

ಸದೇಶ್ ಕಾರ್ಮಾಡ್ ಮೈಸೂರು
ಬಡವರ್ಗದವರ ಹಸಿವು ತಣಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ಇಂದಿರಾ ಕ್ಯಾಂಟೀನ್‌ಅನ್ನು ಇದೀಗ ಕಾಲೇಜುಗ ಳಲ್ಲೂ ಪ್ರಾರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಜತೆಗೆ ಅನ್ನದಾಸೋಹವನ್ನು ನೀಡಲು ನಗರ ಪಾಲಿಕೆ ಸಿದ್ಧತೆ ಕೈಗೊಂಡಿದೆ.
ಮೈಸೂರು ವಿಶ್ವ ವಿದ್ಯಾಲಯದ ಮಾನಸಗಂಗೋತ್ರಿ ಆವರಣ ಹಾಗೂ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಆವರಣದಲ್ಲಿ ಶೀಘ್ರದಲ್ಲಿಯೇ ಇಂದಿರಾ ಕ್ಯಾಂಟೀನ್ ನಿರ್ಮಾಣಗೊಳ್ಳಲಿದ್ದು, ಕ್ಯಾಂಟೀನ್ ನಿರ್ಮಾಣಕ್ಕೆ ಇದೀಗ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮಹಾರಾಣಿ ಕಾಲೇಜು ಹಾಗೂ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾಥಿ ಗರ್ಳು ವ್ಯಾಸಂಗ ಮಾಡುತ್ತಿದ್ದಾರೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸಾಕಷ್ಟು ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಹಾಗಾಗಿ ಅವರು ಬೆಳಗ್ಗೆ ಬೇಗನೆ ಹೊರಟು ಬರುವ ಅನಿವಾರ್ಯತೆ ಇರುವ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ತರಲು ಸಾಧ್ಯವಾಗುತ್ತಿಲ್ಲ. ಇಂತಹ ವಿದ್ಯಾರ್ಥಿ ಗಳು ಹೊರಗಿನಿಂದ ಆಹಾರ ಖರೀದಿಸಿ ತಿನ್ನಿವಷ್ಟು ಆರ್ಥಿಕ ಶಕ್ತರಾಗಿರುವುದಿಲ್ಲ. ಹಾಗಾಗಿ ಸಾಕಷ್ಟು ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್‌ನಿಂದ ಅನುಕೂಲವಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.
ಮಹಾರಾಣಿ ಕಾಲೇಜು ಮುಖ್ಯಸ್ಥರು ಹಾಗೂ ಮೈಸೂರು ವಿವಿಯ ಅಧಿಕಾರಿಗಳೊಂದಿಗೆ ಕ್ಯಾಂಟೀನ್ ಆರಂಭಿಸುವ ಕುರಿತು ಚರ್ಚಿ ಸಲಾಗಿದ್ದು, ಎರಡೂ ಕಡೆಯಿಂದ ಒಪ್ಪಿಗೆ ಪಡೆದು ಜಾಗವನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದಿಂದ ಶೀಘ್ರದಲ್ಲಿಯೇ ಒಪ್ಪಿಗೆ ದೊರೆಯುವ ನಿರೀಕ್ಷೆ ಇದೆ. ಸರ್ಕಾರದಿಂದ ಒಪ್ಪಿಗೆ ದೊರೆತ ನಂತರ ಇಂದಿರಾ ಕ್ಯಾಂಟೀನ್ ಮಾದರಿಯ ಕಟ್ಟಡ ನಿರ್ಮಾಣ ಗೊಳ್ಳಲಿದೆ. ಅದಾದ ನಂತರ ಇಂದಿರಾ ಕ್ಯಾಂಟೀನ್ ಕಾರ್ಯಾರಂಭಕ್ಕೆ ಟೆಂಡರ್ ಕರೆಯಲಾಗುವುದು.
ಮಾನಸಗಂಗೋತ್ರಿಯಲ್ಲಿ ಈಗಾಗಲೇ ಒಂದು ಖಾಸಗಿ ಕ್ಯಾಂಟೀನ್ ಇದೆ. ಆದರೆ, ಎಲ್ಲ ವಿದ್ಯಾರ್ಥಿಗಳಿಗೆ ಈ ಕ್ಯಾಂಟೀನ್ ಬಳಸಿ ಕೊಳ್ಳಲು ಆರ್ಥಿಕ ಪರಿಸ್ಥಿತಿ ಕಾರಣದಿಂದ ಸಾಧ್ಯವಿಲ್ಲ. ಇಂದಿರಾ ಕ್ಯಾಂಟೀನ್ ನಿರ್ಮಾಣಗೊಂಡರೆ ಸಾಕಷ್ಟು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.
ಸಿದ್ದರಾಮಯ್ಯ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳು ಪ್ರಾರಂಭಗೊಂಡಿತು. ಅವರ ಅಧಿಕಾರಾವಧಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತಿತ್ತು. ಆದರೆ, ಸರ್ಕಾರ ಬದಲಾದ ನಂತರ ಇಂದಿರಾ ಕ್ಯಾಂಟೀನ್‌ಗಳು ಮೂಲೆಗುಂಪಾಯಿತು. ಇದೀಗ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದ ನಂತರ ಇಂದಿರಾ ಕ್ಯಾಂಟೀನ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದು, ಹೊಸ ಇಂದಿರಾ ಕ್ಯಾಂಟೀನ್‌ಗಳ ಪ್ರಾರಂಭಕ್ಕೂ ಸಿದ್ಧತೆ ನಡೆಯುತ್ತಿದೆ.
ಪ್ರಸ್ತುತ ನಗರದ ಕಾಡಾ ಕಚೇರಿ ಆವರಣ, ಸೂಯೇಜ್ ಫಾರ್ಮ್, ಆಲನಹಳ್ಳಿ, ಸಿಲ್ಕ್‌ಫ್ಯಾಕ್ಟರಿ ವೃತ್ತ, ಶಾರದಾದೇವಿ ನಗರ, ಕುಂಬಾರಕೊಪ್ಪಲು ಮುಖ್ಯರಸ್ತೆ, ಕೆ.ಆರ್.ಆಸ್ಪತ್ರೆ ಆವರಣ, ಗ್ರಾಮಾಂತರ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಮುಂಭಾಗದ ಸರ್ಕಾರಿ ಅತಿಥಿ ಗೃಹ, ಹಳೇ ಜಾವಾ ಫ್ಯಾಕ್ಟರಿ ಜೋಡಿ ತೆಂಗಿನ ಮರದ ರಸ್ತೆ, ಅಜೀಜ್‌ಸೇಠ್ ಜೋಡಿ ರಸ್ತೆ, ತ್ರಿವೇಣಿ ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಗರದ ಬಹುತೇಕ ಇಂದಿರಾ ಕ್ಯಾಂಟೀನ್‌ಗಳು ಅತ್ಯುತ್ತಮವಾಗಿ ನಡೆಯುತ್ತಿದೆ. ವಿಶೇಷವಾಗಿ ಕೆ.ಆರ್. ಆಸ್ಪತ್ರೆ ಆವರಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದ ಕ್ಯಾಂಟೀನ್‌ಗಳಿಗೆ ಉತ್ತಮ ಜನಸ್ಪಂದನೆ ದೊರೆಯುತ್ತಿದೆ. ಕೆ.ಆರ್. ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಂಟೀನ್‌ನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಗ್ರಾಮಾಂತರ ಬಸ್ ನಿಲ್ದಾಣದ ಕ್ಯಾಂಟೀನ್‌ನಲ್ಲಿ ಸದಾ ಜನದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದೆ.
ವಿದ್ಯಾರ್ಥಿಗಳ ಅನುಕೂಲಕೋಸ್ಕರ ಮೈಸೂರು ವಿಶ್ವ ವಿದ್ಯಾಲಯದ ಮಾನಸಗಂಗೋತ್ರಿ ಆವರಣ ಹಾಗೂ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಕ್ಯಾಂಟೀನ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಕ್ಯಾಂಟೀನ್ ನಿರ್ಮಾಣ ಗೊಳ್ಳುವ ನಿರೀಕ್ಷೆ ಹೊಂದಿದ್ದೇವೆ.
ಡಾ.ವೆಂಕಟೇಶ್, ನಗರ ಪಾಲಿಕೆ ಆರೋಗ್ಯಾಧಿಕಾರಿ
ಮೈಸೂರು ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸುತ್ತಾರೆ. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಸಂಜೆವರೆಗೂ ಲ್ಯಾಬ್‌ನಲ್ಲಿ ಅಧ್ಯಯನದಲ್ಲಿ ತೊಡಗುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ಅನುಕೂಲವಾಗಲಿದೆ. ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು ಎಂದು ಮೈಸೂರು ವಿವಿ ಸಂಶೋಧಕರ ಸಂಘದಿಂದಲೂ ಮನವಿ ನೀಡಲಾಗಿತ್ತು. ಇದೀಗ ಕ್ಯಾಂಟೀನ್ ನಿರ್ಮಾಣಕ್ಕೆ ನಿರ್ಧಾರ ಕೈಗೊಂಡಿರುವುದು ಸಂತಸ ತಂದಿದೆ.
ಬಿ.ಸಿ. ಸಂಜಯ್, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿವಿ