

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ವಿವಿಧ ಸಂಘಟನೆಗಳು ಹಾಗೂ ರೈತರು ವಿರೋಧಿಸುತ್ತಿದ್ದಾರೆ. ಆದ್ದರಿಂದ ರಾಜ್ಯಸರ್ಕಾರ ರೈತರ ಭಾವನೆಗೆ ಬೆಲೆ ಕೊಡಬೇಕು. ಅಂತೆಯೇ ಈ ಯೋಜನೆಗೆ ನಮ್ಮ ವಿರೋಧವೂ ಇದೆ ಎಂದು ಮೈಸೂರು-ಕೊಡಗು ಸಂಸದ ಯಧುವೀರ್ ಒಡೆಯರ್ ಹೇಳಿದರು.
ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ ಬೇರೆಡೆ ನಿರ್ಮಾಣ ಮಾಡುವುದಕ್ಕೆ ಯಾರಿಂದಲೂ ವಿರೋಧವಿಲ್ಲ. ಆದ್ದರಿಂದ ಯೋಜನೆಗೆ ಬೇರೆ ಕಡೆ ಜಾಗ ಗುರುತಿಸುವುದು ಉತ್ತಮ. ವಿಶ್ವವಿಖ್ಯಾತ ಪ್ರವಾಸಿ ಕೇಂದ್ರವಾಗಿ ಕೃಷ್ಣರಾಜಸಾಗರ ಈಗಾಗಲೇ ವಿಶ್ವದ ಜನರನ್ನು ತನ್ನತ್ತ ಸೆಳೆಯುತ್ತಿದೆ. ಪ್ರತಿ ತಿಂಗಳು ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣಗೊಂಡು 100 ವರ್ಷ ಸಮೀಪಿಸುತ್ತಿದೆ. ಅಣೆಕಟ್ಟೆ ಭದ್ರತೆ ಸೂಕ್ಷ್ಮ ವಿಚಾರವಾಗಿರುವುದರಿಂದ ಈ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಕೆಆರ್‌ಎಸ್ ಸುತ್ತಮುತ್ತ ಉತ್ತಮವಾದ ಪರಿಸರವಿದೆ. ವ್ಯವಸಾಯಕ್ಕೆ ಯೋಗ್ಯವಾದ ಲವತ್ತಿನಿಂದ ಕೂಡಿದ ಭೂಮಿ ಇದೆ. ಜೀವವೈವಿಧ್ಯ ಸೂಕ್ಷ್ಮ ವಲಯ ಇರುವುದರಿಂದ ಅಲ್ಲಿ ಯೋಜನೆ ಜಾರಿಯಾದರೆ ಪರಿಸರಕ್ಕೆ ದೊಡ್ಡ ಅನಾಹುತವಾಗಲಿದೆ. ಆ ದೃಷ್ಠಿಯಿಂದ ರೈತರು ಮತ್ತು ಸಂಘಟನೆಗಳ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸಿ, ಪ್ರವಾಸೋಧ್ಯಮ ಬೆಳವಣಿಗೆಗೆ ಸಹಕಾರಿಯಾಗಲಿ. ಇನ್ನು ಕಾವೇರಿ ಆರತಿಗೆ 100 ಕೋಟಿ ರೂ ಖರ್ಚು ಮಾಡುತ್ತಿರುವುದು ಅವೈಜ್ಞಾನಿಕ. ಇಷ್ಟೊಂದು ಹಣವನ್ನು ದುಂದು ವೆಚ್ಚ ಮಾಡುವುದು ಸರಿಯಲ್ಲ. ಇದನ್ನು ವಹಿಸಿಕೊಟ್ಟರೆ ನಾವೇ ಉಚಿತವಾಗಿ ಕಾವೇರಿ ಆರತಿ ಮಾಡುವುದಾಗಿ ತಿರುಗೇಟು ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಯುವ ಮುಖಂಡ ಇಂಡುವಾಳು ಸಚ್ಚಿದಾನಂದ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ ಇತರರಿದ್ದರು.