ಸ್ವಚ್ಛತಾ ಪ್ರಶಸ್ತಿ ನಿರೀಕ್ಷೆಯಲ್ಲಿ ಮೈಸೂರು

mcc (3)
Published on

ಸದೇಶ್ ಕಾರ್ಮಾಡ್ ಮೈಸೂರು

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ‘ಸ್ವಚ್ಛ ಸರ್ವೇಕ್ಷಣೆ-2023’ ಮುಕ್ತಾಯ ಹಂತ ತಲುಪಿದ್ದು, ಈ ಬಾರಿಯೂ ದೇಶದ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯನ್ನು ಮೈಸೂರು ಹೊಂದಿದೆ.

ಸ್ವಚ್ಛ ಸರ್ವೇಕ್ಷಣೆಯ ಸಮೀಕ್ಷೆ ಪೂರ್ಣಗೊಂಡಿದ್ದು, ತ್ಯಾಜ್ಯ ಮುಕ್ತ ನಗರಿಗೆ ನೀಡುವ ರೇಟಿಂಗ್ ಸಮೀಕ್ಷೆ ಮಾತ್ರ ಬಾಕಿ ಉಳಿದಿದ್ದು, ಈ ಸಮೀಕ್ಷೆ ಕೆಲವೇ ದಿನಗಳ ಒಳಗೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಕಳೆದ ಬಾರಿ ಅಕ್ಟೋಬರ್ 1ನೇ ತಾರೀಖಿನಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು.

ಇತ್ತೀಚೆಗೆ ನಗರ ಪಾಲಿಕೆಯ ತಂಡ ದೇಶದ ನಂ.1 ಸ್ವಚ್ಛ ನಗರಿ ಇಂದೋರ್‌ಗೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಸ್ವಚ್ಛತಾ ಕಾರ್ಯ ಗಳನ್ನು ಪರಿಶೀಲನೆ ನಡೆಸಿದ್ದು, ಇಂದೋರ್‌ಗೆ ಹೋಲಿಕೆ ಮಾಡಿದರೆ ಮೈಸೂರು ಸ್ವಚ್ಛತೆಯಲ್ಲಿ ಮತ್ತಷ್ಟು ಸಾಧನೆ ತೋರುವ ಅವಶ್ಯಕತೆ ಇದೆ. ಹಾಗಾಗಿ ಈ ಬಾರಿ ಮೈಸೂರು ನಂ.1 ಸ್ಥಾನಕ್ಕೆ ಮರಳುವ ಸಾಧ್ಯತೆ ಕಡಿಮೆ ಇದ್ದು, ದೇಶದ ಟಾಪ್-10 ನಗರಗಳ ಪಟ್ಟಿಯೊಳಗೆ ಸ್ಥಾನ ಪಡೆಯುವ ಸಾಧ್ಯತೆ ಇದೆ.

9,500 ಅಂಕಗಳಿಗೆ ಸ್ಪರ್ಧೆ

ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಒಟ್ಟು 7,500 ಅಂಕಗಳನ್ನು ನಿಗದಿ ಪಡಿಸಲಾಗಿತ್ತು. ಈ ಬಾರಿ ಅಂಕಗಳನ್ನು 9,500ಕ್ಕೆ ಏರಿಕೆ ಮಾಡಲಾಗಿದೆ. ಕಳೆದ ಬಾರಿ ಸರ್ವೀಸ್ ಲೆವಲ್ ಪ್ರೋಗ್ರೆಸ್‌ಗೆ 3,000 (ಶೇ.40), ಸರ್ಟಿಫಿಕೇಷನ್‌ಗೆ 2,250 , ಸಿಟಿಜನ್ ವಾಯ್ಸಗೆ 2,250 ಅಂಕಗಳನ್ನು ನಿಗದಿ ಪಡಿಸಲಾಗಿತ್ತು. ಈ ಬಾರಿ ಸರ್ವಿಸ್ ಲೆವಲ್ ಪ್ರೋಗ್ರೆಸ್‌ಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದಕ್ಕೆ ಒಟ್ಟು 4,525 (ಶೇ.48) ಅಂಕಗಳನ್ನು ನಿಗದಿ ಪಡಿಸಲಾಗಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಶೇ.8 ರಷ್ಟು ಅಂಕಗಳನ್ನು ಹೆಚ್ಚಿಸಲಾಗಿದೆ. ಸರ್ಟಿಫಿಕೇಷನ್‌ಗೆ ,2500, ಸಿಟಿಜನ್ ವಾಯ್ಸಗೆ 2,475 ಅಂಕಗಳನ್ನು ನಿಗದಿ ಪಡಿಸಲಾಗಿದೆ.

ಸರ್ವಿಸ್ ಲೆವಲ್ ಪ್ರೋಗ್ರೆಸ್ ವಿಭಾಗದಲ್ಲಿ ಅಂಕಗಳನ್ನು ನೀಡುವ ಸಂದರ್ಭ ಮನೆ ಮನೆಗಳಿಂದ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ ನೀಡಲಾಗುತ್ತಿದೆಯೇ?, ಸಂಗ್ರಹಿಸಿದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಸಂಸ್ಕರಣೆ ಮಾಡಲಾಗುತ್ತಿದೆಯೇ? ನಗರದಲ್ಲಿ ನೈರ್ಮಲ್ಯವನ್ನು ಸದಾ ಉತ್ತಮವಾಗಿ ಕಾಪಾಡಲಾಗುತ್ತಿದೆಯೇ?, ಒಳಚರಂಡಿ ಶುಚಿಗೊಳಿಸಲು ಯಂತ್ರೋ ಪಕರಣ ಬಳಕೆ ಮಾಡಲಾಗುತ್ತಿದೆಯೇ ಎಂಬ ಅಂಶಗಳನ್ನು ಪ್ರಮುಖವಾಗಿ ಗಮನಿಸಲಾಗುತ್ತದೆ. ಕಳೆದ ಬಾರಿ ಈ ವಿಭಾಗದಲ್ಲಿಯೇ ಪಾಲಿಕೆ ಹಿನ್ನಡೆ ಅನುಭವಿಸಿತ್ತು. ಈ ಸಮಸ್ಯೆ ಪರಿಹಾರಕ್ಕೆ ಕೆಸರೆ ಹಾಗೂ ರಾಯನಕೆರೆಯಲ್ಲಿ ನೂತನ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಆಗುತ್ತಿದ್ದು, ಕೆಸರೆ ಘಟಕ ಉದ್ಘಾಟನೆಗೆ ಸಿದ್ಧವಾಗಿದ್ದು, ರಾಯನಕೆರೆ ಘಟಕದ ಕಾಮಗಾರಿ ಮುಕ್ತಾಯ ಹಂತ ತಲುಪಿದೆ. 2024ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ಮತ್ತಷ್ಟು ಉತ್ತಮ ಸಾಧನೆ ತೋರವ ನಿರೀಕ್ಷೆ ಇದೆ.

ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ

2015, 2016ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊ ಂಡಿತ್ತು. 2017ರಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 2018ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶ ದ ನಂ.1 ಸ್ವಚ್ಛ ನಗರಿ ಪಟ್ಟ ಪಡೆದರೂ ಸಮಗ್ರ ವಿಭಾಗದಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತು. 2019ರಲ್ಲಿ ಸಮಗ್ರ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. 2020ರಲ್ಲಿ ಸಮಗ್ರ ವಿಭಾಗದಲ್ಲಿ 5ನೇ ಸ್ಥಾನ ಪಡೆಯಿತು. 2020ರಲ್ಲಿ ಪ್ರಥಮ ಬಾರಿಗೆ ರ‌್ಯಾಂಕಿಂಗ್ ಹಾಗೂ ಸ್ವಚ್ಛ ನಗರಿಗೆ ಪ್ರತ್ಯೇಕ ಪ್ರಶಸ್ತಿ ನೀಡಲಾಯಿತು. ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ಮೈಸೂರು ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಪಡೆದರೆ ಅದೇ ವಿಭಾಗದ ರ‌್ಯಾಂಕಿಂಗ್‌ನಲ್ಲಿ 2ನೇ ಸ್ಥಾನ ಪಡೆಯಿತು. 2021ರಲ್ಲಿ ಸ್ವಚ್ಛತೆಯ ಸಮಗ್ರ ವಿಭಾಗದಲ್ಲಿ 11ನೇ ಸ್ಥಾನಕ್ಕೆ ಹಾಗೂ ಮಧ್ಯಮ ನಗರ ವಿಭಾಗದಲ್ಲಿ 7ನೇ ಸ್ಥಾನಕ್ಕೆ ಕುಸಿಯಿತು. 1 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳ ಸ್ವಚ್ಛತೆಯ ವಿಭಾಗದಲ್ಲಿ ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ (ಸೆಲ್ಫ್ ಸಸ್ಟೈನಬಲ್ ಸಿಟಿ) ಪ್ರಶಸ್ತಿ, ಸಫಾಯಿ ಮಿತ್ರ ಸುರಕ್ಷಾ ಪ್ರಶಸ್ತಿಯಲ್ಲಿ 5ನೇ ರ‌್ಯಾಂಕ್ ಪಡೆದುಕೊಂಡಿತು. ಪೌರಕಾರ್ಮಿಕರ ಸಮವಸ್ತ್ರ ವಿನ್ಯಾಸ ಪ್ರಶಸ್ತಿ ಪಡೆದುಕೊಂಡಿತು.

2022ರಲ್ಲಿ ಸಮಗ್ರ ವಿಭಾಗದಲ್ಲಿ ಮೈಸೂರು 8ನೇ ಸ್ಥಾನ ಪಡೆದುಕೊಂಡಿತು. 3 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳಲ್ಲಿ (ಮಧ್ಯಮ ನಗರ) ದೇಶದ ನಂ.1 ಸ್ವಚ್ಛ ನಗರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. 1 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರದಲ್ಲಿ 2ನೇ ರ‌್ಯಾಂಕ್ ಪಡೆದುಕೊಂಡಿತು. 2019 ರಿಂದ ನಿರಂತರವಾಗಿ ಫೈವ್‌ಸ್ಟಾರ್ ರೇಟಿಂಗ್‌ನೊಂದಿಗೆ ತ್ಯಾಜ್ಯ ಮುಕ್ತ ನಗರಿ, ಬಯಲು ಶೌಚಮುಕ್ತ ನಗರ ಪ್ರಶಸ್ತಿ ನಗರ ಪ್ರಶಸ್ತಿಯನ್ನು ಪಡೆಯುತ್ತಿದೆ.

ಈ ಬಾರಿ ಸ್ವಚ್ಛ ಸರ್ವೇಕ್ಷಣೆ ಮುಕ್ತಾಯ ಹಂತ ತಲುಪಿದ್ದು, ಒಂದು ತಿಂಗಳ ಒಳಗೆ ಪ್ರಶಸ್ತಿ ಘೋಷಣೆಯಾಗುವ ನಿರೀಕ್ಷೆ ಇದೆ. ಈ ಬಾರಿಯೂ ನಗರ ದೇಶದ ಟಾಪ್-10 ನಗರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ನಿಶ್ಚಿತ. ಪ್ರತಿ ವರ್ಷ ಸ್ವಚ್ಛತೆಯಲ್ಲಿ ಹಲವಾರು ಸುಧಾರಣೆಗಳನ್ನು ನಗರ ಕಾಣುತ್ತಿದೆ. ಕೆಸರೆ ಮತ್ತು ರಾಯನಕೆರೆ ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಕಟ್ಟಡ ತ್ಯಾಜ್ಯ ಘಟಕ ಕಾರ್ಯಾರಂಭಗೊಂಡರೆ ದೇಶದ ನಂ.1 ಸ್ವಚ್ಛ ನಗರ ಇಂದೋರ್‌ಅನ್ನು ನಾವು ಹಿಂದಿಕ್ಕಬಹುದು.

ಡಾ.ಡಿ.ಜಿ. ನಾಗರಾಜ್, ಆರೋಗ್ಯಾಧಿಕಾರಿ, ನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net