ಬಾಂಗ್ಲಾ ಹಿಂದುಗಳ ರಕ್ಷಣೆಗೆ ಆಗ್ರಹಿಸಿ ಮೈಸೂರು ಕನ್ನಡ ವೇದಿಕೆಯ ಪ್ರತಿಭಟನೆ

mysore
Published on

ಮೈಸೂರು: ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ತಡೆಯಬೇಕು ಎಂದು ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.


ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಾಂಗ್ಲಾದಿಂದ ಆತ್ಮರಕ್ಷಣೆಗಾಗಿ ಓಡಿ ಬಂದಿರುವ ಅಲ್ಲಿಯ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ಸೂಕ್ತ ಭದ್ರತೆ ಕಲ್ಪಿಸಲಾಗಿದೆ. ಆದರೆ, ಅಲ್ಲಿನ ಹಿಂದುಗಳ ಅಭದ್ರತೆಯ ನೆರಳಲ್ಲಿ ಬದುಕುತ್ತಿರುವುದು ದುರ್ದೈವದ ಸಂಗತಿ ಎಂದು ಕಿಡಿಕಾರಿದರು.


ಬಾಂಗ್ಲಾ ದೇಶದ ಜನಸಂಖ್ಯೆಯಲ್ಲಿ ಕೇವಲ ಶೇ.8ರಷ್ಟು ಹಿಂದುಗಳಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಈ ಸಂಖ್ಯೆ ಇನ್ನಷ್ಟು ಇಳಿಕೆಯಾಗಲಿದೆ. ಆದ ಕಾರಣ ಭಾರತ ಸರ್ಕಾರವು ಎಚ್ಚೆತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರ ಬಗ್ಗೆ ಗಂಭೀರ ಪ್ರಸ್ತಾಪ ಮಾಡಬೇಕು. ಬಾಂಗ್ಲಾ ದೇಶದಲ್ಲಿ ಶಾಂತಿ ನೆಲೆಸಿ ಅಲ್ಲಿನ ಹಿಂದುಗಳು ನಿರ್ಭಯವಾಗಿ ಬದುಕುವಂತಹ ವಾತಾವರಣವನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಜತೆಗೆ ಬಾಂಗ್ಲಾ ದೇಶದ ಆಂತರಿಕ ಪರಿಸ್ಥಿತಿಯ ಬಗ್ಗೆ ಗಂಭೀರ ಚಿಂತನೆ ಮಾಡಬೇಕು ಎಂದು ಒತ್ತಾಯಿಸಿದರು.


ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಾ ಬೀದಿರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ. ಮಹದೇವಸ್ವಾಮಿ, ಪ್ಯಾಲೇಸ್ ಬಾಬು, ಗೋಪಿ, ಸುನೀಲ್, ಎಲ್‌ಐಸಿ ಸಿದ್ದಪ್ಪ, ಗೋವಿಂದರಾಜು, ಬೀಡಾ ಬಾಬು, ಸ್ವಾಮಿ ಗೈಡ್, ಮಾದಪ್ಪ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net