

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ, 2 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಲೀಡ್ ಪಡೆದುಕೊಂಡಿದೆ.
ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧಿಸಿ 7,95,503 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಂ. ಲಕ್ಷ್ಮಣ್ ಅವರನ್ನು 1,39,262 ಮತಗಳ ಅಂತರದಿಂದ ಮಣಿಸಿದರು. ಲಕ್ಷ್ಮಣ್ ಒಟ್ಟು 6,56,241 ಮತಗಳನ್ನು ಪಡೆದರು.
ಈ ಬಾರಿ ಹಾಲಿ ಸಂಸದರಾಗಿದ್ದ ಒಕ್ಕಲಿಗ ಸಮುದಾಯದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ನೀಡದೆ ಯದುವೀರ್ ಅವರನ್ನು ಕಣಕ್ಕಿಳಿಸಿತು. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಕಾಂಗ್ರೆಸ್ ಒಕ್ಕಲಿಗ ಸಮುದಾಯದ ಎಂ. ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಿತು. ಆದರೆ, ಕಾಂಗ್ರೆಸ್ ಶಾಸಕ ಕೆ.ಹರೀಶ್‌ಗೌಡ ಪ್ರತಿನಿಧಿಸುವ ಒಕ್ಕಲಿಗರ ಪ್ರಾಬಲ್ಯ ಇರುವ ಚಾಮರಾಜ ಕ್ಷೇತ್ರದಲ್ಲೇ ಬಿಜೆಪಿ ಹೆಚ್ಚಿನ ಮತಗಳನ್ನು ಗಳಿಸಿದೆ.
ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿರುವ ಮಡಿಕೇರಿ, ವಿರಾಜಪೇಟೆ, ಚಾಮರಾಜ ಕ್ಷೇತ್ರ, ಜೆಡಿಎಸ್ ಶಾಸಕರು ಪ್ರತಿನಿಧಿಸುತ್ತಿರುವ ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರ, ಬಿಜೆಪಿ ಶಾಸಕ ಪ್ರತಿನಿಧಿಸುತ್ತಿರುವ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿರುವ ನರಸಿಂಹರಾಜ ಹಾಗೂ ಪಿರಿಯಾಪಟ್ಟಣದಲ್ಲಿ ಮಾತ್ರ ಕಾಂಗ್ರೆಸ್‌ಗೆ ಲೀಡ್ ದೊರೆತ್ತಿದೆ.
ವಿಧಾನಸಭಾಕ್ಷೇತ್ರ ಬಿಜೆಪಿ ಕಾಂಗ್ರೆಸ್ ಮತಗಳ ಅಂತರ
ಮಡಿಕೇರಿ 1,08,402 66,994 41,408
ವಿರಾಜಪೇಟೆ 99,804 67,353 32,451
ಪಿರಿಯಾಪಟ್ಟಣ 71,237 82,981 -11,744
ಹುಣಸೂರು 95,266 92,198 3,068
ಚಾಮುಂಡೇಶ್ವರಿ 1,43,327 1,06,086 37,244
ಕೃಷ್ಣರಾಜ 1,04,596 50,171 54,425
ಚಾಮರಾಜ 1,05,480 49,083 56,397
ನರಸಿಂಹರಾಜ 62,279 1,38,876 -76,597
ಅಂಚೆ ಮತಗಳು 5,112 2,502 2,610
ಒಟ್ಟು 7,95,503 6,56,241 1,39,262