ಮೈಸೂರು: ಜಿಎಸ್‌ಟಿ ವಿರುದ್ಧ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

Karnataka sena pade protest against GST
Published on

ಮೈಸೂರು: ಸಣ್ಣ ವ್ಯಾಪಾರಿಗಳ ಮೇಲೆ ಜಿಎಸ್‌ಟಿ ವಿಧಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಸೇನಾ ಪಡೆಯಿಂದ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ರಾಜ್ಯದ ಬೊಕ್ಕಸ ತುಂಬಿಸಿಕೊಳ್ಳಲು ಜಿಎಸ್‌ಟಿ ವ್ಯಾಪ್ತಿಗೆ ಒಳಪಡದ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಪಾವತಿಗೆ ನೋಟಿಸ್ ಜಾರಿ ಮಾಡಿರುವುದು ಖಂಡನೀಯ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಣ್ಣ ವ್ಯಾಪಾರಿಗಳಿಗೆ ರಾತ್ರೋರಾತ್ರಿ ಲಕ್ಷಾಂತರ ರೂ. ಜಿಎಸ್‌ಟಿ ಪಾವತಿಸುವಂತೆ ರಾಜ್ಯ ಸರ್ಕಾರ ನೋಟಿಸ್ ನೀಡಿರುವುದು ಅತ್ಯಂತ ಖಂಡನೀಯ. ಜಿಎಸ್‌ಟಿ ಹೆಸರಿನಲ್ಲಿ ಹೆಚ್ಚು ತೆರಿಗೆ ವಿಧಿಸುವ ಮೂಲಕ ಅವರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಹಾಲು, ಹೂ, ಹಣ್ಣು, ತರಕಾರಿ ವ್ಯಾಪಾರಿಗಳು ಇಂದು ಬಂಡವಾಳ ಹಾಕಿದರೆ ನಾಳೆ 500-1000 ರೂ ಲಾಭ ಬರುತ್ತದೆ. ಮೊದಲು ಶ್ರೀಮತಂರಿಗೆ ಮಾತ್ರ ತೆರಿಗೆ ಇತ್ತು. ಆದರೆ, ಇದೀಗ ದಿನಗೂಲಿಗಳು ಹಾಗೂ ಸಣ್ಣ ವ್ಯಾಪಾರಿಗಳ ಮೇಲೂ ತೆರಿಗೆ ವಿಧಿಸುತ್ತಿರುವುದು ಖಂಡನೀಯ ಎಂದರು.

ಯುಪಿಐ ಆಧಾರಿತ ವಹಿವಾಟುಗಳ ಮೇಲೆ ಜಿಎಸ್‌ಟಿ ವಿಧಿಸುವ ವಿಚಾರ ರಾಜ್ಯದಲ್ಲಿ ಗೊಂದಲದ ಗೂಡಾಗಿದೆ. ಈ ವಿಚಾರವಾಗಿ ವಿರೋಧ ವ್ಯಕ್ತಪಡಿಸಿರುವ ಸಣ್ಣ ವ್ಯಾಪಾರಿಗಳು ಜುಲೈ 23ರಿಂದ 25ರ ವರೆಗೆ ವ್ಯಾಪಾರ ವಹಿವಾಟು ಬಂದ್‌ಗೆ ಕರೆ ನೀಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇದರಿಂದ ಸಣ್ಣ ವ್ಯಾಪಾರಿಗಳು ಯುಪಿಐ ವಹಿವಾಟಿನ ಸ್ಕ್ಯಾನರ್ ತೆಗೆದು ಹರಿದು ಹಾಕಿ, ನಗದು ಪಾವತಿಗೆ ಆದ್ಯತೆ ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಎಲ್ಲ ವಹಿವಾಟು ನಗದಿನಲ್ಲೇ ನಡೆಸಿದರೆ ನಾವು ಮತ್ತೆ 5 ವರ್ಷ ಹಿಂದೆ ಹೋಗುತ್ತೇವೆ. ಇದರಿಂದ ಕಪ್ಪು ಹಣ ಹೆಚ್ಚಾಗುವ ಸಾಧ್ಯತೆ ಇದೆ ಮತ್ತು ಚಿಲ್ಲರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆ ಪದಾಧಿಕಾರಿಗಳಾದ ಪ್ರಭುಶಂಕರ, ಗೋಲ್ಡನ್ ಸುರೇಶ್, ಸಿಂಧುವಳ್ಳಿ ಶಿವಕುಮಾರ್, ಸುಬ್ಬೇಗೌಡ, ಬಸವರಾಜು, ಹೊನ್ನೇಗೌಡ, ಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ, ನೇಹಾ, ಡಾ. ಶಾಂತರಾಜೇ ಅರಸ್, ಆನಂದ್ ಗೌಡ, ಭಾಗ್ಯಮ್ಮ ಹನುಮಂತಯ್ಯ, ತಾಯೂರು ಗಣೇಶ್, ಪ್ರದೀಪ್, ದಪ್ಮಾ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net