

ಮೈಸೂರು: ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದ ವತಿಯಿಂದ ನಗರದ ಆರಾಧ್ಯ ಮಹಾಸಭಾ ಸಭಾಂಗಣದಲ್ಲಿ ಗುರುವಾರ ಹಿರಿಯ ಪತ್ರಕರ್ತ ದಿ. ರಾಜಶೇಖರ ಕೋಟಿ, ಮಾಜಿ ಸಚಿವ ದಿ. ಎಚ್.ಎಸ್. ಮಹದೇವ ಪ್ರಸಾದ್ ಸ್ಮರಣಾರ್ಥ ವಿವಿಧ ಕ್ಷೇತ್ರ ಸಾಧಕರಿಗೆ ‘ಕನ್ನಡ ಸೇವಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ.ಪಿ. ಶಿವರಾಜು (ಆಡಳಿತ ಕ್ಷೇತ್ರ), ಅಂಶಿ ಪ್ರಸನ್ನ ಕುಮಾರ್ (ಪತ್ರಿಕೋದ್ಯಮ), ಪ್ರೊ.ಸಿ.ನಾಗಣ್ಣ, ಮಡ್ಡೀಕೆರೆ ಗೋಪಾಲ್ (ಸಾಹಿತ್ಯ), ಅಪ್ಪಾಜಿಗೌಡ (ನ್ಯಾಯಾಂಗ), ಕೆ.ಬಿ. ಲಿಂಗರಾಜು (ಉದ್ಯಮ), ಡಾ.ಕೆ. ರಘುರಾಂ ವಾಜಪೇಯಿ (ಸಮಾಜಸೇವೆ), ಲಿಂಗರಾಜು, ಎಚ್.ಡಿ. ಪುರುಷೋತ್ತಮ್, ಕೆ. ವೇಣುಗೋಪಾಲ್ (ಕನ್ನಡ ಸೇವೆ), ಎಚ್.ಎಸ್. ಜಗದೀಶ್ (ಕಾರ್ಮಿಕ ಚಳವಳಿ), ಡಾ.ಎಚ್.ಪಿ. ಶೋಭಾ (ವೈದ್ಯಕೀಯ), ಜೆ. ಗೋವಿಂದರಾಜು (ಆಡಳಿತ), ಎಸ್. ನಟರಾಜು (ಶಿಕ್ಷಣ), ಡಾ.ಕೆ.ವಿ.ಕೆ. ಸುರೇಂದ್ರನ್ (ವೈದ್ಯಕೀಯ), ತೇಜೇಶ್ ಲೋಕೇಶ್ ಗೌಡ (ಕನ್ನಡ ಸೇವೆ) ಅವರಿಗೆ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಕನ್ನಡ ನಾಡಿಗೆ ಹೊರಗಿನಿಂದ ಬಂದವರು ಕನ್ನಡ ಮಾತನಾಡಲು ಆಸಕ್ತಿ ತೋರುತ್ತಿಲ್ಲ. ರಾಜ್ಯದಲ್ಲಿ ಕನ್ನಡಪರ ವಾತಾವರಣ ನಿರ್ಮಾಣ ಮಾಡಲು ಎಲ್ಲರು ಸಹಕರಿಸಬೇಕು ಎಂದು ಕರೆ ನೀಡಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಹುಟ್ಟಿದ್ದೇ ಕನ್ನಡ ಪರಂಪರೆ. ಈ ಕಾರಣಕ್ಕೆ ರಾಷ್ಟ್ರಕವಿ ಕುವೆಂಪು ಅವರು ‘ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ನಾಡಗೀತೆ ರಚಿಸಿದರು. ಭಾರತಾಂಬೆಯ ಗರ್ಭದಲ್ಲಿ ಕನ್ನಡಾಂಬೆ ಜನಿಸಿದೆ. ಹಾಗಾಗಿ ಪ್ರತಿಯೊಬ್ಬರು ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಸಾಹಿತಿ ಡಾ.ಸಿ.ಪಿ. ಕೃಷ್ಣ ಕುಮಾರ್, ವೈದ್ಯರಾದ ಡಾ.ಎಸ್.ಪಿ. ಯೋಗಣ್ಣ, ಸುಶ್ರುತ್ ಗೌಡ, ಸಂಘದ ಅಧ್ಯಕ್ಷ ಬಿ.ಎಸ್. ಶಿವಶಂಕರ್ ಹಾಗೂ ಇತರರು ಇದ್ದರು.