

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಬಿರುಸುಗೊಂಡಿದೆ. ಟಿಕೆಟ್‌ಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಆಕಾಂಕ್ಷಿಗಳ ನಡುವೆ ಪೈಪೋಟಿ ತೀವ್ರಗೊಂಡಿದ್ದು, ‘ಅದೃಷ್ಟ ’ ಯಾರಿಗೆ ಒಲಿಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಪ್ರಮುಖ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಅದಕ್ಕಾಗಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದರೊಂದಿಗೆ, ಮೂರು ಪಕ್ಷಗಳಲ್ಲೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.
ಸದ್ಯ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಆದರೆ, ಇನ್ನೂ ಸೀಟು ಹಂಚಿಕೆಯಾಗಿಲ್ಲ. ಹೀಗಾಗಿ, ಕ್ಷೇತ್ರವನ್ನು ಧಕ್ಕಿಸಿಕೊಳ್ಳಲು ಉಭಯ ಪಕ್ಷಗಳಲ್ಲಿ ಪ್ರಯತ್ನಗಳು ನಡೆದಿದ್ದು, ಯಾರು ಅಭ್ಯರ್ಥಿಯಾಗುತ್ತಾರೆ ಎಂಬ ಕೌತುಕ ಮೂಡಿದೆ.
ವಿಧಾನಸಭಾ ಚುನಾವಣೆ ಗೆಲುವಿನ ಉತ್ಸಾಹದಲ್ಲೇ ಕಾಂಗ್ರೆಸ್ ಲೋಕಸಭಾ ಚುನಾವಣೆಗೂ ತಯಾರಿ ನಡೆಸಿದೆ. ಹಲವು ಸುತ್ತಿನ ಮಾತುಕತೆ, ವೀಕ್ಷಕರ ನೇಮಕ, ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಶುರು ಮಾಡಿದೆ.
ಕಾಂಗ್ರೆಸ್ ಟಿಕೆಟ್ ಮೇಲೆ ಹಲವರ ಕಣ್ಣು ನೆಟ್ಟಿದೆ. ಈ ಕ್ಷೇತ್ರದಿಂದ ಸ್ಪರ್ಧಿಸಲು 14 ಆಕಾಂಕ್ಷಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ವಾಸು, ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ್, ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್, ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ವೈದ್ಯ ಶುಶ್ರುತ್ ಗೌಡ, ಎಂಎಲ್‌ಸಿ ವಿಶ್ವನಾಥ್ ಅವರ ಪುತ್ರ ಅಮಿತ್, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ಉಪಾಧ್ಯಕ್ಷ ಸೂರಜ್ ಹೆಗಡೆ, ಜೆ.ಜೆ.ಆನಂದ್, ವರುಣ ಮಹೇಶ್ ಅರ್ಜಿ ಸಲ್ಲಿಸಿರುವ ಪ್ರಮುಖ ಆಕಾಂಕ್ಷಿಗಳು.
ಇವರಲ್ಲಿ ಪ್ರಬಲ ಅಭ್ಯರ್ಥಿ ಕಾಣುತ್ತಿಲ್ಲ. ಹೀಗಾಗಿ, ಸೂಕ್ತ ಅಭ್ಯರ್ಥಿಗಾಗಿ ಶೋಧ ನಡೆದಿದೆ. ಈ ಕ್ಷೇತ್ರದ ಮಾಜಿ ಸಂಸದ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಹ ಟಿಕೆಟ್‌ಗಾಗಿ ಒತ್ತಡ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಪುತ್ರ, ಮಾಜಿ ಶಾಸಕ ಡಾ.ಯತೀಂದ್ರ ಹೆಸರು ಸಹ ಕೇಳಿಬರುತ್ತಿದೆ. ಆದರೆ, ಟಿಕೆಟ್‌ಗಾಗಿ ಈ ಇಬ್ಬರು ಅರ್ಜಿ ಸಲ್ಲಿಸಿಲ್ಲ.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹಾಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿಸಲು ಸಮಾಲೋಚನೆಗಳು ನಡೆಯುತ್ತಿವೆ. ಬೆಂಗಳೂರಿನ ಯಶವಂತಪುರ ಕ್ಷೇತ್ರದ ಶಾಸಕರಾಗಿರುವ ಇವರು, ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಇವರು ಬೆಂಗಳೂರಿನಿಂದ ಬಂದು ಮೈಸೂರಿನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ಗಟ್ಟಿ ಮನಸ್ಸು ಮಾಡುತ್ತಾರೆಯೇ ಎಂಬ ಪ್ರಶ್ನೆ ಆ ಪಕ್ಷದಲ್ಲೇ ಮೂಡಿದೆ.
ಜಿಲ್ಲೆಯ ಬಿಜೆಪಿ ನಾಯಕರೊಂದಿಗೆ ಸೋಮಶೇಖರ್ ಆತ್ಮೀಯ ಒಡನಾಟ ಹೊಂದಿದ್ದಾರೆ. ಅವರಿಗೆ ಕ್ಷೇತ್ರವೂ ಹೊಸದಲ್ಲ. ಮೈತ್ರಿ ಅಭ್ಯರ್ಥಿ ವಿರುದ್ಧ ಸೋಮಶೇಖರ್ ಪ್ರಬಲ ಅಭ್ಯರ್ಥಿಯಾಗುತ್ತಾರೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದಾಗಿದೆ. ಆದರೆ, ಸೋಮಶೇಖರ್ ಈ ಕುರಿತು ಮನಸ್ಸು ಮಾಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಕ್ಷೇತ್ರದಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಸತತ 2 ಬಾರಿ ಜಯ ಸಾಧಿಸಿದ್ದು, ಮತ್ತೊಂದು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 3ನೇ ಬಾರಿಯೂ ತಮಗೆ ಟಿಕೆಟ್ ದೊರೆಯಲಿದೆ ಎಂಬ ಅಚಲ ವಿಶ್ವಾಸದಲ್ಲಿದ್ದಾರೆ. ಆದರೆ, ಇವರಿಗೆ ಟಿಕೆಟ್ ತಪ್ಪಿಸಲು ಆ ಪಕ್ಷದ ಮುಖಂಡರು ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಈ ಕ್ಷೇತ್ರವನ್ನೇ ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂಬುದು ಆ ಪಕ್ಷದ ಮುಖಂಡರ ಒಳಮನಸ್ಸಿನ ಆಸೆಯಾಗಿದೆ. ಈ ನಡುವೆ, ಕ್ಷೇತ್ರದ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಆರ್.ರಘು ಸಹ ಬಿಜೆಪಿ ಟಿಕೆಟ್ ಮೇಲೆ ಕಣ್ಣು ಹಾಕಿದ್ದಾರೆ.
ಏತನ್ಮಧ್ಯೆ, ಮೈಸೂರು-ಕೊಡಗು ಕ್ಷೇತ್ರವನ್ನು ತನಗೆ ಬಿಟ್ಟುಕೊಡುವಂತೆ ಜೆಡಿಎಸ್ ಪಟ್ಟು ಹಿಡಿದೆ. ಇದು ಸಫಲವಾದರೆ ಮಾಜಿ ಶಾಸಕ ಸಾ.ರಾ.ಮಹೇಶ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಆದರೆ, ಅವರು ಪ್ರತಿನಿಧಿಸುತ್ತಿದ್ದ ಹಾಗೂ ರಾಜಕೀಯ ಪ್ರಾಬಲ್ಯ ಇರುವ ಕೆ.ಆರ್.ನಗರ ಮೈಸೂರು-ಕೊಡಗು ಕ್ಷೇತ್ರದ ವ್ಯಾಪ್ತಿಯಲ್ಲಿಲ್ಲ. ಬದಲಿಗೆ, ಮಂಡ್ಯ ಕ್ಷೇತ್ರಕ್ಕೆ ಸೇರಿದೆ. ಹೀಗಾಗಿ, ಇದು ಅವರ ದೊಡ್ಡ ಮೈನಸ್ ಪಾಯಿಂಟ್ ಆಗಿದೆ.
1951ರಿಂದ 17 ಚುನಾವಣೆ ಕಂಡಿರುವ ಈ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆ. ಇಲ್ಲಿ ಜೆಡಿಎಸ್ ಒಮ್ಮೆಯೂ ಗೆದ್ದಿಲ್ಲ. 12 ಬಾರಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಮೊದಲ ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಪಕ್ಷ ಒಮ್ಮೆ ಮತ್ತು ಬಿಜೆಪಿ 4 ಬಾರಿ ಗೆದ್ದಿದೆ. ಅದರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿ.ಎಚ್. ವಿಜಯಶಂಕರ್, ಪ್ರತಾಪ್ ಸಿಂಹ ಅವರೇ ತಲಾ 2 ಬಾರಿ ಗೆಲುವು ಕಂಡಿದ್ದಾರೆ. ಇದನ್ನು ಆಧರಿಸಿ ಕ್ಷೇತ್ರವನ್ನು ಮತ್ತೆ ಪಡೆದುಕೊಳ್ಳಲು ಬಿಜೆಪಿ ಮುಂದಾಗಿದೆ. ಆದರೆ, ಮೈಸೂರು ಭಾಗದಲ್ಲಿ ಜೆಡಿಎಸ್ ಬೇರುಗಳು ಬಲವಾಗಿವೆ. ಇದನ್ನು ಆಧರಿಸಿ ಈ ಕ್ಷೇತ್ರವನ್ನು ಪಡೆದುಕೊಳ್ಳಲು ಪಕ್ಷ ಹಕ್ಕು ಮಂಡಿಸುತ್ತಿದೆ. ಹೀಗಾಗಿ ‘ದೋಸ್ತಿ’ಗಳ ಪೈಕಿ ಯಾವ ಪಕ್ಷಕ್ಕೆ ಮೈಸೂರು-ಕೊಡಗು ಕ್ಷೇತ್ರ ಧಕ್ಕಲಿದೆ ಎಂಬ ಪ್ರಶ್ನೆ ಮೂಡಿದೆ.
ಕಳೆದ 2 ಚುನಾವಣೆಗಳಲ್ಲೂ ಜೆಡಿಎಸ್‌ನ ತೆರೆಮರೆ ಬೆಂಬಲದೊಂದಿಗೆ ಬಿಜೆಪಿ ಸುಲಭವಾಗಿ ಜಯ ಗಳಿಸಿದೆ. ಈ ಸಲ ಉಭಯ ಪಕ್ಷಗಳ ಮೈತ್ರಿಯಿಂದ ಸಹಜವಾಗಿಯೇ ಬಲ ವೃದ್ಧಿಯಾಗಲಿದ್ದು, ಬಿಜೆಪಿಯ ಸಾಂಪ್ರದಾಯಿಕ ಮತಗಳೊಂದಿಗೆ ಜೆಡಿಎಸ್‌ನ ಒಕ್ಕಲಿಗರ ಮತಗಳ ಕ್ರೋಡೀಕರಣಕ್ಕೆ ಅನುಕೂಲವಾಗಲಿದೆ.
ಕಾಂಗ್ರೆಸ್‌ನ ಅಹಿಂದ(ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ) ಮತ ಬ್ಯಾಂಕ್ ಮೇಲೆ ಪರಿಣಾಮ ಬೀರಬಹುದು. ಈ ಮತಬುಟ್ಟಿಗೆ ಬಿಜೆಪಿ ಕೈ ಹಾಕಬಹುದು ಎಂಬ ಆತಂಕ ‘ಕೈ’ ನಾಯಕರಲ್ಲಿ ಕಾಡುತ್ತಿದೆ. ಹೀಗಾಗಿ ಜಾತಿ ಆಧಾರದ ಮೇಲೆ ‘ಕೈ’ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚು. ಈ ಮೂಲಕ ಮತಬ್ಯಾಂಕ್ ಉಳಿಸಿಕೊಂಡು ಹೋಗಲು ಕಾರ್ಯತಂತ್ರವನ್ನು ಕಾಂಗ್ರೆಸ್ ರೂಪಿಸುತ್ತಿದೆ.