

ಮೈಸೂರು: ಮೈಸೂರು- ಕುಶಾಲನಗರ ಹೆದ್ದಾರಿ ಪ್ರಾಥಮಿಕ ಕಾಮಗಾರಿಯನ್ನು ಡಿಸೆಂಬರ್ ಹೊತ್ತಿಗೆ ಶುರು ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(ಎನ್‌ಎಚ್‌ಎ)ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು- ಕುಶಾಲನಗರ ಹೆದ್ದಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
93 ಕಿ.ಮೀ. ಉದ್ದದ ಈ ಹೆದ್ದಾರಿ ಇಷ್ಟು ಹೊತ್ತಿಗೆ ಶುರುವಾಗಬೇಕಿತ್ತು. ಆದರೆ, ವಿವಿಧ ಕಾರಣಗಳಿಂದ ವಿಳಂಬವಾಗಿದೆ. ತಕ್ಷಣವೇ ಕಾಮಗಾರಿ ಶುರು ಮಾಡಬೇಕು. ಕೆಲ ಕಡೆ ಭೂಸ್ವಾಧೀನ ಸಮಸ್ಯೆಯಾಗಿದೆ. ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಬಗೆಹರಿಸಬೇಕು. ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಭೂಮಿಯಲ್ಲಿರುವ ಕೆರೆ, ಮರಗಳು, ವಿದ್ಯುತ್ ಕಂಬಗಳ ಸಮೀಕ್ಷಾ ಕಾರ್ಯಪೂರ್ಣಗೊಳಿಸಿ, ಅವುಗಳ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಜಮೀನು ಸ್ವಾಧೀನಪಡಿಸಿಕೊಂಡ ರೈತರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಬೇಡಿ. ರಿಯಲ್ ಎಸ್ಟೇಟ್ ಚಟುವಟಿಕೆಯಿಂದ ಗುಂಗ್ರಾಲ್ ಛತ್ರ ಗ್ರಾಮದ ಬಳಿ ಭೂಮಿ ಬೆಲೆ ಅಧಿಕವಾಗಿದೆ. ದಡ್ಡದಳ್ಳಿ ಬಳಿ ಭೂಮಿ ಮೌಲ್ಯ ಕಡಿಮೆ ಇದೆ. ಹೀಗಾಗಿ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪರಿಹಾರ ನೀಡಿದರೆ ರೈತರಿಗೆ ಅಸಮಾಧಾನವಾಗಲಿದೆ. ಇದರಿಂದ ಕೋರ್ಟ್‌ನ ಮೊರೆ ಹೋಗುವ ಸಾಧ್ಯತೆಯೂ ಇರುತ್ತದೆ. ಇದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ. ಆದ್ದರಿಂದ ಭೂಮಿ ಕಳೆದುಕೊಂಡ ಎಲ್ಲ ರೈತರಿಗೂ ಪ್ರತಿ ಎಕರೆಗೆ ಏಕರೂಪದ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಹೆದ್ದಾರಿಗೆ ಸಂಬಂಧಿಸಿದ ಭೂ ವ್ಯಾಜ್ಯದ ಕುರಿತು ಜಿಲ್ಲಾಧಿಕಾರಿ ಕೋರ್ಟ್‌ನಲ್ಲಿ ನಡೆಯುವ ದಾವೆಗಳ ವಿಚಾರಣೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ವಾದ ಮಂಡಿಸಲು ವಕೀಲರೇ ಬರುತ್ತಿಲ್ಲ ಎಂಬ ಸಂಗತಿಯನ್ನು ಸಭೆಯಲ್ಲಿ ಬಹಿರಂಗವಾಯಿತು.
ಈ ವಿಷಯವನ್ನು ತಿಳಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ವಕಾಲತ್ತು ವಹಿಸಲು ಎನ್‌ಎಚ್‌ಎ ಪರ ವಕೀಲರು ಗೈರಾಗುತ್ತಿದ್ದಾರೆ. ಇದರಿಂದ ವಿಚಾರಣಾ ದಿನಾಂಕವನ್ನು ಮುಂದಕ್ಕೆ ಹಾಕಿರುವ ನಿದರ್ಶನಗಳಿವೆ. ಜತೆಗೆ, ವಾದ ಮಂಡಿಸುವ ಕೆಲಸ ವಹಿಸಿಕೊಂಡಿರುವ ಬೆಂಗಳೂರಿನ ವಕೀಲರು ಸ್ಥಳೀಯ ವಕೀಲರನ್ನು ಕಳುಹಿಸಿ ಸುಮ್ಮನಾಗುತ್ತಿದ್ದಾರೆ. ಹಾಜರಾಗುವ ವಕೀಲರಿಗೆ ದಾವೆಗಳ ಕುರಿತು ಮಾಹಿತಿಯೇ ಇರುವುದಿಲ್ಲ ಎಂದು ಹೇಳಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಈ ಸಮಸ್ಯೆ ಬಗೆಹರಿಯಬೇಕು. ಕೆಲಸವನ್ನು ವಹಿಸಿಕೊಂಡಿರುವ ವಕೀಲರು ಖುದ್ದು ಕೋರ್ಟ್ ವಿಚಾರಣೆಗೆ ಹಾಜರಾಗಿ ವಕಾಲತ್ತು ವಹಿಸಬೇಕು ಎಂದು ಸೂಚಿಸಿದರು.
ಮೈಸೂರು ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಬೆಂಗಳೂರಿನಿಂದ ಬರುವ ವಾಹನಗಳು ನಗರಕ್ಕೆ ಬಂದೇ ಮಡಿಕೇರಿ ಕಡೆಗೆ ಹೋಗಬೇಕಿದೆ. ಇದು ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಹಿನಕಲ್‌ನಿಂದ ಇಲವಾಲದವರೆಗೆ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರವಾಗಿದೆ. ಅಪಘಾತಗಳೂ ಸಂಭವಿಸುತ್ತಿವೆ. ಆದ್ದರಿಂದ ಈ ಸಮಸ್ಯೆಗೆ ಈ ಹೆದ್ದಾರಿ ನಿರ್ಮಾಣವೇ ಪರಿಹಾರವಾಗಿದೆ. ಬೆಂಗಳೂರಿನಿಂದ ಬರುವ ವಾಹನಗಳು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಿಂದ ತಿರುವು ಪಡೆದುಕೊಂಡು ಕುಶಾಲನಗರ ಕಡೆಗೆ ತೆರಳಲಿವೆ. ಮೈಸೂರಿಗೆ ವಾಹನಗಳು ಬರುವುದು ತಪ್ಪಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿ ವಹಿಸಿ ಈ ಹೆದ್ದಾರಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಲು ನೆರವು ನೀಡಬೇಕು ಎಂದು ಹೇಳಿದರು.
‘ಅಧಿಕಾರಿಗಳನ್ನು ಸರಿಯಾಗಿ ನೋಡಿಕೊಂಡರೆ, ನಿಮ್ಮ ಕೆಲಸವೂ ತ್ವರಿತವಾಗಿ ಆಗಲಿದೆ’ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದಾಗ ಸಭೆಯಲ್ಲಿ ನಗೆ ಉಕ್ಕಿತ್ತು.
ಹೆದ್ದಾರಿ ನಿರ್ಮಾಣಕ್ಕೆ ಬೇಕಾಗಿರುವ ಜಲ್ಲಿಕಲ್ಲು ಪೂರೈಕೆ ಕುರಿತು ಚರ್ಚೆಯ ಸಂದರ್ಭದಲ್ಲಿ ಸಂಸದರು ಗುತ್ತಿಗೆದಾರರಿಗೆ ಹೀಗೊಂದು ಸಲಹೆ ನೀಡಿದರು. ಇಷ್ಟು ಹೇಳಿ ಈ ವಿಷಯವನ್ನು ಮತ್ತಷ್ಟು ಬೆಳೆಸಲು ಹೋಗಲಿಲ್ಲ.