ಸ್ವಚ್ಛತಾ ಪ್ರಶಸ್ತಿ ನಿರೀಕ್ಷೆಯಲ್ಲಿ ಮೈಸೂರು

mysore palace-1
Published on
  • ಸ್ವಚ್ಛ ಸರ್ವೇಕ್ಷಣೆ-2022 ಪೂರ್ಣ
  • ಶೀಘ್ರದಲ್ಲಿಯೇ ಪ್ರಶಸ್ತಿ ಪ್ರಕಟವಾಗುವ ನಿರೀಕ್ಷೆ

ಸದೇಶ್ ಕಾರ್ಮಾಡ್ ಮೈಸೂರು
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣೆ ಪೂರ್ಣಗೊಂಡಿದ್ದು, ದೇಶದ ಸ್ವಚ್ಛ ನಗರಿಗಳ ಪೈಕಿ ಒಂದಾಗಿರುವ ಮೈಸೂರು ಮತ್ತೆ ಟಾಪ್-10 ಸ್ಥಾನಕ್ಕೆ ಮರಳುವ ನಿರೀಕ್ಷೆ ಹೊಂದಿದೆ.

ಪ್ರತಿ ಬಾರಿ ಸ್ವಚ್ಛತೆಯಲ್ಲಿ ದೇಶದ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದ ಮೈಸೂರು ಪ್ರಥಮ ಬಾರಿಗೆ 2021ರ ಸ್ವಚ್ಛ ಸರ್ವೇಕ್ಷಣೆಯಲ್ಲಿ 11ನೇ ಸ್ಥಾನಕ್ಕೆ ತಳಲ್ಪಟ್ಟಿತು. ಹೀಗಾಗಿ ಮೈಸೂರು ನಗರ ಮತ್ತೆ ಟಾಪ್-10 ಸ್ಥಾನಕ್ಕೆ ಮರಳುವ ತವಕದಲ್ಲಿ ಇದೆ. ಕಳೆದ ಬಾರಿ ಒಟ್ಟು 6 ಸಾವಿರ ಅಂಕಗಳಿಗೆ ಸ್ವಚ್ಛ ಸರ್ವೇಕ್ಷಣೆ ನಡೆಸಲಾಗಿತ್ತು. ಈ ಬಾರಿ ಈ ಅಂಕವನ್ನು 7,500 ಕ್ಕೆ ಏರಿಕೆ ಮಾಡಲಾಗಿದೆ. ಸರ್ವೀಸ್ ಲೆವಲ್ ಪ್ರೋಗ್ರೆಸ್‌ಗೆ 3,000 ಅಂಕಗಳನ್ನು ನೀಡಲಾಗಿದ್ದು, ಸಿಟಿಜನ್ ಫೀಡ್‌ಬ್ಯಾಕ್ 2,250 ಅಂಕಗಳು, ಸರ್ಟಿಫಿಕೇಷನ್‌ಗೆ 2,250 ಅಂಕಗಳನ್ನು ನಿಗದಿ ಪಡಿಸಲಾಗಿದೆ. ಇದರಲ್ಲಿ ಮೈಸೂರು ನಗರ ಎಷ್ಟು ಅಂಕಗಳನ್ನು ಕಲೆ ಹಾಕಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. 2021ರಲ್ಲಿ ನವೆಂಬರ್ 20 ರಂದು, 2020ರಲ್ಲಿ ಆಗಸ್ಟ್ 20 ರಂದು ಸ್ವಚ್ಛ ಸರ್ವೇಕ್ಷಣೆಯ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳ ಲಾಗಿತ್ತು. ಈ ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭ ಒಂದೆರಡು ತಿಂಗಳ ಒಳಗೆ ನಡೆಯುವ ನಿರೀಕ್ಷೆ ಇದೆ.

ಸ್ವಚ್ಛತೆಯಲ್ಲಿ ಮೈಸೂರು ಸತತ ಎರಡು ಬಾರಿ 2015, 2016ರಲ್ಲಿ ದೇಶದ ನಂ.1 ಸ್ವಚ್ಛ ನಗರ ಪ್ರಶಸ್ತಿಯನ್ನು ಪಡೆದುಕೊಂಡಿತು. ಅದಾದ ನಂತರದ ವರ್ಷಗಳಲ್ಲಿ ದೇಶದ ವಿವಿಧ ನಗರಗಳು ಸ್ವಚ್ಛತೆಯಲ್ಲಿ ತೀವ್ರ ಪೈಪೋಟಿ ನೀಡಿದ ಪರಿಣಾಮ ಮೈಸೂರು ಇದೀಗ ದೇಶದ ಟಾಪ್-10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪರಿಶ್ರಮ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ವಚ್ಛ ನಗರಿ ರ‌್ಯಾಂಕಿಂಗ್‌ನಲ್ಲಿ ಪ್ರತಿ ಬಾರಿ ನಗರ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೆಲವು ವರ್ಷಗಳಿಂದ ನಗರ ಪಾಲಿಕೆ ಸಹ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ವಿಚಾರದಲ್ಲೂ ಹಿಂದೆ ಬಿದ್ದಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಹರಡಿಕೊಂಡಿರುವುದನ್ನು ನಿತ್ಯವೂ ಕಾಣಬಹುದು. ರ‌್ಯಾಂಕಿಂಗ್ ಪಡೆಯಲು ಜನರಿಂದ ಸಿಟಿಜನ್ ಫೀಡ್‌ಬ್ಯಾಕ್ ಪಡೆಯುವುದು ಹಾಗೂ ಸ್ವಚ್ಛತೆ ಕುರಿತು ಜನ ಜಾಗೃತಿ ಮೂಡಿಸಲು ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆಯುವ ವಿಚಾರದಲ್ಲೂ ಪಾಲಿಕೆ ಹಿಂದೆ ಬಿದ್ದಿದೆ. ಇದು ಸ್ವಚ್ಛತೆಯ ರ‌್ಯಾಂಕಿಂಗ್ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸ್ವಚ್ಛತೆಯಲ್ಲಿ ಮೈಸೂರು ನಗರದ ಸಾಧನೆ
2015, 2016ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊ ಂಡಿತ್ತು. 2017ರಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 2018ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶ ದ ನಂ.1 ಸ್ವಚ್ಛ ನಗರಿ ಪಟ್ಟ ಪಡೆದರೂ ಸಮಗ್ರ ವಿಭಾಗದಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತು. 2019ರಲ್ಲಿ ಸಮಗ್ರ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. 2020ರಲ್ಲಿ ಸಮಗ್ರ ವಿಭಾಗದಲ್ಲಿ 5ನೇ ಸ್ಥಾನ ಪಡೆಯಿತು. 2020ರಲ್ಲಿ ಪ್ರಥಮ ಬಾರಿಗೆ ರ‌್ಯಾಂಕಿಂಗ್ ಹಾಗೂ ಸ್ವಚ್ಛ ನಗರಿಗೆ ಪ್ರತ್ಯೇಕ ಪ್ರಶಸ್ತಿ ನೀಡಲಾಯಿತು. ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ಮೈಸೂರು ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಪಡೆದರೆ ಅದೇ ವಿಭಾಗದ ರ‌್ಯಾಂಕಿಂಗ್‌ನಲ್ಲಿ 2ನೇ ಸ್ಥಾನ ಪಡೆಯಿತು. 2021ರಲ್ಲಿ ಮೈಸೂರು ಸ್ವಚ್ಛತೆಯ ಸಮಗ್ರ ವಿಭಾಗದಲ್ಲಿ 11ನೇ ಸ್ಥಾನಕ್ಕೆ, ಮಧ್ಯಮ ನಗರ ವಿಭಾಗದಲ್ಲಿ 7ನೇ ಸ್ಥಾನಕ್ಕೆ ಕುಸಿಯಿತು. 1 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳ ಸ್ವಚ್ಛತೆಯ ವಿಭಾಗದಲ್ಲಿ ಮೈಸೂರು ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ (ಸೆಲ್ಫ್ ಸಸ್ಟೈನಬಲ್ ಸಿಟಿ) ಪ್ರಶಸ್ತಿ, ಸಫಾಯಿ ಮಿತ್ರ ಸುರಕ್ಷಾ ಪ್ರಶಸ್ತಿಯಲ್ಲಿ 5ನೇ ರ‌್ಯಾಂಕ್ ಪಡೆದುಕೊಂಡಿತು. ಪೌರಕಾರ್ಮಿಕರ ಸಮವಸ್ತ್ರ ವಿನ್ಯಾಸ ಪ್ರಶಸ್ತಿ ಪಡೆದುಕೊಂಡಿತು. 2016ರಲ್ಲಿ ಬಯಲು ಶೌಚಮುಕ್ತ ನಗರ ಪ್ರಶಸ್ತಿ ಪಡೆದುಕೊಂಡಿತು. 2019, 2020, 2021ರಲ್ಲಿರಲ್ಲಿ ಫೈವ್‌ಸ್ಟಾರ್ ರೇಟಿಂಗ್‌ನೊಂದಿಗೆ ಸತತ ಮೂರು ಬಾರಿ ತ್ಯಾಜ್ಯ ಮುಕ್ತ ನಗರಿ ಪ್ರಶಸ್ತಿ ನಗರ ಮುಡಿಗೇರಿಸಿಕೊಂಡಿತು. ಇದೀಗ ನಗರ 7 ಸ್ಟಾರ್ ರೇಟಿಂಗ್ ಪಡೆಯುವ ಪ್ರಯತ್ನದ ಹಾದಿಯಲ್ಲಿ ದೆ.

ಕಳೆದ ಬಾರಿ ಸಮಗ್ರ ವಿಭಾಗದಲ್ಲಿ ಮೈಸೂರು 11ನೇ ಸ್ಥಾನಕ್ಕೆ ಕುಸಿಯಿತು. ಈ ಬಾರಿ ಟಾಪ್-10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಪ್ರಯತ್ನ ನಡೆಸಲಾಗಿದೆ. ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಕಳೆದ ಬಾರಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದೇವೆ. ಸರ್ಕಾರ ನೀಡಿದ ಮಾರ್ಗದರ್ಶನಕ್ಕೆ ಅನುಗುಣವಾಗಿ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸಿದ್ದೇವೆ. ಹೀಗಾಗಿ ಈ ಬಾರಿ ನಾವು ಮತ್ತೆ ಉತ್ತಮ ಸ್ಥಾನಕ್ಕೆ ಮರಳುವ ವಿಶ್ವಾಸವನ್ನು ಹೊಂದಿದ್ದೇವೆ.
ಡಾ.ನಾಗರಾಜ್,
ನಗರ ಪಾಲಿಕೆ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net