ರಾಜಮನೆತನದ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಅಭ್ಯರ್ಥಿ ಯದುವೀರ್‌ಗೆ ವರದಾನವಾಗಲಿದೆ. ಆದರೆ, ರಾಜಮನೆನದವರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವರೇ? ಸುಲಭವಾಗಿ ಕೈಗೆ ಸಿಗುವರೇ ಎಂಬುದೇ ಮತದಾರರಲ್ಲಿರುವ ಪ್ರಶ್ನೆಯಾಗಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾಯಕತ್ವ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್‌ಗೆ ಶ್ರೀರಕ್ಷೆಯಾಗಿದೆ. ಆದರೆ, ಯದುವೀರ್‌ಗೆ ಹೋಲಿಸಿದರೆ ಲಕ್ಷ್ಮಣ್ ಜನಪ್ರಿಯತೆ ಕಡಿಮೆ.

ಜಾತಿವಾರು ಲೆಕ್ಕಾಚಾರ

ಕ್ಷೇತ್ರದಲ್ಲಿ 10,17,120 ಪುರುಷ, 10,55,035 ಮಹಿಳೆ, 182 ತೃತೀಯಲಿಂಗಿ ಮತದಾರರು ಸೇರಿದಂತೆ ಒಟ್ಟು 20,72,337 ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ನಂತರದ ಸ್ಥಾನದಲ್ಲಿ ದಲಿತ, ಮುಸ್ಲಿಂ, ಕುರುಬ, ವೀರಶೈವ ಲಿಂಗಾಯತ, ಬ್ರಾಹ್ಮಣ, ಕೊಡವ, ನಾಯಕ ಹಾಗೂ ಇತರೆ ಸಮುದಾಯಗಳು ಇವೆ. ಒಕ್ಕಲಿಗ ಮತದಾರರು ಈ ಬಾರಿ ಯಾರ ಕಡೆಗೆ ಒಲವು ತೋರುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಇರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕುರುಬ ಹಾಗೂ ಮುಸ್ಲಿಂ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸೆಳೆಯುವ ನಿರೀಕ್ಷೆ ಇದೆ. ಇದರ ಜತೆಗೆ ದಲಿತ ಹಾಗೂ ಹಿಂದುಳಿದ ವರ್ಗಗಳ ಮತಗಳ ಮೇಲೆ ಕಾಂಗ್ರೆಸ್ ಹೆಚ್ಚಿನ ನಿರೀಕ್ಷೆಗಳನ್ನು ಕಾಂಗ್ರೆಸ್ ಹೊಂದಿದೆ. ಆದರೆ, ದಲಿತ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೈಸೂರು ರಾಜಮನೆತದ ಕೊಡುಗೆ ಅಪಾರವಾಗಿದೆ. ಹೀಗಾಗಿ ಈ ಸಮುದಾಯಗಳು ಮತಗಳು ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಇದೆ. ಮಹಿಷಾ ದಸರಾ ವಿಚಾರವಾಗಿ ದಲಿತ ಸಮುದಾಯ ಬಿಜೆಪಿ ಹಾಗೂ ಸಂಸದ ಪ್ರತಾಪ್ ಸಿಂಹ ವಿರುದ್ಧ ತೀವ್ರ ಆಕ್ರೋಶದಲ್ಲಿದೆ. ಆದರೆ, ಬಿಜೆಪಿ ಇದೀಗ ಯದುವೀರ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದು ದಲಿತ ಸಮುದಾಯದವರನ್ನು ಗೊಂದಲಕ್ಕೆ ಒಳಗಾಗುವಂತೆ ಮಾಡಿದೆ. ಇತರೆ ಸಮುದಾಯಗಳ ಮತಗಳು ಪಕ್ಷ, ಸಿದ್ಧಾಂತ ಹಾಗೂ ವಿವಿಧ ವಿಚಾರಗಳ ಆಧಾರದಲ್ಲಿ ಚದುರುವ ಸಾಧ್ಯತೆ ಇದೆ.

ಕಾಂಗ್ರೆಸ್ ದಾಖಲೆಯ ಗೆಲುವು

1951 ರಿಂದ 17 ಚುನಾವಣೆಗಳನ್ನು ಕಂಡಿರುವ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 12 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಮೊದಲ ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಸೋಷಿಯಲಿಸ್ಟ್ ಪಕ್ಷ ಗೆಲುವು ಸಾಧಿಸಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಇದ್ದು, ಬಿಜೆಪಿ 2018ರ ವಿಧಾನಸಭಾ ಚುನಾವಣೆ ಯಲ್ಲಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, 2023ರಲ್ಲಿ ಸಂಖ್ಯಾಬಲ 1ಕ್ಕೆ ಕುಸಿತ ಕಂಡಿದೆ. 2018ರಲ್ಲಿ ಕಾಂಗ್ರೆಸ್ ಕೇವಲ 2 ಕ್ಷೇತ್ರ ಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. 2023ರಲ್ಲಿ ಸಂಖ್ಯಾಬಲವನ್ನು 5 ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿದೆ.

ಜನರ ನಡುವೆ ಇರುವ ವ್ಯಕ್ತಿ ನಾನು. ನನ್ನ ಹೆಸರಿನ ಮುಂದೆ ರಾಜ, ಮಹಾರಾಜ ಅಥವಾ ಒಡೆಯರ್ ಎಂಬುದು ಇಲ್ಲ. ರೈತ ಹಾಗೂ ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದಿರುವ ನನ್ನನ್ನು ಮತದಾರರು ಕೈ ಹಿಡಿಯುವ ವಿಶ್ವಾಸವಿದೆ. ಈ ಕ್ಷೇತ್ರದಲ್ಲಿ 47 ವರ್ಷಗಳ ನಂತರ ಕಾಂಗ್ರೆಸ್‌ನಿಂದ ಒಕ್ಕಲಿಗ ಸಮುದಾಯದವರಿಗೆ ಟಿಕೆಟ್ ದೊರೆತ್ತಿದ್ದು, ಸಮುದಾಯದವರು ಈ ಅವಕಾಶವನ್ನು ಕೈ ಚೆಲ್ಲಬಾರದು. ನಮಗೆ ರಾಜಮನೆನದ ಬಗ್ಗೆ ಗೌರವವಿದೆ. ಆದರೆ, ಬಿಜೆಪಿಯ ಜನವಿರೋಧಿ ಆಡಳಿತದಿಂದ ಮತದಾರರು ಬೇಸತ್ತಿದ್ದು, ಈ ಬಾರಿ ಕಾಂಗ್ರೆಸ್‌ಅನ್ನು ಬೆಂಬಲಿಸಲಿದ್ದಾರೆ.
ಎಂ.ಲಕ್ಷ್ಮಣ್,
ಕಾಂಗ್ರೆಸ್ ಅಭ್ಯರ್ಥಿ

ರಾಜವಂಶಸ್ಥರು ಎಂಬ ಪ್ರೀತಿ, ವಿಶ್ವಾಸ, ನಂಬಿಕೆ ನಮ್ಮ ಜನರಲ್ಲಿರುವುದು ಸಹಜ. ಆದರೆ, ಸಂವಿಧಾನದ ಪ್ರಕಾರ ನಾನು ಸಹ ಸಾಮಾನ್ಯಪ್ರಜೆ. ಜನರು ಆಶೀರ್ವಾದ ಮಾಡಿದರೆ ಸಾಮಾನ್ಯ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತೇನೆ. ನಮ್ಮ ಪೂರ್ವಜರು ಮೈಸೂರು ಸಂಸ್ಥಾನಕ್ಕೆ ನೀಡಿದ ಕೊಡುಗೆಗಳು ಹಾಗೂ ಕೇಂದ್ರ ಸರ್ಕಾರ ನೀಡಿರುವ ಕೊಡುಗೆಗಳು ನನಗೆ ಶ್ರೀರಕ್ಷೆ. ಅವರ ಜನಪರ ಕಾಳಜಿಯನ್ನು ಆದರ್ಶವಾಗಿಟ್ಟುಕೊಂಡು ಮೈಸೂರು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದು.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,
ಬಿಜೆಪಿ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net