

ಮೈಸೂರು: ನಾಡಹಬ್ಬ ದಸರಾ ಉತ್ಸವದ ಕೇಂದ್ರಬಿಂದು ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಮಾವುತರು ಹಾಗೂ ಕಾವಾಡಿಗಳಿಗೆ ಗೌರವ ಧನ ನೀಡದೆ ಇರುವುದನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.
ಜಂಬೂಸವಾರಿ ಮೆರವಣಿಗೆ ಯಶಸ್ವಿಗೆ ಮಾವುತರು ಹಾಗೂ ಕಾವಾಡಿಗರ ಪಾತ್ರ ಪ್ರಮುಖವಾದದ್ದು. ಪ್ರತಿ ಬಾರಿ ಅವರಿಗೆ ಮೈಸೂರು ಅರಮನೆ ಮಂಡಳಿಯಿಂದ ಗೌರವ ಧನ ನೀಡಲಾಗುತಿತ್ತು. ಆದರೆ, ಈ ಬಾರಿ ಗೌರವ ಧನ ನೀಡದೆ ಅವಮಾನ ಮಾಡಿದ್ದಾರೆ. ಕೋಟ್ಯಂತರ ರೂ. ಖರ್ಚು ಮಾಡಿ ದಸರಾ ನಡೆಸುವ ಇವರಿಗೆ ಗೌರವಧನ ನೀಡಲು ಹಣ ಇರಲಿಲ್ಲವೇ ಎಂದು ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಪ್ರಶ್ನಿಸಿದರು.
ದಸರಾದಲ್ಲಿ ಅವ್ಯವಹಾರ, ಹಗರಣಗಳು, ಹಗಲು ದರೋಡೆ, ರಾಜಕಾರಣಿಗಳ ಸಂಬಂಧಿಕರ ವೈಭವೀಕರಣವಾಗಿದೆ. ದಸರಾ ವೀಕ್ಷಣೆಗೆ ಬಂದ ಸಾರ್ವಜನಿಕರು ಸರ್ಕಾರಕ್ಕೆ ಶಾಪ ಹಾಕಿ ಹೊರ ಹೋಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಗೋಲ್ಡ್ಕಾರ್ಡ್ ಪಾಸ್‌ಗಳಲ್ಲಿ ಗೋಲ್‌ಮಾಲ್ ನಡೆದಿದೆ. 6500 ರೂ., ಕೊಟ್ಟು ಗೋಲ್ಡ್ ಕಾರ್ಡ್ ಖರೀದಿ ಮಾಡಿದವರನ್ನೂ ಅರಮನೆ ಒಳಗೆ ಬಿಟ್ಟಿಲ್ಲ. ಜನರು ಚಿಮಾರಿ ಹಾಕಿದ್ದರೂ ಸಹ ಸರ್ಕಾರ ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ಯಾವುದೇ ರೀತಿಯ ಉತ್ತರ ನೀಡದೆ ಮೌನಕ್ಕೆ ಶರಣಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಸರಾ ಮಹೋತ್ಸವದಲ್ಲಿ ಸಂಚಾರ ವ್ಯವಸ್ಥೆ ಅವ್ಯವಸ್ಥೆಯಾಗಿತ್ತು. ಮೈಸೂರಿನ ಎಲ್ಲ ರಸ್ತೆಗಳು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿವೆ. ರಾಜಕಾರಣಿಗಳ ಸುಗಮ ಸಂಚಾರಕ್ಕೆ ಏಕಮುಖ ಸಂಚಾರ ಮಾಡಿದ್ದರಿಂದ ವಾಹನ ಸವಾರರು ಪರದಾಡಿದರು.ದಸರಾ ವೇಳೆಯಲ್ಲಿ ಎಲ್ಲ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಪದಾಧಿಕಾರಿಗಳಾದ ನಾಲಾಬೀದಿ ರವಿ, ಗುರುಬಸಪ್ಪ, ಗೋಪಿ, ಪ್ಯಾಲೇಸ್ ಬಾಬು, ಸಿದ್ದಪ್ಪ, ಹರೀಶ್, ಗೋವಿಂದರಾಜು, ಸ್ವಾಮಿ, ಚಿನ್ನಪ್ಪ, ಶಿವುಗೌಡ, ಮಾದಪ್ಪ, ಸ್ವಾಮಿ ಗೈಡ್, ಸುನಿಲ್, ಚಾಮರಾಜ ಮಂಟಗಳ್ಳಿ, ಮಹದೇವಸ್ವಾಮಿ, ಮಾದಪ್ಪ, ರಮೇಶ್, ಚೆಲುವರಾಯಸ್ವಾಮಿ ಹಾಗೂ ಇತರರು ಪಾಲ್ಗೊಂಡಿದ್ದರು.