ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ

15
Published on

ಮೈಸೂರು: ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನೆರವು ನೀಡುವ ನೆಪದಲ್ಲಿ ಭ್ರಷ್ಟಾಚಾರವೆಸಗಿರುವ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭದ ಅಂಗವಾಗಿ ನಗರದ ಕಾಂಗ್ರೆಸ್ ಭವನದಲ್ಲಿ ಗುರವಾರ ಆಯೋಜಿಸಿದ್ದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯ ಬೆಂಬಲ ನೀಡಿದೆ. ಆದರೆ, ಕರೊನಾ ವೈರಸ್ ತಡೆಗಟ್ಟುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಮಾತಿನ ಮಲ್ಲರಾಗಿದ್ದು, ಸುಳ್ಳು ಹೇಳುವುದರಲ್ಲಿ ನಿಸ್ಸಿಮರಾಗಿದ್ದಾರೆ. ಕರೊನಾ ಸಂತ್ರಸ್ತರಿಗಾಗಿ 20 ಲಕ್ಷ ಕೋಟಿ ರೂ. ಪರಿಹಾರ ನೀಡುವುದಾಗಿ ಹೇಳಿದರು. ಆದರೆ, ಅವರು ನೀಡಿದ ಆರ್ಥಿಕ ಪ್ಯಾಕೇಜ್ ಬೋಗಸ್ ಪ್ಯಾಕೇಜ್ ಆಗಿದೆ ಎಂದು ಟೀಕಿಸಿದರು.

ರಾಜ್ಯ ಸರಕಾರ ಕೂಡ 50 ಸಾವಿರ ಕೋಟಿ ರೂ. ಪರಿಹಾರವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಅಲ್ಲದೇ ಮುಖ್ಯಮಂತ್ರಿಗಳು ಮತ್ತು ಸಚಿವರೊಂದಿಗೆ ಹೊಂದಾಣಿಕೆ ಇಲ್ಲದೇ ಇರುವುದರಿಂದ ಸಮಸ್ಯೆ ಎದುರಾಗಿದೆ. ಮೋದಿ ಯಾವುದೇ ಪೂರ್ವಾಲೋಚನೆ ಇಲ್ಲದೆ ಇಡೀ ದೇಶವನ್ನು ಲಾಕ್‌ಡೌನ್ ಮಾಡಿದ್ದರು. ಇದರಿಂದಾಗಿ ಕೂಲಿ ಕಾರ್ಮಿಕರು, ಬಡವರು ಸೇರಿ ಎಲ್ಲರೂ ಅಪಾರ ತೊಂದರೆ ಅನುಭವಿಸಿದರು ಎಂದು ಆರೋಪಿಸಿದರು.

ಕರೊನಾ ನಿಯಂತ್ರಣಕ್ಕೆ ಕಾಂಗ್ರೆಸ್ ಸಹ ಸಕ್ರಿಯವಾಗಿ ಕೈ ಜೋಡಿಸಿದ್ದು, ಕಳೆದ ಎರಡು ತಿಂಗಳಿನಿಂದ 1.6 ಕೋಟಿ ರೂ. ಆಹಾರ ಪೊಟ್ಟಣ, 35 ಲಕ್ಷ ರೂ. ಮಾಸ್ಕ್ , 7 ಲಕ್ಷ ರೂ. ಸ್ಯಾನಿಟೈಸರ್, 75 ಲಕ್ಷ ರೂ. ಪಡಿತರ ಕಿಟ್ ನೀಡಲು ನೆರವಾಗಿದೆ. ಅಲ್ಲದೇ ರಾಜ್ಯ, ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ರಚಿಸುವ ಮೂಲಕ ಸಂತ್ರಸ್ತರಿಗೆ ಸಹಾಯ ಮಾಡಲಾಗಿದೆ ಎಂದು ಹೇಳಿದರು.

ಕೇಡರ್ ಬೇಸ್ ಪಕ್ಷ ಕಟ್ಟುತ್ತೇವೆ: ಜೂ.7ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕಾರ ಸ್ಪೀಕರಿಸಲಿದ್ದಾರೆ. ಅಂದೇ ಕೆಪಿಸಿಸಿ ಕಾರ್ಯಾಧ್ಯಕ್ಷರ ಪದಗ್ರಹಣವು ನಡೆಯಲಿದೆ. ಅಂದಿನಿಂದಲೇ ನಾವೆಲ್ಲರೂ ಸಾಮೂಹಿಕವಾಗಿ ಪಕ್ಷ ಸಂಘಟನೆ ಮಾಡಲಿದ್ದು, ಪಕ್ಷವನ್ನು ಮಾಸ್ ಬೇಸ್ ಪಕ್ಷವಾಗಿ ಕಟ್ಟದೆ ಕೇಡರ್ ಬೇಸ್ ಪಕ್ಷವಾಗಿ ಕಟ್ಟುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net