ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಬದಲಾದ ರಾಜಕೀಯ ಲೆಕ್ಕಾಚಾರ

election
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡು ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಸನ್ನದ್ಧವಾಗುತ್ತಿವೆ. ಈ ದೋಸ್ತಿಯಿಂದಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಬದಲಾಗಿದೆ.

ಕಮಲ-ದಳ ಮತಗಳ ಕ್ರೋಡೀಕರಣಕ್ಕೆ ಮೈತ್ರಿ ವೇದಿಕೆಯಾದರೆ, ಕೈ ಪಾಳಯದ ಮತ ಬ್ಯಾಂಕ್‌ನಲ್ಲಿ ಗಲಿಬಿಲಿ ಮೂಡಿಸುವ ಸಾಧ್ಯತೆ ಇದೆ. ಹೀಗಾಗಿ ಮೈತ್ರಿಯಿಂದಾಗುವ ಲಾಭ-ನಷ್ಟದ ಕುರಿತು ರಾಜಕೀಯ ವಲಯದಲ್ಲಿ ಗಹನ ಚರ್ಚೆಗಳು ಆರಂಭವಾಗಿವೆ.


ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಬೆಸೆದುಕೊಂಡಿದ್ದ ಜೆಡಿಎಸ್ ಈ ಬಾರಿ ಬಿಜೆಪಿಯೊಂದಿಗೆ ಸಂಧಾನ ಮಾಡಿಕೊಂಡಿದೆ. ಇದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಂಟಾಗಿರುವ ಅದಲು-ಬದಲು ರಾಜಕೀಯ ಚಿತ್ರಣ.

ನಾಯಕರ ಚಿತ್ತ ಲೋಕಸಭಾ ಚುನಾವಣೆಯತ್ತ


ದಸರಾ ಬಳಿಕ ರಾಜಕೀಯ ನಾಯಕರ ಚಿತ್ತ ಲೋಕಸಭಾ ಚುನಾವಣೆಯತ್ತ ನೆಟ್ಟಿದೆ. ಇನ್ನು 5 ತಿಂಗಳಲ್ಲಿ ನಡೆಯುವ ಸಂಸತ್ ಎಲೆಕ್ಷನ್‌ಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಣಿಯಾಗುತ್ತಿವೆ. ತಯಾರಿ ವಿಷಯದಲ್ಲಿ ಕಾಂಗ್ರೆಸ್ ಒಂದು ಹೆಜ್ಜೆ ಮುಂದಿದೆ. ಈಗಾಗಲೇ ಪಕ್ಷದ ವಿವಿಧ ಘಟಕಗಳ ಸಭೆ, ಕಾರ್ಯಕರ್ತರು, ಮುಖಂಡರ ಸಭೆಯನ್ನು ನಡೆಸುವ ಮೂಲಕ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಮೈತ್ರಿ ಪಕ್ಷಗಳಿಂದ ಅಂತಹ ಪೂರ್ವಭಾವಿ ಚಟುವಟಿಕೆ ಗೋಚರವಾಗುತ್ತಿಲ್ಲ. ತೆರೆಮರೆಯಲ್ಲೇ ಕೆಲ ಪ್ರಕ್ರಿಯೆ ನಡೆಯುತ್ತಿವೆ.


1951ರಿಂದ 17 ಚುನಾವಣೆ ಕಂಡಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವು ಮೊದಲಿನಿಂದಲೂ ಕೈ ಭದ್ರಕೋಟೆ. ಇಲ್ಲಿ ಜೆಡಿಎಸ್ ಒಮ್ಮೆಯೂ ಗೆದ್ದಿಲ್ಲ. 12 ಬಾರಿ ಕಾಂಗ್ರೆಸ್ ಪಾರುಪತ್ಯ ಮೆರೆದಿದೆ. ಮೊದಲ ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಪಕ್ಷ ಒಮ್ಮೆ ಮತ್ತು ಬಿಜೆಪಿ 4 ಬಾರಿ ಗೆದ್ದಿದೆ. ಅದರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿ.ಎಚ್.ವಿಜಯಶಂಕರ್, ಪ್ರತಾಪ ಸಿಂಹ ಅವರೇ ತಲಾ 2 ಸಲ ಜಯ ಗಳಿಸಿದ್ದಾರೆ. ಇದನ್ನು ಆಧರಿಸಿ ಕ್ಷೇತ್ರವನ್ನು ಮತ್ತೆ ಪಡೆದುಕೊಳ್ಳಲು ಬಿಜೆಪಿ ಮುಂದಾಗಿದೆ.

ಆದರೆ ಈ ಲೆಕ್ಕಾಚಾರ ಜೆಡಿಎಸ್‌ನ ಕೈಹಿಡಿಯುವುದಿಲ್ಲ. ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿದೆ. ಈ ಮಾನದಂಡದ ಪ್ರಕಾರ ಕ್ಷೇತ್ರವನ್ನು ಪಡೆದುಕೊಳ್ಳಲು ಹಕ್ಕು ಮಂಡಿಸುತ್ತಿದೆ. ಹೀಗಾಗಿ ದೋಸ್ತಿಗಳ ಪೈಕಿ ಯಾವ ಪಕ್ಷಕ್ಕೆ ಮೈಸೂರು-ಕೊಡಗು ಕ್ಷೇತ್ರ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಕ್ಷೇತ್ರ ಹಂಚಿಕೆ ಕುರಿತು ಇನ್ನೂ ಚರ್ಚೆಯೂ ಆಗಿಲ್ಲ. ಅಂತಿಮವೂ ಆಗಿಲ್ಲ. ಬರೀ ಕಾರ್ಯಕರ್ತರ ಹಂತದಲ್ಲಿ ಗಾಳಿ ಮಾತುಗಳು ಸದ್ದು ಮಾಡುತ್ತಿವೆಯೇ ಹೊರತು, ಉಭಯ ಪಕ್ಷಗಳ ವರಿಷ್ಠರ ನಡುವೆ ಸಮಾಲೋಚನೆ ನಡೆದಿಲ್ಲ. ಹೀಗಾಗಿ ಯಾರು ಮೈತ್ರಿ ಅಭ್ಯರ್ಥಿ ಆಗುತ್ತಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಜಿಲ್ಲಾ ಮಟ್ಟದ ನಾಯಕರ ಒಲವು:


ಒಂದು ವೇಳೆ ಮೈಸೂರು-ಕೊಡಗು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಕೆ.ಆರ್.ನಗರ ಮಾಜಿ ಶಾಸಕ ಸಾ.ರಾ.ಮಹೇಶ್ ಆ ಪಕ್ಷದ ಅಭ್ಯರ್ಥಿ ಆಗುವ ಸಾಧ್ಯತೆ ಇದೆ. ಜೆಡಿಎಸ್-ಬಿಜೆಪಿ ಎರಡೂ ಪಕ್ಷಗಳ ಬಹುತೇಕ ಜಿಲ್ಲಾ ಮಟ್ಟದ ನಾಯಕರ ಒಲವು ಸಾರಾ ಪರ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತೆರೆಮರೆಯಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿವೆ. ಆದರೆ ‘ನಾನು ಆಕಾಂಕ್ಷಿಯಲ್ಲ’ ಎಂದು ಸಾ.ರಾ.ಮಹೇಶ್ ಸ್ಪಷ್ಟಪಡಿಸಿದ್ದಾರೆ. ಇದು ಇನ್ನಷ್ಟು ಕುತೂಹಲ ಮೂಡಿಸಿದೆ.

ಹಾಲಿ ಎಂಪಿ ತಯಾರಿ:


ಸದ್ಯಕ್ಕೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕ್ಷೇತ್ರದ ಹಾಲಿ ಪ್ರತಿನಿಧಿ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಸುತ್ತಾಟ ಬಿರುಸುಗೊಳಿಸುವ ಮೂಲಕ 3ನೇ ಬಾರಿಗೆ ಅಖಾಡಕ್ಕೆ ಇಳಿಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮೈತ್ರಿಯಿಂದ ರಾಜಕೀಯ ಚಿತ್ರಣ ಬದಲಾಗಿದೆ. ಕ್ಷೇತ್ರ ಯಾವ ಪಕ್ಷಕ್ಕೆ ಹಂಚಿಕೆ ಆಗಲಿದೆ ಎಂಬುದರ ಮೇಲಿನ ಮುಂದಿನ ರಾಜಕೀಯ ಕಾರ್ಯಚರಣೆ ಗರಿಗೆದರಲಿದೆ.

ಕೈ ಪಾಳಯದಲ್ಲೂ ಅಸ್ಪಷ್ಟತೆ:


ಕಾಂಗ್ರೆಸ್ ಪಾಳಯದಲ್ಲೂ ಅಸ್ಪಷ್ಟತೆ ಇದೆ. ಯಾರು ಅಭ್ಯರ್ಥಿ ಆಗುತ್ತಾರೆ ಎಂಬುದು ಸದ್ಯಕ್ಕೆ ಕೌತುಕ. ಆಕಾಂಕ್ಷಿಗಳ ಹೆಸರು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಭಾರತ ಐಕ್ಯತಾ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ ನಗರದ ಡಾ.ಸುಶ್ರುತ್, ಮಾಜಿ ಸಂಸದ ಎಚ್.ವಿಶ್ವನಾಥ್ ಪ್ರಮುಖ ಆಕಾಂಕ್ಷಿಗಳು. ಆದರೆ ಪ್ರಬಲ ಆಕಾಂಕ್ಷಿಗಳು ಗೋಚರವಾಗುತ್ತಿಲ್ಲ. ಹೊಸ ಮುಖಗಳ ಹುಡುಕಾಟಕ್ಕೆ ಕಾಂಗ್ರೆಸ್ ಮುಂದಾಗಿದೆ.

ಹೊಂದಾಣಿಕೆ ಸಹಾಯಕವೇ?


ಜೆಡಿಎಸ್-ಬಿಜೆಪಿ ಹೊಂದಾಣಿಕೆ ಈ ಚುನಾವಣೆಯಲ್ಲಿ ಕೈಹಿಡಿಯಲಿದೆಯೇ ಎಂಬ ಪ್ರಶ್ನೆ ಮೂಡಿವೆ. ಕಳೆದ ಚುನಾವಣೆಯನ್ನು ಕಾಂಗ್ರೆಸ್-ಜೆಡಿಎಸ್ ಒಂದಾಗಿ ಎದುರಿಸಿದ್ದವು. ಆದಾಗ್ಯೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿ.ಎಚ್.ವಿಜಯಶಂಕರ್ ಹೀನಾಯವಾಗಿ ಪರಾಭವಗೊಂಡಿದ್ದರು. ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ 2ನೇ ಬಾರಿಗೆ ಪುನರಾಯ್ಕೆಯಾಗಿ ಸಂಸತ್ ಪ್ರವೇಶಿಸಿದ್ದರು. ನಾಯಕರ ಮಟ್ಟದಲ್ಲಿ ಮೈತ್ರಿ ಆಗಿತ್ತೇ ಹೊರತು, ಕೆಳಹಂತದ ಕಾರ್ಯಕರ್ತರು, ಸ್ಥಳೀಯ ಮುಖಂಡರಲ್ಲಿ ಹೊಂದಾಣಿಕೆ ಆಗಿರಲಿಲ್ಲ. ಜೆಡಿಎಸ್‌ನ ಮತಗಳೆಲ್ಲ ಕಮಲ ಕಡೆಗೆ ವಲಸೆ ಹೋಗಿದ್ದವು. ಇದು ಕೈ-ದಳ ಮೈತ್ರಿಯಿಂದ ಉಂಟಾದ ವ್ಯತರಿಕ್ತ ಬೆಳವಣಿಗೆ.

ಅಂದು… ಇಂದು…!


ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳು. ಸದಾ ಎಣ್ಣೆ-ಸೀಗೆಕಾಯಿ ಸಂಬಂಧ. ಇದು ಗೊತ್ತಿದ್ದರೂ ಕಳೆದ ಬಾರಿ ಮೈತ್ರಿ ಮಾಡಿಕೊಂಡು ಎರಡೂ ಪಕ್ಷಗಳು ಕೈಸುಟ್ಟುಕೊಂಡಿವೆ. ಆದರೆ ಬಿಜೆಪಿ-ಜೆಡಿಎಸ್ ನಡುವಿನ ಸಂಬಂಧ ಇದಕ್ಕೆ ವಿಭಿನ್ನ. ಉಭಯ ಪಕ್ಷಗಳ ನಾಯಕರು ಬಹಿರಂಗವಾಗಿ ಹರಿಹಾಯ್ದರೂ ಒಳಗೆ ಸುಮಧುರ ಸಂಬಂಧವನ್ನೇ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಕಳೆದ ಅನೇಕ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ನಿದರ್ಶನ ಸಿಗುತ್ತವೆ.

ಇಷ್ಟು ದಿನ ಒಳಗೊಳಗೆ ಬೆಂಬಲಕ್ಕೆ ನಿಲ್ಲುತ್ತಿದ್ದ ದೋಸ್ತಿಗಳು ಇದೀಗ ಬಹಿರಂಗವಾಗಿ ಜೋಡೆತ್ತುಗಳಾಗಿವೆ. ಹೀಗಾಗಿ ಸಮನ್ವಯತೆ, ಹೊಂದಾಣಿಕೆ ಮಾಡಿಕೊಂಡು ಹೋದರೆ ಅಂತಹ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ರಾಜಕೀಯ ಮುಖಂಡರೊಬ್ಬರು ವಿಶ್ಲೇಷಿಸಿದ್ದಾರೆ.

ಜಾತಿ ಮತಗಳ ಬೆಸುಗೆ

ಕಳೆದ ಎರಡು ಚುನಾವಣೆಯಲ್ಲೂ ಜೆಡಿಎಸ್‌ನ ತೆರೆಮರೆ ಬೆಂಬಲದೊಂದಿಗೆ ಬಿಜೆಪಿ ಸುಲಭವಾಗಿ ಜಯ ಗಳಿಸಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ಸಲ ಇದು ಬಹಿರಂಗವಾಗಿ ನಡೆಯಲಿದೆ ಅಷ್ಟೆ. ಬಿಜೆಪಿಯ ಸಾಂಪ್ರದಾಯಿಕ ಮತಗಳೊಂದಿಗೆ ಜೆಡಿಎಸ್‌ನ ಒಕ್ಕಲಿಗರ ಮತಗಳು ಒಂದೆಡೆ ಸಮಾಗಮ ಆಗಲು ವೇದಿಕೆ ಇನ್ನಷ್ಟು ಬಲಗೊಂಡಿದೆ.

ಕಾಂಗ್ರೆಸ್‌ನ ಅಹಿಂದ(ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ) ಮತ ಬ್ಯಾಂಕ್ ಮೇಲೆ ಪರಿಣಾಮ ಬೀರಬಹುದು. ಈ ಮತಬುಟ್ಟಿಗೆ ಬಿಜೆಪಿ ಕೈ ಹಾಕಬಹುದು ಎಂಬ ಭಯ ಕಾಂಗ್ರೆಸ್ ನಾಯಕರಲ್ಲಿ ಕಾಡುತ್ತಿದೆ. ಹೀಗಾಗಿ ಜಾತಿ ಆಧಾರದ ಮೇಲೆ ಕೈ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚು. ಈ ಮೂಲಕ ಮತಬ್ಯಾಂಕ್ ಉಳಿಸಿಕೊಂಡು ಹೋಗಲು ಕಾರ್ಯತಂತ್ರವನ್ನು ಕೈ ಪಡೆ ರೂಪಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net