‘ಮೈಸೂರು’ ಅತ್ಯುತ್ತಮ ತಂತ್ರಜ್ಞಾನದ ಭೂಸ್ವರೂಪ: ಸಚಿವ ಪ್ರಿಯಾಂಕ್ ಖರ್ಗೆ ಬಣ್ಣನೆ

27
Published on

ಮೈಸೂರು: ಮೈಸೂರು ರಾಜ್ಯದ ಸಾಂಸ್ಕೃತಿಕ ರಾಜಧಾನಿಯಷ್ಟೇ ಅಲ್ಲದೇ ಭವಿಷ್ಯದಲ್ಲಿ ದೇಶದ ಅತ್ಯುತ್ತಮ ತಂತ್ರಜ್ಞಾನದ ಭೂಸ್ವರೂಪವಾಗಿ ಬದಲಾಗಲಿದೆ ಎಂದು ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ನಗರದ ಇನ್ಫೋಸಿಸ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ‘ಮೈಸೂರು ಬಿಗ್ ಟೇಕ್ ಷೋ’ಗೆ ವರ್ಚ್ಯುವಲ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ರಫ್ತು ಆರ್ಥಿಕತೆಯಲ್ಲಿ ಮೈಸೂರು ವಲಯವು ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿದೆ. ಅಲ್ಲದೇ ರಾಜ್ಯದ ಸಾಂಸ್ಕೃತಿಕ ರಾಜಧಾನಿಯಷ್ಟೇ ಅಲ್ಲದೇ ಭವಿಷ್ಯದಲ್ಲಿ ಮೈಸೂರು ದೇಶದ ಅತ್ಯುತ್ತಮ ತಂತ್ರಜ್ಞಾನದ ಭೂಸ್ವರೂಪವಾಗಿ ಬದಲಾಗಲಿದೆ. ಹೀಗಾಗಿ ಮೈಸೂರು ಕ್ಲಸ್ಟರಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಪಣತೊಟ್ಟಿದೆ ಎಂದರು.

ಮೈಸೂರು ವಲಯವು ರಾಜ್ಯದ ಮಾಹಿತಿ ತಂತ್ರಜ್ಞಾನ (ಐಟಿ) ರಫ್ತಿನಲ್ಲಿ ಕಳೆದ ಹಣಕಾಸು ವರ್ಷದಲ್ಲಿ 5,700 ಕೋಟಿ ರೂ. ವಹಿವಾಟು ನಡೆಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಮೈಸೂರು ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ ಮೈಸೂರು, ಮಂಡ್ಯ, ರಾಮನಗರ ಹಾಗೂ ಚಾಮರಾಜನಗರದಲ್ಲಿ 47 ಹೊಸ ಕಂಪನಿಗಳು ಹೂಡಿಕೆ ಮಾಡಿದ್ದು, 4,500 ಮಂದಿಗೆ ನೇರ ಉದ್ಯೋಗ ಸೃಷ್ಟಿಯಾಗಿದೆ ಎಂದು ವಿವರಿಸಿದರು.

ಮೈಸೂರು-ಬೆಂಗಳೂರು ನಡುವೆ ಸಂಪರ್ಕ ಸುಲಭಗೊಂಡಿದ್ದರಿಂದ ಬೆಂಗಳೂರು ಬಳಿಕ ಮೈಸೂರು ಹೆಚ್ಚು ಬೆಳವಣಿಗೆ ಕಾಣುತ್ತಿದೆ. ಐ.ಟಿ- ಬಿ.ಟಿ ಅಲ್ಲದೇ ನವೋದ್ಯಮಗಳ ಸ್ಥಾಪನೆಗೆ ಇಲ್ಲಿ ಪೂರಕವಾದ ವಾತಾವರಣವಿರುವುದರಿಂದ 450 ಹೊಸ ನವೋದ್ಯಮ (ಸ್ಟಾರ್ಟ್‌ಅಪ್)ಗಳು ಕಾರ್ಯಾಚರಣೆ ಆರಂಭಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಡೀಪ್ ಟೆಕ್, ರಕ್ಷಣೆ (ಡಿಫೆನ್ಸ್ ) ಹಾಗೂ ಸೇವಾಧಾರಿತ ಕಂಪನಿಗಳು ಹೆಚ್ಚಾಗಿ ಆಗಮಿಸುತ್ತಿದ್ದು, ರಾಜ್ಯದ ಶೇ. 15ರಷ್ಟು ನವೋದ್ಯಮಗಳು ಮೈಸೂರಿನಲ್ಲಿ ಕಾರ್ಯಾಚರಣೆ ಮಾಡುತ್ತಿವೆ ಎಂದು ತಿಳಿಸಿದರು.

ಇನ್ಫೊಸಿಸ್, ವಿಪ್ರೊ, ಐಬಿಎಂ, ಎಚ್‌ಪಿ ಸೇರಿದಂತೆ ವಿವಿಧ ಹೆಸರಾಂತ ಕಂಪನಿಗಳು ಮೈಸೂರನ್ನು ಉದ್ಯಮದ ವಿಸ್ತರಣೆಗೆ ಪರ್ಯಾಯ ಸ್ಥಳ ಎಂದು ಮಾತ್ರವೇ ಗುರುತಿಸಿಲ್ಲ. ಇದರೊಂದಿಗೆ ಸಂಶೋಧನೆ ಹಾಗೂ ವಿಸ್ತರಣೆಗೆ ಪ್ರಶಸ್ತ ಜಾಗವೆಂದು ಗುರುತಿಸಿವೆ ಎಂದು ಹೇಳಿದರು.

ಬಿಯಾಂಡ್ ಬೆಂಗಳೂರು ಅಭಿಯಾನದಡಿ ಮೈಸೂರು ಕ್ಲಸ್ಟರ್ ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಸರ್ಕಾರ ಬದ್ಧವಾಗಿದೆ. ಬೆಂಗಳೂರು ನಂತರ ತಂತ್ರಜ್ಞಾನ ಕಂಪನಿಗಳು ಉದ್ಯಮ ಸ್ಥಾಪಿಸಲು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿಯಲ್ಲಿ ಪೂರಕ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿವೆ ಎಂದರು.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಒಂದೂವರೆ ಗಂಟೆಯಲ್ಲಿ ತಲುಪಬಹುದು. ಮಂಡಕಳ್ಳಿ ವಿಮಾನದ ಬಳಿ ಜಾಗತಿಕ ತಾಂತ್ರಿಕ ಕೇಂದ್ರವನ್ನು (ಜಿಟಿಸಿ) ಅನ್ನು ರಾಜ್ಯ ಸರ್ಕಾರ ನಿರ್ಮಿಸುತ್ತಿದೆ ಎಂದು ಮಾಹಿತಿ ನೀಡಿದರು.

ಕ್ಲಸ್ಟರ್ ಮಟ್ಟದಲ್ಲಿ ಕೌಶಲಾಭಿವೃದ್ಧಿ ಕೇಂದ್ರಗಳು, ಇನ್‌ಕ್ಯೂಬ್ ಸೆಂಟರ್‌ಗಳನ್ನು ಸ್ಥಾಪನೆ ಮಾಡಿದರೆ ಸ್ಥಳೀಯವಾಗಿ ಆರ್ಥಿಕತೆಯಲ್ಲಿ ಬೆಳವಣಿಗೆಯಾಗುತ್ತದೆ. ಅಲ್ಲದೇ ಸುಸ್ಥಿರ ಅಭಿವೃದ್ಧಿಯನ್ನು ಹೊಂದಬಹುದಾಗಿದೆ. ಆದ್ದರಿಂದ ಉದ್ಯಮಗಳನ್ನು ಅಭಿವೃದ್ಧಿಗೊಳಿಸಿ ದೇಶಕ್ಕೆ ಮಾದರಿಯನ್ನು ರೂಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಐಟಿ, ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ಫ್ರಾನ್ಸಿನ ರಾಯಭಾರಿ ಮಾರ್ಕ್ ಲ್ಯಾಮಿ, ಭಾರತೀಯ ಮಾಹಿತಿ ತಂತ್ರಜ್ಞಾನ ಪಾರ್ಕ್ ನಿರ್ದೇಶಕ ಸಂಜಯ್ ತ್ಯಾಗಿ, ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ಸಿಇಒ ಸಂಜೀವ್ ಗುಪ್ತಾ, ಮೈಸೂರು ಕ್ಲಸ್ಟರ್ ಮುಖ್ಯಸ್ಥ ಜಿ.ಎನ್.ಸುಧೀರ್, ಎಕ್ಸೆಲ್ ಸಾಫ್ಟ್ ಮುಖ್ಯಸ್ಥ ಸುಧನ್ವ ಧನಂಜಯ, ಇನ್ಫೊಸಿಸ್ ಉಪಾಧ್ಯಕ್ಷ ವಿನಾಯಕ ಹೆಗಡೆ, ರಂಗಸನ್ಸ್ ಏರೊಸ್ಪೇಸ್ ವ್ಯವಸ್ಥಾಪಕ ನಿರ್ದೇಶಕ ಪವನ್ ರಂಗ, ಟಿಐಇ ಮೈಸೂರು ಅಧ್ಯಕ್ಷ ಭಾಸ್ಕರ್ ಕಳಲೆ ಇತರರು ಇದ್ದರು.

ಸಕೃತಕ ಬುದ್ಧಿಮತೆಯ ತರುಣಿ ಏಕ್ಯಾ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಕಾರ್ಯಕ್ರಮ ನಾನಾ ಭಾಷೆಯಲ್ಲಿ ನಿರೂಪಣೆ ಮಾಡಿದ್ದು, ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net