ಮೈಸೂರು ಮಲೇರಿಯಾಮುಕ್ತ ಜಿಲ್ಲೆ

Aedes aegypti frontal macro (yellow fever mosquito / mosquito da dengue)
Frontal view of a tropical disease vector mosquito biting human skin and sucking blood, known carrier of chikungunya, dengue and yellow fever, in Brazil it's commonly known as mosquito da dengue
Published on

ಅವಿನಾಶ್ ಜೈನಹಳ್ಳಿ ಮೈಸೂರು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮಗಳ ಪರಿಣಾಮಕಾರಿ ಜಾರಿಯಿಂದಾಗಿ ಮೈಸೂರು ಮಲೇರಿಯಾಮುಕ್ತ ಜಿಲ್ಲೆಯಾಗಿ ಹೊರ ಹೊಮ್ಮಿದ್ದು, ಈ ಸಂಬಂಧ ಮೌಲ್ಯಮಾಪನ ಮಾಡಿ ಅಧಿಕೃತವಾಗಿ ಘೋಷಣೆ ಮಾಡಲು ಭಾರತ ಸರ್ಕಾರದ ಸ್ವತಂತ್ರ ಮೌಲ್ಯಮಾಪನಾ ಸಮಿತಿ ಮುಂದಿನ ವಾರ ಮೈಸೂರಿಗೆ ಆಗಮಿಸುತ್ತಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳ ಪರಿಶ್ರಮದಿಂದಾಗಿ 6 ವರ್ಷಗಳಿಂದ ಜಿಲ್ಲೆಯಲ್ಲಿ ಒಂದೇ ಒಂದು ಮಲೇರಿಯಾ ಪ್ರಕರಣವೂ ದಾಖಲಾಗಿಲ್ಲ. ಈ ಸಂಬಂಧ ‘ಮಲೇರಿಯಾಮುಕ್ತ ಜಿಲ್ಲೆ’ ಎಂಬ ಪ್ರಮಾಣಪತ್ರ ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಭಾರತ ಸರ್ಕಾರದ ಸ್ವತಂತ್ರ ಮೌಲ್ಯಮಾಪನಾ ಸಮಿತಿಯು ಮೈಸೂರಿಗೆ ಆಗಮಿಸುತ್ತಿದ್ದು, ಮೇ 23, 24 ಹಾಗೂ 25 ರಂದು ಈ ಸಂಬಂಧ ಎಲ್ಲ ರೀತಿ ಪರಿಶೀಲನೆ ನಡೆಸಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೈಸೂರನ್ನು ಅಧಿಕೃತವಾಗಿ ಮಲೇರಿಯಾಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡಲಾಗುತ್ತದೆ.

ದೃಢೀಕೃತ ಪ್ರಮಾಣ ಪತ್ರ

ಪ್ರಮಾಣಪತ್ರ ನೀಡುವ ಹಾಗೂ ಮಲೇರಿಯಾಮುಕ್ತ ಜಿಲ್ಲೆ ಎಂದು ದೃಢೀಕರಿಸುವ ಭಾರತ ಸರ್ಕಾರದ ಸ್ವತಂತ್ರ ಮೌಲ್ಯಮಾಪನಾ ಸಮಿತಿಗೆ ಅಗತ್ಯ ಮಾಹಿತಿ ನೀಡಲಾಗಿದೆ. ಸಮಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಲಾ ಒಬ್ಬರು ಅಧಿಕಾರಿ ಇದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಕೀಟಶಾಸ್ತ್ರ ತಜ್ಞರನ್ನು ಸಮಿತಿ ಒಳಗೊಂಡಿದೆ. ಸಮಿತಿ ಮೈಸೂರಿಗೆ ಆಗಮಿಸಿ ಮೂರು ದಿನಗಳ ಕಾಲ ಮೌಲ್ಯಮಾಪನ ನಡೆಸಲಿದೆ. ಬಳಿಕ ಎಲ್ಲ ದಾಖಲಾತಿಗಳು ಸರಿ ಇದ್ದರೆ ಎರಡು ತಿಂಗಳ ಒಳಗೆ ಮೈಸೂರನ್ನು ‘ಮಲೇರಿಯಾಮುಕ್ತ ಜಿಲ್ಲೆ’ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗುವುದು.

ರಾಜ್ಯದ 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎರಡು-ಮೂರು ವರ್ಷಗಳಿಂದ ಶೂನ್ಯ ಪ್ರಕರಣಗಳು ದಾಖಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಮಾತ್ರ 2017ರಿಂದಲೇ ಮಲೇರಿಯಾ ಪೂರ್ಣ ನಿಯಂತ್ರಣ ಕಂಡಿದ್ದು, ಪ್ರಕರಣ ಸಂಪೂರ್ಣ ಶೂನ್ಯವಾಗಿದೆ. ಈ ಸಂಬಂಧ 2022ರಲ್ಲಿಯೇ ‘ಮಲೇರಿಯಾಮುಕ್ತ ಜಿಲ್ಲೆ’ ಪ್ರಮಾಣಪತ್ರ ಪಡೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿತ್ತು. 2020ರ ಏಪ್ರಿಲ್ 13ರಿಂದ 15 ರವರೆಗೆ ಸಮಿತಿಯು ಮೌಲ್ಯಮಾಪನಕ್ಕೆ ಮೈಸೂರಿಗೆ ಆಗಮಿಸಬೇಕಿತ್ತು. ಆದರೆ, ಕೋವಿಡ್‌ನಿಂದಾಗಿ ಅದು ಸಾಧ್ಯವಾಗಲಿಲ್ಲ. ಅಲ್ಲದೆ ಪ್ರಸ್ತುತ ಮಾರ್ಚ್ ತಿಂಗಳಲ್ಲೇ ಸಮಿತಿ ಸದಸ್ಯರು ಮೈಸೂರಿಗೆ ಆಗಮಿಸಬೇಕಿತ್ತಾದರೂ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾದ ಕಾರಣ ಮತ್ತೆ ದಿನಾಂಕ ಮುಂದೂಡಲಾಯಿತು. ಇದೀಗ ಮತ್ತೆ ಸಮಿತಿ ಸದಸ್ಯರು ಆಗಮಿಸುವ ದಿನಾಂಕ ನಿಗದಿಯಾಗಿದ್ದು, ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಮೈಸೂರು ಅಧಿಕೃತವಾಗಿ ‘ಮಲೇರಿಯಾಮುಕ್ತ ಜಿಲ್ಲೆ’ ಎಂಬ ಖ್ಯಾತಿ ಪಡೆಯಲಿದೆ.

ಆರೋಗ್ಯ ಇಲಾಖೆ ಪರಿಶ್ರಮ ದೊಡ್ಡದು

ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಮಲೇರಿಯ ನಿಯಂತ್ರಣಕ್ಕೆ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳಿಂದ ಪ್ರಕರಣಗಳ ನಿಯಂತ್ರಣ ಸಾಧ್ಯವಾಗಿದೆ. 1998ರಿಂದ 2004ರವರೆಗೆ ಮಲೇರಿಯಾ ಪ್ರಕರಣಗಳು ಹೆಚ್ಚಿದ್ದವು. 2017ರಿಂದ ಪ್ರಕರಣಗಳಿಲ್ಲ. ಶೂನ್ಯ ಪ್ರಕರಣಗಳಿದ್ದರೂ ಜ್ವರ ಸರ್ವೇ, ಮಲೇರಿಯಾ ಪರೀಕ್ಷೆ ನಿಂತಿಲ್ಲ. ಗ್ರಾಮೀಣ ಭಾಗದಲ್ಲಿ ಸೊಳ್ಳೆ ಲಾರ್ವಾಗಳನ್ನು ತಿನ್ನುವಂಥ ಮೀನುಗಳನ್ನು ಕೆರೆಗಳಿಗೆ ಬಿಡುತ್ತಿದ್ದೇವೆ. ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ಮೈಸೂರು ಶೂನ್ಯ ಪ್ರಕರಣ ದಾಖಲಾದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದೇವೆ. ಉತ್ತರ ಭಾರತದ ಕಡೆಯಿಂದ ಬರುವವರು ಸಮಸ್ಯಾತ್ಮಕವಾಗಿದ್ದಾರೆ. ಅಲ್ಲೆಲ್ಲ ಪ್ರಕರಣಗಳಿರುವುದರಿಂದ ಬಂದವರ ಮೇಲೆ ನಿಗಾ ವಹಿಸುತ್ತೇವೆ. ಜ್ವರ ಇರಲಿ, ಇಲ್ಲದಿರಲಿ ತಪಾಸಣೆ ನಡೆಸಿ, ಮಲೇರಿಯಾ ಪಾಸಿಟಿವ್ ಇದ್ದರೆ ಚಿಕಿತ್ಸೆ ಮುಂದುವರಿಸುತ್ತೇವೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂಬರ್ ತಿಳಿಸಿದ್ದಾರೆ.

ವರ್ಷ -ಮಲೇರಿಯಾ ಪ್ರಕರಣ ಸಂಖ್ಯೆ
2012- 72
2013-63
2014-54
2015-34
2016-43
2017ರಿಂದ 2023- 0

ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ರೋಗ ನಿಯಂತ್ರಣಕ್ಕೆ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳಿಂದ ಮಲೇರಿಯಾ ಪ್ರಕರಣಗಳ ನಿಯಂತ್ರಣ ಸಾಧ್ಯವಾಗಿದೆ. 1998ರಿಂದ 2004ರವರೆಗೆ ಮಲೇರಿಯಾ ಪ್ರಕರಣಗಳು ಹೆಚ್ಚಿದ್ದವು. ಆದರೆ 6 ವರ್ಷಗಳಿಂದ ಪ್ರಕರಣಗಳಿಲ್ಲ. ಶೂನ್ಯ ಪ್ರಕರಣಗಳಿದ್ದರೂ ಸರ್ವೆ ನಡೆಸುತ್ತಿದ್ದೇವೆ. ಸ್ವತಂತ್ರ ಮೌಲ್ಯಮಾಪನಾ ಸಮಿತಿಯು ಮೈಸೂರಿಗೆ ಆಗಮಿಸಿ ಮೂರು ದಿನಗಳ ಕಾಲ ಮೌಲ್ಯಮಾಪನ ನಡೆಸಲಿದೆ. ಮೈಸೂರನ್ನು ‘ಮಲೇರಿಯಾಮುಕ್ತ ಜಿಲ್ಲೆ’ ಎಂದು ಅಧಿಕೃತವಾಗಿ ಘೋಷಣೆ ಮಾಡಲಿದೆ.ಡಾ.ಎಸ್.ಚಿದಂಬರ್ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net