ಹೋಟೆಲ್ ಉದ್ಯಮದಿಂದಾಗಿ ಈಗ ಮೆಸೂರು ಆತಿಥ್ಯ ನಗರಿ

16
Published on

ಮೈಸೂರು: ಹೋಟೆಲ್ ಉದ್ಯಮದಿಂದಾಗಿ ಈಗ ಮೆಸೂರು ಆತಿಥ್ಯ ನಗರಿ ಎಂಬ ಹೆಸರು ಗಳಿಸಿದೆ ಎಂದು ವಿಜಯನಗರ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಡಾ. ಭಾಷ್ಯಂ ಸ್ವಾಮೀಜಿ ಶ್ಲಾಘಿಸಿದರು.

ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸ್ಮರಣ ಸಂಚಿಕೆ ಲೋಕಾರ್ಪಣೆ ಹಾಗೂ ಅಭಿಂದನಾ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿ, ಮೆಸೂರಿಗೆ ಅರಮನೆಗಳ ನಗರಿ, ಸಾಂಸ್ಕೃತಿಕ ನಗರಿ, ಯೋಗ ನಗರಿಯ ಜೊತೆಗೆ ಈಗ ಆತಿಥ್ಯ ನಗರಿ ಎಂಬ ಹೆಸರು ಕೂಡ ಸೇರಿಕೊಂಡಿದೆ ಎಂದರು.

ಮೆಸೂರು ರಾಜಮಹಾರಾಜರ ಕಾಲದಿಂದಲೂ ಪ್ರಸಿದ್ಧ ನಗರಿ. ರಾಜರ ಅರಮನೆಗೆ ಇಂದ್ರಭವನ ಮತ್ತಿತರ ಹೋಟೆಲ್‌ಗಳಿಂದ ಊಟ- ಉಪಾಹಾರ ಕಳುಹಿಸಲಾಗುತ್ತಿತ್ತು. ಈಗಲೂ ಮೆಸೂರಿನ ಹೋಟೆಲ್ ಉದ್ಯಮಿಗಳು ಅತಿಥಿ- ಅಭ್ಯಾಗತರನ್ನು ಸತ್ಕರಿಸುವ ಕೆಲಸ ಮಾಡುತ್ತಿವೆ ಎಂದರು.

ಇದಲ್ಲದೇ ಬಡ ವಿದ್ಯಾರ್ಥಿಗಳಿಗೆ ಊಟ ಹಾಕುವ ಮೂಲಕ ವ್ಯಾಸಂಗಕ್ಕೆ ನೆರವಾಗುವ ಸತ್ಕಾರ್ಯವನ್ನು ಕೂಡ ಮಾಡುತ್ತಿವೆ ಎಂದು ಅವರು ಹೇಳಿದರು.

ಬ್ರಹ್ಮ, ವಿಷ್ಣು, ಮಹೇಶ್ವರ ಎಂಬಂತೆ ಕಾಮತ್, ಪೆ, ಶ್ಯಾನಭೋಗ್ ಹೋಟೆಲ್‌ಗಳು ಕರ್ನಾಟಕ ಮಾತ್ರವಲ್ಲದೇ ದೇಶದ ಮೂಲೆ ಮೂಲೆಗಳಲ್ಲೂ ಇವೆ. ವಿದೇಶಗಳಲ್ಲೂ ಕೂಡ ಇವೆ. ಆ ಮೂಲಕ ಕರ್ನಾಟಕದ ಹೋಟೆಲ್ ಉದ್ಯಮದ ಕೀರ್ತಿಯನ್ನು ಎಲ್ಲೆಡೆ ಪಸರಿಸುತ್ತಿವೆ ಎಂದು ಅವರು ಹೇಳಿದರು.

ಸಂಘದ ರಜತ ಮಹೋತ್ಸವ ಸ್ಮರಣ ಸಂಚಿಕೆ- ಸಹಕಾರ ಮಿತ್ರವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆ ಮಾಡಿದರು. ಮೆಸೂರು ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಾಹಕ ದಿವಾಕರ ಜಿ. ಹೆಗಡೆ ಆಶಯ ಭಾಷಣ ಮಾಡಿದರು. ಸಂಘದ ಅಧ್ಯಕ್ಷ ನಾರಾಯಣ ವಿ. ಹೆಗಡೆ ಪ್ರಾಸ್ತಾವಿಕ ಭಾಷಣ ಮಾಡಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಎಂ. ರಘುವೀರ್ ಪುರಾಣಿಕ್, ಪತ್ತಿನ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಆರ್. ತಂತ್ರಿ, ನಿರ್ದೇಶಕರಾದ ಕೆ.ಸಿ. ವಿಶ್ವಾನಂದ ಭಟ್, ಹೇಮಂತಕುಮಾರ್, ಸುಮಿತ್ರಾ ಅನಂತ ತಂತ್ರಿ, ಸುಲೋಚನಾ ಚಂದ್ರಶೇಖರ ಶೆಟ್ಟಿ ವೇದಿಕೆಯಲ್ಲಿದ್ದರು.

ಇತ್ತೀಚೆಗೆ ಮೆಸೂರು ವಿವಿಯಿಂದ ಗೌರವ ಡಾಕ್ಟರೇಟ್‌ಗೆ ಭಾಜನರಾದ ಪ್ರೊ. ಭಾಷ್ಯಂ ಸ್ವಾಮೀಜಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಾಹಕ ದಿವಾಕರ ಜಿ. ಹೆಗಡೆ ಸೇರಿದಂತೆ ರಜತ ಮಹೋತ್ಸವ ಸಂಚಿಕೆ ಹೊರಬರಲು ಕಾರಣರಾದ ಎಲ್ಲರನ್ನು ಅಭಿನಂದಿಸಲಾಯಿತು. ಸನ್ಮಾನಿತರನ್ನು ರಾಜೇಶ್ ಬೋರೆ ಪರಿಚಯಿಸಿದರು. ರಮೇಶ್ ಕಿಕ್ಕೇರಿ ಅವರು ನೀರಿನ ಸದುಪಯೋಗ, ಮಳೆ ಕೊಯ್ಲು ಕುರಿತು ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net